ಬೂತ್‌ಮಟ್ಟದಲ್ಲಿ ಪಕ್ಷ ಬಲಪಡಿಸಿ: ಡಿ.ಕೆ. ಅರುಣಾ

ಹುಮನಾಬಾದ್: ‘ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಗುರಿಯನ್ನು ಹಾಕಿಕೊಳ್ಳಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ.ಕೆ. ಅರುಣಾ ಕರೆ ನೀಡಿದರು.
ತಾಲ್ಲೂಕಿನ ಮಾಣಿಕನಗರದ ಮಾಣಿಕ್ಯ ಸೌಧದಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ ಪ್ರಥಮ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕೊರೊನಾ ಸೋಂಕಿನಿಂದ ದೇಶಕ್ಕೆ ಸಂಕಟ ಬಂದಿದೆ. ಆದರೆ ನಮ್ಮ ದೇಶದ ವಿಜ್ಞಾನಿಗಳ ಪರಿಶ್ರಮದಿಂದ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಹೀಗಾಗಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಈ ಲಸಿಕೆಗಳನ್ನು ತೆಗೆದುಕೊಳ್ಳಬೇಕು. ಪಕ್ಷವನ್ನು ಬೂತ್‌ಮಟ್ಟದಿಂದ ಬಲಿಷ್ಠಗೊಳಿಸುವ ಕೆಲಸ ಆಗಬೇಕು’ ಎಂದು ಸಲಹೆ ಮಾಡಿದರು.
‘ದೇಶದಲ್ಲಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಜನರ ನಾಡಿಮಿಡಿತ ಅರಿತು ಯೋಜನೆಗಳು ರೂಪಿಸಿ ಕೆಲಸ ಮಾಡುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ ಸೇರಿದಂತೆ ಮತ್ತಿತರ ಕಾರ್ಯಗಳು ಮಾಡುವ ಮೂಲಕ ಜನರ ನೋವಿಗೆ ಸ್ಪಂದಿಸುವ ಕೆಲಸಗಳು ಆಗಿವೆ’ ಎಂದರು.
ರಾಜ್ಯ ಘಟಕದ ಕಾರ್ಯದರ್ಶಿ ಅಶ್ವಥನಾರಾಯಣ ಮಾತನಾಡಿ, ‘ರಾಜ್ಯದಲ್ಲಿ ಕೋವಿಡ್ ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ತಮವಾಗಿ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ ಕೇವಲ ಟೀಕೆ ಮಾಡುವುದರಲ್ಲಿ ಕಾಲ ಕಳಿಯುತ್ತಿದೆ’ ಎಂದರು.
ಸಂಸದ ಭಗವಂತ ಖೂಬಾ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಶರಣು ಸಲಗರ, ಎಂಎಲ್‍ಸಿ ರಘುನಾಥ ಮಲ್ಕಾಪುರೆ, ಪ್ರಮುಖರಾದ ಡಾ.ಶೈಲೆಂದ್ರ ಬೆಲ್ದಾಳೆ, ಬಾಬು ವಾಲಿ, ಡಿ.ಕೆ.ಸಿದ್ರಾಮ, ಈಶ್ವರಸಿಂಗ್ ಠಾಕೂರ್, ಪ್ರಕಾಶ ಖಂಡ್ರೆ, ಗುರುನಾಥ ಜಾಂತಿಕರ್, ಅಶೋಕ ಹೊಕ್ರಾಣೆ, ಸೋಮನಾಥ ಪಾಟೀಲ, ವಿಜಯಕುಮಾರ ಕಾಂಗೆ, ಅಭಿಮನ್ಯು ನಿರಗುಡಿ, ಮಲ್ಲಿಕಾರ್ಜುನ ಕುಂಬಾರ, ಕುಶಾಲ್ ಪಾಟೀಲ ಗಾದಗಿ, ಗುಂಡು ರೆಡ್ಡಿ, ಡಾ.ಸಿದ್ದು ಪಾಟೀಲ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.