ಶನಿವಾರ, ಅಕ್ಟೋಬರ್ 16, 2021
20 °C

ಬೀದರ್‌: ಜಿಲ್ಲೆಯಲ್ಲಿ ₹ 2 ಸಾವಿರ ಕೋಟಿ ನಷ್ಟ, ಹೆದ್ದಾರಿ, ಸೇತುವೆಗಳಿಗೆ ಹಾನಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

 ಬೀದರ್‌: ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಅಬ್ಬರಿಸಿದ ಮಳೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಅಷ್ಟೇ ಹಾಳು ಮಾಡಿಲ್ಲ; ಅನೇಕ ಪ್ರಮುಖ ರಸ್ತೆಗಳಿಗೂ ಹಾನಿ ಉಂಟು ಮಾಡಿದೆ. ಹಳ್ಳಕೊಳ್ಳಗಳು ತುಂಬಿ ಹರಿದು ನೀರಿನ ರಭಸಕ್ಕೆ ಸೇತುವೆಗಳು ಹಾಳಾಗಿವೆ.

ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಸರಾಸರಿ 179 ಮಿ.ಮೀ ಮಳೆ ಸುರಿಯುತ್ತದೆ. ಆದರೆ, ಈ ಬಾರಿ ಶೇಕಡ 50 ರಷ್ಟು ಅಧಿಕ ಅಂದರೆ 261 ಮಿ.ಮೀ ಮಳೆ ಸುರಿದಿದೆ. ಸೆಪ್ಟೆಂಬರ್‌ ಕೊನೆಯ ವಾರದಲ್ಲೇ ಅತಿ ಹೆಚ್ಚು ಮಳೆ ಅಬ್ಬರಿಸಿ ಆಸ್ತಿಪಾಸ್ತಿಗೆ ಹಾನಿ ಮಾಡಿದೆ.

ಅತಿಯಾದ ಮಳೆಗೆ ಜಿಲ್ಲೆಯಲ್ಲಿ 24 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ 87 ಕಿ.ಮೀ ಹಾಳಾಗಿದೆ, ರಾಜ್ಯ ಹೆದ್ದಾರಿಯಲ್ಲಿನ 34 ಹಾಗೂ ಜಿಲ್ಲಾ ಮುಖ್ಯ ರಸ್ತೆ ಮೇಲಿನ 26 ಚಿಕ್ಕ ಸೇತುವೆಗಳು ಹಾಳಾಗಿವೆ. ಪ್ರಮುಖ ರಸ್ತೆಗಳು ಕೊಚ್ಚಿಕೊಂಡು ಹೋಗಿ ಅಂದಾಜು ಎರಡು ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ.

ಬೀದರ್ ತಾಲ್ಲೂಕಿನಲ್ಲಿ 13.80 ಕಿ.ಮೀ, ಬಸವಕಲ್ಯಾಣ ತಾಲ್ಲೂಕಿನಲ್ಲಿ 2.30 ಕಿ.ಮೀ, ಔರಾದ್‌ ತಾಲ್ಲೂಕಿನಲ್ಲಿ 4.90 ಕಿ.ಮೀ ಹಾಗೂ ಕಮಲನಗರ ತಾಲ್ಲೂಕಿನಲ್ಲಿ 3 ಕಿ.ಮೀ ರಾಜ್ಯ ಹೆದ್ದಾರಿ ಹಾಳಾಗಿದೆ.
ಬೀದರ್ ತಾಲ್ಲೂಕಿನಲ್ಲಿ 20.50 ಕಿ.ಮೀ, ಹುಲಸೂರು ತಾಲ್ಲೂಕಿನಲ್ಲಿ 1.50 ಕಿ.ಮೀ, ಹುಮನಾಬಾದ್‌ ತಾಲ್ಲೂಕಿನಲ್ಲಿ 54 ಕಿ.ಮೀ, ಔರಾದ್‌ ತಾಲ್ಲೂಕಿನಲ್ಲಿ 8.80 ಕಿ.ಮೀ ಹಾಗೂ ಕಮಲನಗರ ತಾಲ್ಲೂಕಿನಲ್ಲಿ 2.50 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ ಕೆಟ್ಟು ಹೋಗಿದೆ.

ಬೀದರ್ ತಾಲ್ಲೂಕಿನಲ್ಲಿ 4, ಭಾಲ್ಕಿಯಲ್ಲಿ 3, ಬಸವಕಲ್ಯಾಣ ತಾಲ್ಲೂಕಿನಲ್ಲಿ 17, ಹುಲಸೂರು ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ತಲಾ 2, ಹುಮನಾಬಾದ್‌ ಹಾಗೂ ಔರಾದ್‌ ತಾಲ್ಲೂಕುಗಳಲ್ಲಿ ತಲಾ 3 ಸೇತುವೆಗಳು ಸೇರಿ ರಾಜ್ಯ ಹೆದ್ದಾರಿಯಲ್ಲಿನ ಒಟ್ಟು 34 ಸೇತುವೆಗಳು ಹಾನಿಗೀಡಾಗಿವೆ.

ಬೀದರ್ ತಾಲ್ಲೂಕಿನಲ್ಲಿ 12, ಬಸವಕಲ್ಯಾಣ ತಾಲ್ಲೂಕಿನಲ್ಲಿ 1, ಔರಾದ್‌ನಲ್ಲಿ 8 ಹಾಗೂ ಕಮಲನಗರ ತಾಲ್ಲೂಕಿನಲ್ಲಿ 4 ಸೇತುವೆಗಳು ಸೇರಿ ಜಿಲ್ಲಾ ಮುಖ್ಯ ರಸ್ತೆಯಲ್ಲಿನ ಒಟ್ಟು 26 ಸೇತುವೆಗಳು ಶಿಥಿಲಗೊಂಡಿವೆ.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆ ಹಾಗೂ ಸಿ.ಡಿ ದುರಸ್ತಿ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧ ಪಡಿಸಲಾಗಿದೆ. ಒಟ್ಟು ₹ 2,171 ಕೋಟಿ ಬೇಕಾಗಲಿದ್ದು, ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಲಿಂಗರಾಜ ಹೇಳುತ್ತಾರೆ.

ಕೌಡಿಯಾಳ ರಸ್ತೆ ಮಳೆಯಿಂದ ಹಾಳು: ಬಸವಕಲ್ಯಾಣ ನಗರದಿಂದ ಕೌಡಿಯಾಳಕ್ಕೆ ಹೋಗುವ ರಸ್ತೆಯಲ್ಲಿ ದೊಡ್ಡ ದೊಡ್ಡ ತಗ್ಗುಗುಂಡಿಗಳು ಬಿದ್ದಿದ್ದು, ಮಳೆ ನಿಂತು ಕೆಲ ದಿನಗಳಾದರೂ ನೀರು ಹಾಗೆಯೇ ಸಂಗ್ರಹಗೊಂಡಿದೆ. ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತಾಲ್ಲೂಕಿನ ಲಾಡವಂತಿ‌ ನಾಲೆಯ ಸೇತುವೆ, ಇಲ್ಲಾಳ ನಾಲೆಯ‌ ಸೇತುವೆಗಳಿಗೆ ಹಾನಿಯಾಗಿದೆ.

‘ಕೌಡಿಯಾಳ ರಸ್ತೆ ಸುಧಾರಣೆಗೆ ₹ 3 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ. ಕೆಲವೊಂದು ರಸ್ತೆಗಳಲ್ಲಿ ಅಲ್ಲಲ್ಲಿ ತಗ್ಗುಗಳು ಬಿದ್ದಿದ್ದರಿಂದ ಅವುಗಳನ್ನು ತುಂಬುವ ಕಾರ್ಯಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಜೆಇ ತಿಳಿಸಿದ್ದಾರೆ.

ಔರಾದ್: 375 ಕಿ ಮೀ. ರಸ್ತೆ ರಿಪೇರಿಗೆ‌ ಪ್ರಸ್ತಾವ
ಲೋಕೋಪಯೋಗಿ ಇಲಾಖೆ ಔರಾದ್ ಉಪ ವಿಭಾಗದ ವ್ಯಾಪ್ತಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ರಸ್ತೆ ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅತಿವೃಷ್ಟಿಯಿಂದ 163 ಕಿ,ಮೀ ರಾಜ್ಯ ಹೆದ್ದಾರಿ ಪೈಕಿ 133 ಕಿ. ಮೀ ರಸ್ತೆ ಹಾಳಾಗಿದೆ. ಇನ್ನು 259 ಕಿ. ಮೀ. ಜಿಲ್ಲಾ ಹೆದ್ದಾರಿ ಪೈಕಿ 242 ಕಿ. ಮೀ‌ ರಸ್ತೆ ಕೆಟ್ಟು ಹೋಗಿದೆ.

‘ಈ ರಸ್ತೆ ರಿಪೇರಿಗಾಗಿ ಅತಿವೃಷ್ಟಿ ಯೋಜನೆಯಡಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಈ ವಾರ ಕಾಮಗಾರಿ ಶುರುವಾಗಲಿದೆ’ ಎಂದು ಲೋಕೋಪಯೋಗಿ ಇಲಾಖೆಯ ‌ಎಂಜಿನಿಯರ್ ವೀರಶೆಟ್ಟಿ ರಾಠೋಡ್ ಹೇಳುತ್ತಾರೆ.

ಔರಾದ್‌–ಬೀದರ್ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರತಿ ವರ್ಷ ಹೆದ್ದಾರಿ ದುರಸ್ತಿಗೆ ಹಣ ಖರ್ಚು ಮಾಡಲಾಗುತ್ತಿದೆ. ಟೆಂಡರ್‌ ಕರೆದು ತಕ್ಷಣ ಸಿಮೆಂಟ್‌ ರಸ್ತೆ ನಿರ್ಮಾಣ ಮಾಡಬೇಕು. ಅಂತರ ರಾಜ್ಯ ಪ್ರವಾಸಿಗರ ಸಂಚಾರಕ್ಕೂ ಅನುಕೂಲ ಮಾಡಿಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನಿಲ ಜಿರೋಬೆ ಮನವಿ ಮಾಡುತ್ತಾರೆ.

‘ಬೀದರ್‌ ಹಾಗೂ ಔರಾದ್‌ ತಾಲ್ಲೂಕಿನ ಅನೇಕ ಗ್ರಾಮಗಳ ನೂರಾರು ಜನರು ಬೀದರ್–ಔರಾದ್‌ ರಸ್ತೆಯಲ್ಲಿ ಸಂಚರಿಸುತ್ತಾರೆ. ಹೆದ್ದಾರಿ ಪ್ರಾಧಿಕಾರದವರು ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು’ ಎಂದು ಬೀದರ್ ತಾಲ್ಲೂಕಿನ ಮರಖಲ್‌ ಗ್ರಾಮದ ಲೋಕೇಶ ಮರಖಲ್‌ ಹೇಳುತ್ತಾರೆ.

‘ಹುಮನಾಬಾದ್‌ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಪ್ರಮುಖ ರಸ್ತೆಗಳು ಹಾಳಾಗಿಲ್ಲ. ಚಿಟಗುಪ್ಪ ತಾಲ್ಲೂಕಿನಲ್ಲಿ ಒಂದೆರಡು ಕಡೆ ಸ್ವಲ್ಪ ಪ್ರಮಾಣದಲ್ಲಿ ರಸ್ತೆ ಹಾಳಾಗಿದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಶಶಿಧರ ಪಾಟೀಲ.

ಚಿಟಗುಪ್ಪ ತಾಲ್ಲೂಕಿನಲ್ಲಿ ಕಳೆದ ವರ್ಷ ಮಳೆಯಿಂದ ಹಾಳಾದ ನಿರ್ಣಾ –ಮುತ್ತಂಗಿ ನಡುವಿನ ಸೇತುವೆಯಲ್ಲಿ ಗುಂಡಿಗಳು ಬಿದ್ದಿದ್ದವು. ಅದನ್ನು ದುರಸ್ತಿ ಮಾಡಲಾಗಿದೆ. ಮುತ್ತಂಗಿ ಗ್ರಾಮದಿಂದ ಚಾಂಗಲೇರಾ ಗ್ರಾಮಕ್ಕೆ ಹೋಗುವ ರಸ್ತೆ‌ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ. ಉಡಬಾಳ ದಿಂದ ಬೇಮಳಖೇಡಕ್ಕೆ ಸಾಗುವ ವಾಡಿ ಸಮೀಪದ‌ ಸಿಸಿ‌ ರಸ್ತೆ ಸಂಪೂರ್ಣ ಹಾಳಾಗಿದೆ.

ಹುಲಸೂರು ತಾಲ್ಲೂಕಿನಲ್ಲಿ ಹಾದು ಹೋಗಿರುವ ಬೀದರ್– ಲಾತೂರ್ ರಾಷ್ಟ್ರೀಯ ಹೆದ್ದಾರಿ 752ರ ಮಾರ್ಗದಲ್ಲಿನ ಜಾಮಖಂಡಿ ಕೆಳ ಸೇತುವೆ ಹಾಳಾಗಿದೆ.

ಪೂರಕ ಮಾಹಿತಿ: ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಗುಂಡು ಅತಿವಾಳ, ಮಾಣಿಕ ಭುರೆ, ವೀರೇಶ ಮಠಪತಿ, ನಾಗೇಶ ಪ್ರಭಾ, ಮನೋಜಕುಮಾರ ಹಿರೇಮಠ, ಬಸವಕುಮಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು