ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ನಿಗದಿಪಡಿಸಿ: ರೈತ ಸಂಘ ಆಗ್ರಹ

Published : 30 ಸೆಪ್ಟೆಂಬರ್ 2024, 16:14 IST
Last Updated : 30 ಸೆಪ್ಟೆಂಬರ್ 2024, 16:14 IST
ಫಾಲೋ ಮಾಡಿ
Comments

ಬೀದರ್‌: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ಈ ಸಂಬಂಧ ಸೇನೆಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು 17 ರಿಂದ 18 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಬ್ಬು ಬೆಳೆಯಲಾಗಿದೆ. ಈಗಾಗಲೇ ಬಿ.ಎಸ್.ಎಸ್.ಕೆ ಕಾರ್ಖಾನೆ ಮುಚ್ಚಿದೆ. ಚಿಂಚೋಳಿ ಕಾರ್ಖಾನೆ ಪ್ರಾರಂಭಿಸಲು ಸರ್ಕಾರ ಅನುಮತಿ ಕೊಡುತ್ತಿಲ್ಲ. ಜಿಲ್ಲೆಯಲ್ಲಿ ಉಳಿದ ಕಾರ್ಖಾನೆಗಳಿಗೆ 17ರಿಂದ 18 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಕಾರ್ಖಾನೆಗಳು ಅಕ್ಟೋಬರ್ ತಿಂಗಳಿಂದಲೇ ಕಬ್ಬು ನುರಿಸಲು ಆರಂಭಿಸಬೇಕು. ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಅಮರ್‌ಕುಮಾರ್‌ ಖಂಡ್ರೆಯವರು ಅಧ್ಯಕ್ಷರಾದ ನಂತರ ರೈತರಿಗೆ ಯಾವುದೇ ಪ್ರಕಾರದ ಸಾಲ ಸೌಲಭ್ಯ ಸಿಗುತ್ತಿಲ್ಲ. ಅದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಭಾಲೇಶ್ವರ ಸಕ್ಕರೆ ಕಾರ್ಖಾನೆಯವರು ಇದುವರೆಗೆ ರೈತರ ಬಾಕಿ ಪಾವತಿಸಿಲ್ಲ. ರೈತರು ಕೈಯಿಂದ ಗೊಬ್ಬರ ಹಾಕಿ ಕಷ್ಟ ಪಟ್ಟು ಬೆಳೆಸುತ್ತಾರೆ. ಆದರೆ, ಕಾರ್ಖಾನೆಯವರು ಬಿಲ್‌ ಪಾವತಿಸಲು ವರ್ಷ ಸಮಯ ತೆಗೆದುಕೊಂಡರೆ ಹೇಗೆ ಬದುಕುತ್ತಾರೆ’ ಎಂದು ಪ್ರಶ್ನಿಸಿದರು.

ನರೇಗಾ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಮಕೈಗೊಳ್ಳಬೇಕು. ಆಗಸ್ಟ್‌ ತಿಂಗಳ ಕೊನೆಯ ವಾರ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಸತತ ಮಳೆಗೆ ಉದ್ದು ಬೆಳೆ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳಿಂದ ಸಮೀಕ್ಷೆ ಮಾಡಿಸಿ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ಹೆಸರು, ಉದ್ದು ಮತ್ತು ಸೋಯಾಬಿನ್ ಖರೀದಿ ಕೇಂದ್ರ ಇದುವರೆಗೂ ಆರಂಭಿಸಿಲ್ಲ. ಶೇ 80ರಷ್ಟು ರೈತರು ಈಗಾಗಲೇ ಮಾರುಕಟ್ಟೆಯಲ್ಲಿ ಬಂದ ಬೆಲೆಗೆ ಮಾರಾಟ ಮಾಡಿದ್ದಾರೆ. ಈಗಲಾದರೂ ಆದಷ್ಟು ಬೇಗ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ರಾಜ್ಯ ಪ್ರತಿನಿಧಿ ಶೇಷರಾವ್ ಕಣಜಿ, ಸುಭಾಷೆ ರಗಟೆ, ವಿಶ್ವನಾಥ ಧರಣೆ, ನಾಗಯ್ಯ ಸ್ವಾಮಿ, ಬಾಬುರಾವ ಜೋಳದಾಬಕೆ, ಪ್ರಕಾಶ ಬಾವಗೆ, ಶಿವಾನಂದ ಹುಡುಗೆ, ಪ್ರಭುದಾಸ, ಬಾಬುರಾವ ಬೆಟ್ಟದ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT