ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್‌ ಪರಿವರ್ತಕಗಳು

Last Updated 10 ನವೆಂಬರ್ 2019, 9:47 IST
ಅಕ್ಷರ ಗಾತ್ರ

ಬೀದರ್: ನಗರದಲ್ಲಿ ನೂರಾರು ವಿದ್ಯುತ್‌ ಪರಿವರ್ತಕಗಳಿವೆ. ಆದರೆ, ಎಲ್ಲ ಪರಿವರ್ತಕಗಳ ಸುತ್ತ ತಂತಿ ಬೇಲಿ ಅಳವಡಿಸಿಲ್ಲ. ಸುರಕ್ಷತಾ ಕ್ರಮಗಳನ್ನೂ ಅನುಸರಿಸಿಲ್ಲ. ಕೆಲ ವಿದ್ಯುತ್‌ ಪರಿವರ್ತಕಗಳು ಬಾಗಿದ ವಿದ್ಯುತ್‌ ಕಂಬಗಳಲ್ಲಿ ನೇತಾಡುವಂತೆ ಕಂಡು ಬಂದರೆ, ಇನ್ನು ಕೆಲವು ನೆಲಮಟ್ಟದಲ್ಲಿ ಇವೆ. ಇವು ಜಾನುವಾರುಗಳಿಗೆ ಅಷ್ಟೇ ಅಲ್ಲ ಸಾರ್ವಜನಿಕರಿಗೂ ಅಪಾಯ ತಂಡ್ಡುತ್ತಿವೆ.

ನಗರದಲ್ಲಿರುವ ಅನೇಕ ವಿದ್ಯುತ್‌ ಪರಿವರ್ತಕಗಳ ಸುತ್ತ ಗಿಡಗಂಟಿಗಳು ಬೆಳೆದಿವೆ. ಲಿಂಗರಾಜ ನಗರದಲ್ಲಿ ವಿದ್ಯುತ್‌ ಪರಿವರ್ತಕದ ಮೇಲೆ ಬಳ್ಳಿ ಬೆಳೆದು ವಿದ್ಯುತ್‌ ಪ್ರವಹಿಸುವ ತಂತಿಯ ವರೆಗೆ ತಲುಪಿದೆ. ಇಲ್ಲಿಯ ನಿವಾಸಿಗಳು ಜೆಸ್ಕಾಂ ಕಚೇರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಆದರೆ, ಸಿಬ್ಬಂದಿ ವಿದ್ಯುತ್‌ ಪರಿವರ್ತಕದ ಮೇಲಿನ ಬಳ್ಳಿಯನ್ನು ತೆರವುಗೊಳಿಸಿಲ್ಲ.

ಚೌಬಾರ್‌ ಸಮೀಪದ ಓಣಿಯೊಂದರಲ್ಲಿ ನೆಲದ ಮೇಲೆ ಕಟ್ಟೆಯೊಂದನ್ನು ಇಟ್ಟು  ಅದರ ಮೇಲೆ ವಿದ್ಯುತ್ ಪರಿವರ್ತಕ ಇರಿಸಲಾಗಿದೆ. ಅದರ ಪಕ್ಕದಲ್ಲಿಯೇ ಎರಡು ವಿದ್ಯುತ್‌ ಕಂಬಗಳಿಗೆ ಫ್ಯೂಜ್‌ ಕಂ ಸ್ವಿಚ್‌ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಕಂಬದ ಸುತ್ತ ಕೇಬಲ್‌ಗಳು ನೇತಾಡುತ್ತಿವೆ. ಇದರಲ್ಲಿ ಒಂದು ವಿದ್ಯುತ್‌ ಕಂಬ ರಸ್ತೆಯ ಮೇಲೆಯೇ ಇದೆ. ಮಕ್ಕಳು ಆಟವಾಡುತ್ತ ಇಲ್ಲಿಗೆ ಬಂದು ತಪ್ಪಿ ಕಂಬ ಮುಟ್ಟಿದರೂ ಪ್ರಾಣಾಪಾಯ ತಪ್ಪಿದ್ದಲ್ಲ.

ಚೌಬಾರಾ ಸಮೀಪದ ಓಣಿಗಳ ನಿವಾಸಿಗಳು ವಿದ್ಯುತ್‌ ಕಂಬದ ಬಳಿಯೇ ಕಸ ಎಸೆಯುತ್ತಿದ್ದಾರೆ. ಕಸ ಸ್ವಚ್ಛಗೊಳಿಸಲು ಬರುವ ಪೌರ ಕಾರ್ಮಿಕರಿಗೂ ಇದರಿಂದ ಅಪಾಯ ಕಾದಿದೆ. ಪೌರ ಕಾರ್ಮಿಕರು ಇಲ್ಲಿಯ ನಿವಾಸಿಗಳಿಗೆ ತಿಳಿವಳಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಇಲ್ಲಿಯ ನಿವಾಸಿಗಳು ಸ್ವಚ್ಛತೆಗೆ ಸಹಕರಿಸುತ್ತಿಲ್ಲ.

ಕುಸುಂಗಲ್ಲಿಯಲ್ಲಿ ಕೈಗೆಟಕುವ ಅಂತರದಲ್ಲೇ ವಿದ್ಯುತ್ ಪರಿವರ್ತಕ ಇದೆ. ಇಲ್ಲಿ ಮಕ್ಕಳು ಯಾವಾಗಲೂ ಆಟವಾಡುತ್ತಿರುತ್ತಾರೆ. ಅಪ್ಪಿತಪ್ಪಿ ಸ್ಪರ್ಶಿಸಿದರೆ ಅವಘಡ ಸಂಭವಿಸುವುದು ಖಚಿತ. ವಿದ್ಯುತ್‌ ಪರಿವರ್ತಕದ ಸುತ್ತ ತಡೆಗೋಡೆ ಅಥವಾ ತಂತಿಬೇಲಿ ಕೂಡ ಇಲ್ಲ.

ಶಹಾಗಂಜ್‌ನ ಮಿಲನ್‌ ಫಂಕ್ಷನ್‌ ಹಾಲ್ ಬಳಿಯ ವಿದ್ಯುತ್ ಪರಿವರ್ತಕದ ಸುತ್ತ ಕುರಿ, ಮೇಕೆಗಳು ಅಲೆದಾಡುತ್ತಿರುತ್ತವೆ. ಅಲ್ಲಿ ಬೇಲಿ ನಿರ್ಮಿಸಿಲ್ಲ. ದರ್ಜಿಗಲ್ಲಿಯಲ್ಲಿ ವಿದ್ಯುತ್ ಪರಿವರ್ತಕದ ಸುತ್ತ ತಂತಿಬೇಲಿಯನ್ನು ಅಳವಡಿಸಿದರೂ ಅಲ್ಲಿನ ನಿವಾಸಿಗಳು ಕಸ ಎಸೆದು ಮಾಲಿನ್ಯ ಸೃಷ್ಟಿಸಿದ್ದಾರೆ. ವಿದ್ಯಾನಗರದ ಪರಿವರ್ತಕಗಳ ಸ್ಥಿತಿಯೂ ಹೀಗೆಯೇ ಇದೆ.

ವಿದ್ಯಾನಗರ, ಮೈಲೂರು ಕ್ರಾಸ್‌, ಸಿದ್ಧರಾಮೇಶ್ವರ ಕಾಲೊನಿಯಲ್ಲಿರುವ ವಿದ್ಯುತ್‌ ಪರಿವರ್ತಕಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಾನುವಾರುಗಳು ಹುಲ್ಲು ಮೇಯುತ್ತ ವಿದ್ಯುತ್‌ ಪರಿವರ್ತಕದ ಬಳಿ ಹೋಗಿ ವಿದ್ಯುತ್‌ ಪ್ರವಹಿಸಿದ ತಂತಿ ತಗುಲಿ ಮೃತಪಟ್ಟ ಉದಾಹರಣೆಗಳು ಇವೆ.

ಸರಸ್ವತಿ ಪ್ರಾಥಮಿಕ, ಪ್ರೌಢ ಶಾಲೆಗೆ ಹೋಗುವ ಮಾರ್ಗದಲ್ಲಿ ಎರಡು ಕಂಬಗಳ ಮಧ್ಯೆ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಪರಿವರ್ತಕದ ಸುತ್ತ ಗಿಡಗಂಟಿಗಳು ಬೆಳೆದಿವೆ. ಸಾಯಿ ಕಾಲೊನಿಗೆ ಹೋಗುವ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕದ ಮೇಲೆ ಬಳ್ಳಿ ಬೆಳೆದಿದೆ. ಜ್ಯೋತಿ ಕಾಲೊನಿಗೆ ಹೋಗುವ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕದ ಸುತ್ತ ಬೇಲಿ ನಿರ್ಮಿಸಿಲ್ಲ. ಜಾನುವಾರುಗಳು ಮೇಯಲು ಬರುವುದರಿಂದ ಇಲ್ಲಿ ಅಪಾಯ ಕಾದಿದೆ.

ಚಿದ್ರಿ ರಸ್ತೆಯಲ್ಲಿ ವಿಶಾಲ್‌ ಫಂಕ್ಷನ್‌ ಹಾಲ್ ಬಳಿ ರಸ್ತೆಗೆ ಹೊಂದಿಕೊಂಡೇ ಒಂದು ವಿದ್ಯುತ್‌ ಪರಿವರ್ತಕ ಇದೆ. ಅರ್ಥಿಂಗ್‌ ಕೊಟ್ಟಿರುವ ತಂತಿಯಲ್ಲೂ ವಿದ್ಯುತ್‌ ಪ್ರವಹಿಸುತ್ತದೆ. ಇಲ್ಲಿ ಆಗಾಗ ಕೇಬಲ್‌ಗಳು ಸುಡುವುದು ಸಾಮಾನ್ಯ. ವಿದ್ಯುತ್‌ ಪರಿವರ್ತಕದ ಸುತ್ತ ತಂತಿ ಬೇಲಿ ನಿರ್ಮಿಸುವಂತೆ ಮನವಿ ಮಾಡಿದ್ದೇವೆ. ಆದರೆ, ಜೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಂಗಡಿಗಳ ಮಾಲೀಕರು ಹೇಳುತ್ತಾರೆ.

ನಿಯಮಾವಳಿ ಪ್ರಕಾರ ಪರಿವರ್ತಕಗಳನ್ನು ಕನಿಷ್ಠ ಎಂಟು ಅಡಿ ಎತ್ತರದಲ್ಲಿ ಸಿಮೆಂಟ್‌ ಗೋಡೆಯ ಮೇಲೆ ಅಳವಡಿಸಬೇಕು. ಜನ, ಜಾನುವಾರುಗಳಿಗೆ ವಿದ್ಯುತ್ ಸ್ಪರ್ಶಿಸದಂತೆ ತಂತಿ ಬೇಲಿ ನಿರ್ಮಿಸಬೇಕು. ಆದರೆ ನಗರದ ಬಹುತೇಕ ಬಡಾವಣೆಗಳಲ್ಲಿ ನಿಯಮ ಪಾಲನೆ ಮಾಡಿರುವುದು ಕಂಡು ಬರುವುದಿಲ್ಲ. ಕೆಲ ಕಾಲೊನಿಗಳಲ್ಲಿ ಜೋತು ಬಿದ್ದ ತಂತಿಗಳು ಪರಸ್ಪರ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿಯಿಂದ ಪರಿವರ್ತಕ ಸುಟ್ಟರೂ ಅಲ್ಲಿ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ತಾತ್ಕಾಲಿಕ ತಂತಿ ಜೋಡಣೆ ಮಾಡಿ ವಿದ್ಯುತ್‌ ಪೂರೈಕೆ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

ಪಾಲಕರ ನಿಗಾ ಇಲ್ಲದಾಗ ಮಕ್ಕಳು ಆಡವಾಡುತ್ತ ವಿದ್ಯುತ್‌ ಸ್ಪರ್ಶಿಸಿದಲ್ಲಿ ಜೀವಹಾನಿಯಾಗುವ ಸಾಧ್ಯತೆ ಇದೆ. ಮಕ್ಕಳು ಓಡಾಡುವ ಪ್ರದೇಶವನ್ನು ಸೂಕ್ಷ್ಮವಲಯ ಎಂದು ಗುರುತಿಸಿ ಜೆಸ್ಕಾಂ ಅಧಿಕಾರಿಗಳು ಬೇಲಿ ನಿರ್ಮಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಜೆಸ್ಕಾಂ ಸಿಬ್ಬಂದಿ ಏನು ಮಾಡಬೇಕು?
* ವಿದ್ಯುತ್ ಪರಿವರ್ತಕದ ಸುತ್ತ ತಂತಿ ಬೇಲಿ ನಿರ್ಮಿಸಬೇಕು.
* ಅಪಾಯದ ಎಚ್ಚರಿಕೆ ನೀಡುವ ಫಲಕ ತೂಗು ಹಾಕಬೇಕು.
* ವಿದ್ಯುತ್ ಪರಿವರ್ತಕದ ಸುತ್ತ ಗಿಡಗಂಡಿ ಬೆಳೆಯದಂತೆ ನೋಡಿಕೊಳ್ಳಬೇಕು
* ತುಕ್ಕು ಹಿಡಿದ ತಂತಿಬೇಲಿ ತೆರವುಗೊಳಿಸಬೇಕು.
* ವಿದ್ಯುತ್ ಪರಿವರ್ತಕ ನೆಲಮಟ್ಟದಲ್ಲಿ ಇರದಂತೆ ಮಾಡಬೇಕು

ಸಾರ್ವಜನಿಕರು ಏನು ಮಾಡಬೇಕು?
* ವಿದ್ಯುತ್ ಪರಿವರ್ತಕದ ಸುತ್ತ ಕಸ ಎಸೆಯುವುದನ್ನು ನಿಲ್ಲಿಸಬೇಕು.
* ವಿದ್ಯುತ್ ಪರಿವರ್ತಕದ ಬಳಿ ಕುರಿ, ಮೇಕೆಗಳನ್ನು ಕಟ್ಟಬಾರದು.
* ಮಕ್ಕಳು ಪರಿವರ್ತಕದ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಬೇಕು.
* ಅಪಾಯ ಇದ್ದರೆ ತಕ್ಷಣ ಜೆಸ್ಕಾಂಗೆ ಮಾಹಿತಿ ನೀಡಬೇಕು.
* ಸಮಸ್ಯೆ ಗಂಭೀರವಾಗಿದ್ದರೆ ಲಿಖಿತ ದೂರು ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT