ಬುಧವಾರ, ಜೂನ್ 23, 2021
22 °C
ಕೋವಿಡ್ ಗೆಲ್ಲಲು ತಾಯಿಗೆ ನೆರವಾದ ಐಎಫ್‍ಎಸ್ ಅಧಿಕಾರಿ

ಪಿಪಿಇ ಕಿಟ್ ಧರಿಸಿ ತಾಯಿಯ ಆರೈಕೆ

ನಾಗೇಶ ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ಹೆಸರು ಕೇಳಿಯೇ ಜನ ಬೆಚ್ಚಿ ಬೀಳುತ್ತಿದ್ದಾರೆ. ಅಂಥದ್ದರಲ್ಲಿ ಇಲ್ಲೊಬ್ಬ ಐಎಫ್‍ಎಸ್ ಅಧಿಕಾರಿ ಪಿಪಿಇ ಕಿಟ್ ಧರಿಸಿ ಕೋವಿಡ್‌ ಸೋಂಕಿತ ತಾಯಿಯ ಆರೈಕೆ ಮಾಡಿ, ಕರಳು-ಬಳ್ಳಿ ಸಂಬಂಧಕ್ಕೆ ಯಾವುದೂ ಅಡ್ಡಿಯಾಗದು ಎಂದು ನಿರೂಪಿಸಿದ್ದಾರೆ.

ಚಾಮರಾಜನಗರದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆಗಿರುವ ನಗರದ ಅಲ್ಲಮಪ್ರಭುನಗರದ ಮನೋಜಕುಮಾರ ರೆಡ್ಡಿ ಅವರು ಕೋವಿಡ್ ಸೋಂಕಿನ ವಿರುದ್ಧ ಗೆಲ್ಲಲು 72 ವರ್ಷದ ತಮ್ಮ ತಾಯಿ ಸರೋಜಿನಿ ಅವರಿಗೆ ನೆರವಾಗಿದ್ದಾರೆ.

ತಮ್ಮ ತಾಯಿಯನ್ನು ಕೋವಿಡ್ ಕಾರಣ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪರಿಸ್ಥಿತಿ ಕ್ಲಿಷ್ಟಕರವಾಗಿತ್ತು. ನನಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ರಜೆ ಹಾಕಿ ಬೀದರ್‌ಗೆ ಮರಳಿದೆ. ವೈದ್ಯರ ಅನುಮತಿ ಪಡೆದು, ವಕೀಲರಾದ ಕಿರಿಯ ಸಹೋದರ ವಿಜಯಕುಮಾರ ರೆಡ್ಡಿ ಮತ್ತು ಬ್ರಿಮ್ಸ್‌ನಲ್ಲೇ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಸಂಬಂಧಿ ಸಂತೋಷ ಅವರ ಸಹಕಾರದೊಂದಿಗೆ ಪಿಪಿಇ ಕಿಟ್ ಧರಿಸಿದೆ. ಎಲ್ಲರೂ ತಾಯಿಯ ಆರೋಗ್ಯದ ಮೇಲೆ ನಿಗಾ ವಹಿಸಿದೆವು. ಅವರಲ್ಲಿ ಆತ್ಮವಿಶ್ವಾಸ ತುಂಬಿದೆವು’ ಎಂದು ಮನೋಜಕುಮಾರ ರೆಡ್ಡಿ ತಿಳಿಸಿದರು.

‘ತಾಯಿ ಅವರ ಆರೋಗ್ಯದಲ್ಲಿ ದಿನೇ ದಿನೇ ಚೇತರಿಕೆಯಾಯಿತು. ಕೋವಿಡ್ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿತು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದಾರೆ’ ಎಂದು ಅವರು ಹೇಳಿದರು.

‘ಏಪ್ರಿಲ್ 15ರಂದು ತಾಯಿ ಅವರಿಗೆ ಜ್ವರ ಬಂದಿತ್ತು. ಕೂಡಲೇ ಮಾತ್ರೆ ತೆಗೆದುಕೊಂಡರು. ಜ್ವರ ಮರುದಿನವೂ ಹಾಗೆ ಇದ್ದ ಕಾರಣ ಕೋವಿಡ್ ಪರೀಕ್ಷೆ ಮಾಡಿಸಲಾಗಿ, ವರದಿ ಪಾಸಿಟಿವ್ ಬಂದಿತ್ತು‌‌’ ಎಂದು ವಿವರಿಸಿದರು.

ಸ್ನೇಹಿತರಾದ ಮೈಸೂರಿನ ಡಾ.ಸಂತೃಪ್ತ ಹಾಗೂ ಬೆಂಗಳೂರಿನ ಅನಿರುದ್ಧ ಅವರ ಸಲಹೆ ಮೇರೆಗೆ ತಾಯಿಗೆ ಮನೆಯಲ್ಲೇ ಕೋವಿಡ್ ಚಿಕಿತ್ಸೆ ಅರಂಭಿಸಿದೆವು. ನಾಲ್ಕು ದಿನ ಚೆನ್ನಾಗಿಯೇ ಇದ್ದ ಅವರಿಗೆ ನಂತರ ನಂತರ ಕೆಮ್ಮು ಶುರುವಾಯಿತು. ಅನಂತರ ವಾಂತಿ-ಭೇದಿಯೂ ಆಯಿತು. ಸಿ.ಟಿ ಸ್ಕ್ಯಾನ್ ಮಾಡಿಸಿದಾಗ ಸ್ಕೋರ್ 20/25 ಆಗಿತ್ತು. ಆಮ್ಲಜನಕ ಪ್ರಮಾಣ 85-86ಕ್ಕೆ ಇಳಿಯಿತು’ ಎಂದು ಅವರು ತಿಳಿಸಿದರು.

‘ತಾಯಿಯವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದೆವು. ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಕಾರಣ ಏಪ್ರಿಲ್ 27ಕ್ಕೆ ನಾನು ಬೀದರ್‌ಗೆ ಬಂದೆ. ಸಹೋದರ 11 ದಿನ ಮತ್ತು ನಾನು 8 ದಿನ ಆಸ್ಪತ್ರೆಯಲ್ಲಿ ತಾಯಿಯ ಆರೈಕೆ ಮಾಡಿದೆವು. ಡಾ.ರತಿಕಾಂತ ಸ್ವಾಮಿ, ಡಾ.ಯೋಗೇಶ ಕಾಮಶೆಟ್ಟಿ, ಡಾ.ನಾಗಭೂಷಣ ಅಗತ್ಯ ಚಿಕಿತ್ಸೆ ನೀಡಿದರು. ನಂತರ ತಾಯಿ ಚೇತರಿಸಿಕೊಂಡು ಗುಣಮುಖರಾದರು’ ಎಂದರು.

‘ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದದ್ದು ತಾಯಿ ಅವರನ್ನು ಸೋಂಕಿನ ತೀವ್ರತೆಯಿಂದ ಕಾಪಾ ಡಿತು. ಆತ್ಮಸ್ಥೈರ್ಯ ಸೋಂಕನ್ನು ಸೋಲಿಸುವಲ್ಲಿ ನೆರವಾಯಿತು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು