ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಮಾಡಿ: ಚಂದ್ರಕಾಂತ ಶಾಹಾಬಾದಕರ್

Last Updated 14 ಜುಲೈ 2021, 16:42 IST
ಅಕ್ಷರ ಗಾತ್ರ

ಬೀದರ್‌: ‘ಕಾಲೇಜು ಉಪನ್ಯಾಸಕರು ಜುಲೈ 15ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾಗಿ ಪಾಠ ಬೋಧನೆ ಮಾಡಬೇಕು. ಫಲಿತಾಂಶ ವೃದ್ಧಿಗೆ ಈಗಿನಿಂದಲೇ ಕಾರ್ಯಪ್ರವೃತ್ತರಾಬೇಕು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಸೂಚಿಸಿದರು.

ಇಲ್ಲಿನ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆನ್‍ಲೈನ್ ಪಾಠ ಬೋಧನೆಯ ಸಿದ್ಧತೆಗೆ ಕರೆದಿದ್ದ
ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.

‘ಪ್ರಸ್ತುತ 2021-22ನೇ ಸಾಲಿನ ಪಿಯು ಶೈಕ್ಷಣಿಕ ವರ್ಷ ಜುಲೈ 15ರಿಂದ ಆರಂಭವಾಗಲಿದೆ. ಪಿಯು ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ನಡೆಸದೆ ಎಂಎಸ್ ಟೀಮ್, ಗೂಗಲ್ ಮೀಟ್, ಝೂಮ್ ಅಥವಾ ಜಿಯೊ ಮೀಟ್‌ ಬಳಸಿ ಆನ್‌ಲೈನ್‌ ಪಾಠಗಳನ್ನು ಬೋಧಿಸಬೇಕು’ ಎಂದರು.

‘ನಿತ್ಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರ ವರೆಗೆ ಒಟ್ಟು ನಾಲ್ಕು ಗಂಟೆ ಅವಧಿಯ ವೇಳಾಪಟ್ಟಿಗನುಗುಣವಾಗಿ ಬೋಧನೆ ಕಾರ್ಯ ನಡೆಯಬೇಕು. ಆನ್‍ಲೈನ್ ಪಾಠಗಳಲ್ಲಿ ಹಾಜರಾದ ಮಕ್ಕಳ ಹಾಜರಾತಿ ಮಾಹಿತಿ ಪ್ರಾಂಶುಪಾಲರಿಗೆ ನೀಡಬೇಕು’ ಎಂದು ತಿಳಿಸಿದರು.

‘ಕಳೆದ ವರ್ಷ ಕೋವಿಡ್‌ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳನ್ನು ಕಲಿಕೆಯತ್ತ ಆಕರ್ಷಣೆ ಮಾಡಲು ಎಲ್ಲ ಸಿಬ್ಬಂದಿ ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ವೃದ್ಧಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಹಣಮಂತರಾವ್ ಮೈಲಾರಿ, ಕಾರ್ಯದರ್ಶಿ ವಿಠ್ಠಲದಾಸ್ ಪ್ಯಾಗೆ, ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರ ಸೂರ್ಯವಂಶಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಪ್ರಾಚಾರ್ಯ ಸಿದ್ದಣ್ಣ ಮಾರಪಳ್ಳಿ, ಎಸ್.ಪ್ರಭು, ವಿಜಯಕುಮಾರ, ಚಂದ್ರಕಾಂತ ಗಂಗಶೆಟ್ಟಿ, ಪ್ರತಿಭಾ ಪಾಟೀಲ, ರಾಜ ಇಮ್ಯಾನುವೆಲ್, ಬಸಲಿಂಗ, ಪ್ರಭುಶೆಟ್ಟಿ ಬುಳ್ಳಾ, ಭೀಮರಾವ್ ಗಿರಿ, ಬಾಲಾಜಿ ಜಾಧವ ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ಹಳ್ಳಿಗಳಿಂದ ಕಾಲೇಜಿಗೆ ಬರುವ ಅನೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ ಇಲ್ಲ. ಹೀಗಾಗಿ ಅಂತಹ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲು ಕಷ್ಟವಾಗಲಿದೆ ಎಂದು ವಿವಿಧ ಕಾಲೇಜುಗಳ ಪ್ರಾಚಾರ್ಯರು ಸಭೆಯ ಗಮನಕ್ಕೆ ತಂದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು ಎಂದು ಪ್ರಾಚಾರ್ಯರು ಮನವಿ ಮಾಡಿಕೊಂಡರು.

ಗ್ರಾಮೀಣ ಪ್ರದೇಶದ ಕೆಲ ಬಡ ಕುಟುಂಬದ ಮಕ್ಕಳ ಹತ್ತಿರ ಸ್ಮಾರ್ಟ್‍ಫೋನ್ ಇಲ್ಲದಿರುವುದರಿಂದ ಮತ್ತು ನೆಟ್‍ವರ್ಕ್ ಸಮಸ್ಯೆಯಿಂದ ಆನ್‍ಲೈನ್ ಪಾಠ ಎಲ್ಲ ಮಕ್ಕಳಿಗೂ ತಲುಪಿಸಲು ಕಷ್ಟವಾಗುತ್ತದೆ ಎಂಬ ವಾಸ್ತವಿಕ ಪರಿಸ್ಥಿತಿಯನ್ನು ಡಿಡಿಪಿಯು ಅವರ ಗಮನಕ್ಕೆ ತಂದರು.

ಸುರೇಶ ಅಕ್ಕಣ್ಣ ಸ್ವಾಗತಿಸಿದರು. ಅಶೋಕ ರಾಜೋಳೆ ನಿರೂಪಿಸಿದರು. ಸಂಗಪ್ಪ ಕೋರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT