ಗುರುವಾರ , ಜನವರಿ 23, 2020
28 °C
ಎನ್‌ಎಸ್‌ಎಸ್‌ ಶಿಬಿರದ ಉಪನ್ಯಾಸ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಸಾಧನೆಯ ಹಂಬಲ ಅಗತ್ಯ: ಪ್ರಾಂಶುಪಾಲ ಡಾ.ಮನ್ಮಥ ಡೋಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ವಿದ್ಯಾರ್ಥಿಗಳಲ್ಲಿ ಸಾಧಿಸಬೇಕು ಎಂಬುವ ಹಂಬಲ ಇದ್ದರೆ, ಸಾಧಿಸುವ ಮಾರ್ಗ ಸುಲಭವಾಗಿರುತ್ತದೆ’ ಎಂದು ಪ್ರಾಂಶುಪಾಲ ಡಾ.ಮನ್ಮಥ ಡೋಳೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಾದಲಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ‘ನಾಲಂದಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉಪನ್ಯಾಸ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಈ ದೇಶದಲ್ಲಿ ಆಗಿ ಹೋದ ಮಹಾತ್ಮರ ಚರಿತ್ರೆ ಅದ್ಭುತವಾಗಿದೆ. ಅದು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.

‘ಬಡತನ ಮನುಷ್ಯನಿಗೆ ಬಹಳ ದೊಡ್ಡ ಪಾಠ ಕಲಿಸುತ್ತದೆ. ವಿದ್ಯಾರ್ಥಿಗಳು ನಾವು ಬಡವರು ಎಂಬ ಕೊರಗು ಇಟ್ಟುಕೊಳ್ಳಬಾರದು. ಧೈರ್ಯದಿಂದ ಮುನ್ನುಗ್ಗಿದರೆ, ಮುಂದೊಂದು ದಿನ ನೀವು ದೇಶದ ದೊಡ್ಡ ವ್ಯಕ್ತಿಯಾಗುತ್ತೀರಿ’ ಎಂದು ಸಲಹೆ ನೀಡಿದರು.

ವಕೀಲ ಸುಧೀರ್ ಮಡಿವಾಳ ಮಾತನಾಡಿ,‘ಇದು ಮನುಷ್ಯ ಮಾಡಿದ ಕೆಟ್ಟ ವ್ಯವಸ್ಥೆ. ಲಂಚ ಕೊಡುವುದು ಮತ್ತು ಪಡೆಯುವುದು ಅಪರಾಧ. ಆದರೂ ಇದು ಎಲ್ಲೆಡೆ ತೀವ್ರವಾಗಿ ಹಬ್ಬುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈ ದೇಶದ ಆಡಳಿತ ವ್ಯವಸ್ಥೆ ಸಂವಿಧಾನದ ಮೇಲೆ ನಿಂತಿದೆ. ಭ್ರಷ್ಟಾಚಾರ ಸೇರಿದಂತೆ ಸಮಾಜದಲ್ಲಿನ ಕೆಟ್ಟ ವ್ಯವಸ್ಥೆಗೆ ಇದರಲ್ಲಿ ಅವಕಾಶವಿಲ್ಲ. ಆದರೂ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್,‘ದೇಶದ ಭವಿಷ್ಯ ವಿದ್ಯಾರ್ಥಿ ಮತ್ತು ಯುವ ಜನಾಂಗದ ಮೇಲೆ ನಿಂತಿದೆ. ಹೀಗಾಗಿ ಇವರ ಮೇಲೆ ಬಹುದೊಡ್ಡ ಹೊಣೆಗಾರಿಕೆ ಇದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ಸಂಗತಿ ಸೂಕ್ಷ್ಮವಾಗಿ ಗಮನಿಸಿ ಆ ನಿಟ್ಟಿನಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.

ಪತ್ರಕರ್ತ ಮನ್ಮಥಪ್ಪ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ನಾಗುರಾವ, ಮುಖ್ಯ ಶಿಕ್ಷಕ ವಿಶ್ವನಾಥ ಗುರುಣೆ ಹಾಗೂ ಉಪನ್ಯಾಸಕ ನಾಗನಾಥ ಬಿರಾದಾರ ಇದ್ದರು.

ಉಪನ್ಯಾಸಕ ಗುಣವಂತ ಮಾಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ನಿರೂಪಿಸಿದರು. ರಾಜಕುಮಾರ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು