ಸೋಮವಾರ, ಆಗಸ್ಟ್ 15, 2022
22 °C

ಸೋಯಾ ಬಿತ್ತನೆ ಬೀಜ ಕೊರತೆ: ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಸೋಯಾ ಬೀಜದ ಕೊರತೆಯಿಂದ ಕಂಗೆಟ್ಟು ಹೋಗಿದ್ದ ತಾಲ್ಲೂಕಿನ ಬರದಾಪುರ ರೈತರು ಸೋಮವಾರ ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಾಜೀದ್ ಅವರ ಎದುರು ರೈತರು ಘೋಷಣೆ ಕೂಗಿದರು. ‘ನಮಗೆ ಇಲ್ಲಿಯ ತನಕ ಒಂದೂ ಬ್ಯಾಗ್‌ ಸೋಯಾ ಬೀಜ ಸಿಕ್ಕಿಲ್ಲ’ ಎಂದು ಬರದಾಪುರ ರೈತರು ಆಕ್ರೋಶ ಹೊರ ಹಾಕಿದರು.

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ರೈತರಿಗೆ ಬೀಜ ಸಿಗುತ್ತಿಲ್ಲ. ರೈತರು ನಿತ್ಯ ಕಚೇರಿಗೆ ಅಲೆದರೂ ಯಾರೂ ಕೇಳುತ್ತಿಲ್ಲ’ ಎಂದು ಕಿಡಿ ಕಾರಿದರು.

‘ಅಗತ್ಯವಿರುವಷ್ಟು ಬಿತ್ತನೆ ಬೀಜ ತರಲಾಗಿದೆ. ಆದರೆ ಶೇ 90ರಷ್ಟು ರೈತರು ಸೋಯಾ ಬಿತ್ತನೆ ಮಾಡುತ್ತಿದ್ದಾರೆ. ಹೀಗಾಗಿ ಕೊರತೆ ಬೀಳುತ್ತಿದೆ’ ಎಂದು ಜಂಟಿ ನಿರ್ದೇಶಕಿ ತಾರಾಮಣಿ ಸಮಜಾಯಿಸಿ ನೀಡಿದರು.

‘ಬಿತ್ತನೆ ಬೀಜ ಸಿಗದ ಗ್ರಾಮದ ರೈತರಿಗೆ ಎರಡು ದಿನಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡುವಂತೆ’ ಅವರು ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

‘ಬಿತ್ತನೆ ಬೀಜ ಒಂದು ಊರಿನ ಸಮಸ್ಯೆ ಅಲ್ಲ. ತಾಲ್ಲೂಕಿನ ಎಲ್ಲ ಕಡೆ ರೈತರಿಗೆ ಸೋಯಾ ಬೀಜ ಸಿಕ್ಕಿಲ್ಲ’ ಎಂದು ಮುಖಂಡ ಹಾವಪ್ಪ ದ್ಯಾಡೆ ಜಂಟಿ ನಿರ್ದೇಶಕರ ಗಮನಕ್ಕೆ ತಂದರು.

ಸೋಯಾಬೀನ್‌ ಹೆಚ್ಚಿನ ಬೆಲೆಗೆ ಮಾರಾಟ: ದೂರು

ಭಾಲ್ಕಿ: ‘ಪಟ್ಟಣದಲ್ಲಿ ಸೋಯಾಬೀನ್‌ 30 ಕೆ.ಜಿಯ ಒಂದು ಚೀಲದ ಬೆಲೆ ₹2,370 ಇದೆ. ಆದರೆ, ವಿತರಣಾ ಅಧಿಕಾರಿ ಚಂದ್ರಕಾಂತ ಉಡಬಲೆ ಅವರು ₹100ರಿಂದ ₹300 ಹೆಚ್ಚಿನ ಹಣ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಮರಾಠಾ ಸಮಾಜದ ಪ್ರಮುಖ ವೈಜಿನಾಥ ತಗಾರೆ ಆರೋಪಿಸಿದ್ದಾರೆ.

ಈ ಸಂಬಂಧ ತಹಶೀಲ್ದಾರ್‌ಗೆ ದೂರು ಸಲ್ಲಿಸಿರುವ ಅವರು, ‘ತಾಡಪತ್ರಿ ಬೆಲೆ ₹960, ಸ್ಪಿಂಕ್ಲರ್‌ ಬೆಲೆ ₹2070 ಇದೆ. ಆದರೆ, ಕ್ರಮವಾಗಿ ₹1100, ₹10 ಸಾವಿರದಂತೆ ಮಾರಾಟ ಮಾಡು ತ್ತಿದ್ದಾರೆ. ರೈತರು ಪ್ರಶ್ನಿಸಿದರೆ, ಸರ್ಕಾರದ ದರ ಈ ರೀತಿಯೇ ಇದೆ. ಬೇಕಾದರೆ ತೆಗೆದುಕೊಳ್ಳಿ. ಇಲ್ಲವಾದರೆ ಬಿಡಿ ಎನ್ನುತ್ತಿದ್ದಾರೆ’ ಎಂದು ದೂರಿದ್ದಾರೆ.

‘ಈ ವಿಷಯವನ್ನು ಮೇಲಧಿ ಕಾರಿಗಳು ಗಂಭೀರವಾಗಿ ಪರಿಗಣಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಮುಖರಾದ ಸತೀಶ ಸೂರ್ಯವಂಶಿ, ದತ್ತಾತ್ರಿ ಮೋರೆ, ಸತೀಶ ವಾಡಿಕರ್‌, ಬಾಬುರಾವ್‌ ಜಗತಾಪ, ಇಂದ್ರಜೀತ ವಾಡಿಕರ್‌, ಚಂದ್ರಕಾಂತ ಹೊಂಡೆಕರ್‌, ಗೋಪಿನಾಥ ಸಿಂಧೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು