ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಪಕ್ಷಿಗಳ ದಾಹ ತಣಿಸುವ ರಿಯಾಜ್

ಮನ್ಮಥಪ್ಪ ಸ್ವಾಮಿ
Published 4 ಮೇ 2024, 8:43 IST
Last Updated 4 ಮೇ 2024, 8:43 IST
ಅಕ್ಷರ ಗಾತ್ರ

ಔರಾದ್: ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತಾಲ್ಲೂಕಿನ ಗಡಿ ಭಾಗದ ಜನ ಜಾನುವಾರುಗಳ ಜತೆ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ.

ತಾಲ್ಲೂಕಿನ ಬಹುತೇಕ ಕೆರೆ, ಕಟ್ಟೆಗಳು ಹಾಗೂ ಇತರೆ ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. ಹೀಗಾಗಿ ಅಲ್ಲಲ್ಲಿ ಕೆರೆ, ಹಳ್ಳ, ಕೊಳ್ಳಗಳ ಬಳಿ ವಾಸವಿರುವ ಪಕ್ಷಿಗಳು ವಲಸೆ ಹೋಗುತ್ತಿವೆ. ಆದರೆ ತಾಲ್ಲೂಕಿನ ಗಡಿ ಗ್ರಾಮ ನಾಗನಪಲ್ಲಿ ಕೆರೆ ಬಳಿ ಗೂಡು ಕಟ್ಟಿದ ಹಕ್ಕಿಗಳು ವಲಸೆ ಹೋಗಲು ಆಗದೆ ಪರದಾಡುತ್ತಿವೆ. ಇದನ್ನು ಗಮನಿಸಿದ ತಾಲ್ಲೂಕಿನ ಪರಿಸರ ಪ್ರೇಮಿ ರಿಯಾಜ್‌ ಪಾಶಾ ಕೊಳ್ಳೂರ್ ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ. ಪಕ್ಷಿಗಳು ಗೂಡು ಕಟ್ಟಿದ ಮರಗಳಿಗೆ ಬಾಟಲ್ ಕಟ್ಟಿ ಅವುಗಳಿಗೆ ನೀರು ಕುಡಿಸುತ್ತಿದ್ದಾರೆ.

‘ತೆಲಂಗಾಣ ಗಡಿಭಾಗದಲ್ಲಿ ಗುಬ್ಬಿ ಸೇರಿದಂತೆ ವಿವಿಧ ಪ್ರಕಾರದ ಪಕ್ಷಿಗಳು ಜಾಸ್ತಿ ಇವೆ. ಪ್ರತಿ ವರ್ಷ ಬೇಸಿಗೆಯಲ್ಲಿ ಅಲ್ಲಿನ ಕೆರೆಯಲ್ಲಿ ಸ್ವಲ್ಪ ನೀರು ಇರುತ್ತಿತ್ತು. ಆದರೆ ಈ ಬಾರಿ ಅಲ್ಲಿ ಹನಿ ನೀರು ಸಿಗುತ್ತಿಲ್ಲ. ಹೀಗಾಗಿ ಪಕ್ಷಿಗಳು ಇರುವ ಜಾಗದ 50 ಕಡೆ ನೀರಿನ ಬಾಟಲ್ ಕಟ್ಟಿದ್ದೇನೆ. ಪ್ರತಿ ಎರಡು ದಿನಕ್ಕೊಮ್ಮೆ ಆ ಬಾಟಲ್‌ಗಳನ್ನು ತುಂಬುತ್ತೇನೆ’ ಎಂದು ಹೇಳುತ್ತಾರೆ ರಿಯಾಜ್‌ ಪಾಶಾ.

‘ನನಗೆ ಮೊದಲಿನಿಂದಲೂ ಪಕ್ಷಿಗಳು ಅಂದರೆ ಪಂಚಪ್ರಾಣ. ನಮ್ಮ ಊರಲ್ಲಿ ಎರಡು ಸಲ ಗಾಯಗೊಂಡ ನವಿಲಿಗೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿದ್ದೇನೆ. ಗಡಿ ಗ್ರಾಮ ನಾಗನಪಲ್ಲಿಯಲ್ಲಿ ಹೆಚ್ಚು ಪಕ್ಷಿಗಳಿರುವುದು ಮೂರು ವರ್ಷದ ಹಿಂದೆಯೇ ಗೊತ್ತಾಗಿದೆ. ಹೀಗಾಗಿ ಅಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುತ್ತಿದ್ದೇನೆ. ಇದರಿಂದ ನನಗೆ ಖುಷಿ ಕೊಡುತ್ತಿದೆ’ ಎನ್ನುತ್ತಾರೆ ಅವರು.

ಕಳೆದ ಕೆಲ ವರ್ಷಗಳಿಂದ ಪರಿಸರ ಜಾಗೃತಿಯಲ್ಲಿ ತೊಡಗಿಸಿಕೊಂಡ ರಿಯಾಜ್‌ ಪಾಶಾ ಮದುವೆಯಂತಹ ಶುಭ ಕಾರ್ಯಗಳಲ್ಲಿ ಉಡುಗೊರೆ ರೂಪದಲ್ಲಿ ಸಸಿಗಳನ್ನು ಕೊಡುತ್ತಾರೆ. ಹೀಗಾಗಿ ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT