ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಹೆಚ್ಚುತ್ತಿದೆ ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ!

Published 20 ಡಿಸೆಂಬರ್ 2023, 5:40 IST
Last Updated 20 ಡಿಸೆಂಬರ್ 2023, 5:40 IST
ಅಕ್ಷರ ಗಾತ್ರ

ಬೀದರ್‌: ಪ್ರಸಕ್ತ ಸಾಲಿನಲ್ಲಿ ಬೀದರ್‌ ಜಿಲ್ಲೆಯಲ್ಲಿ 1,143 ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿದ್ದಾರೆ.

ಇದರಲ್ಲಿ 14 ವರ್ಷದಿಂದ 18 ವರ್ಷದವರು ಸೇರಿದ್ದಾರೆ. 14 ವರ್ಷ ವಯಸ್ಸಿನ 16, 15 ವರ್ಷದ 24, 16 ವರ್ಷ ವಯಸ್ಸಿನ 65, 17 ವರ್ಷದ 207, 18 ವರ್ಷದ 831 ಬಾಲಕಿಯರು ಸೇರಿದ್ದಾರೆ.

2023ನೇ ಸಾಲಿನ ಜನವರಿಯಿಂದ ನವೆಂಬರ್‌ ಅಂತ್ಯದ ವರೆಗಿನ ಮಾಹಿತಿ ಸಂತಾನಭಿವೃದ್ಧಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್‌) ಸಂಬಂಧಿತ ಸರ್ಕಾರದ ಅಧಿಕೃತ ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ. ಇನ್ನಷ್ಟೇ ಡಿಸೆಂಬರ್‌ ತಿಂಗಳ ಮಾಹಿತಿ ಸೇರಬೇಕಿದೆ. ಆದಕಾರಣ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಅಪ್ರಾಪ್ತೆಯರು ಬಾಲ್ಯಾವಸ್ಥೆಯಲ್ಲೇ ಗರ್ಭಿಣಿಯರಾಗುತ್ತಿರುವ ಮೊದಲ ಹತ್ತು ಜಿಲ್ಲೆಗಳಲ್ಲಿ ಬೀದರ್‌ ಜಿಲ್ಲೆ ಕೂಡ ಇರುವುದು ಸಹಜವಾಗಿಯೇ ಕಳವಳಕ್ಕೆ ಕಾರಣವಾಗಿದೆ. ಒಂದೆಡೆ ಅಪೌಷ್ಟಿಕತೆ ಸಮಸ್ಯೆ ಕಾಡುತ್ತಿದೆ. ಅದರ ನಡುವೆ ಬಾಲಕಿಯರು ವಯಸ್ಸಿಗೂ ಪೂರ್ವದಲ್ಲೇ ಗರ್ಭಿಣಿಯರಾಗುತ್ತಿರುವುದು ಚಿಂತೆಗೀಡು ಮಾಡಿದೆ. 

ಅಪ್ರಾಪ್ತರು ಗರ್ಭಿಣಿಯರಾದರೆ ಏನಾಗುವುದು?

ಬಡ ಮತ್ತು ಕೆಳ ಮಧ್ಯಮ ವರ್ಗದ ಬಾಲಕಿಯರನ್ನೇ ಬೇಗ ಮದುವೆ ಮಾಡುತ್ತಿರುವುದರಿಂದ ಅಪ್ರಾಪ್ತೆಯರು ಸಣ್ಣ ವಯಸ್ಸಿನಲ್ಲಿ ತಾಯಂದಿರು ಆಗುತ್ತಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಉನ್ನತ ವಿದ್ಯಾಭ್ಯಾಸ ಕೊಡಿಸಲಾಗದೆ ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತಿ ಪಡೆದರಾಯಿತು ಎಂಬ ಪೋಷಕರ ಧೋರಣೆಯು ಇದಕ್ಕೆ ಪ್ರಮುಖ ಕಾರಣವೆಂದು ಗೊತ್ತಾಗಿದೆ.

ಆದರೆ, ವಯಸ್ಸಿಗೂ ಮುನ್ನವೇ ಮದುವೆ ಮಾಡುತ್ತಿರುವುದರಿಂದ ಬಾಲಕಿಯರು ಬೇಗ ತಾಯಂದಿರಾಗುತ್ತಿರುವ ಕಾರಣದಿಂದ ಅವರ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಅಡ್ಡಪರಿಣಾಮಗಳು ಬೀರುತ್ತಿವೆ. ಇಷ್ಟೇ ಅಲ್ಲ, ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ನವಜಾತ ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುತ್ತಾರೆ ವೈದ್ಯರು.

18 ವರ್ಷ ವಯಸ್ಸಿನೊಳಗಿನವರು ಆಗತಾನೇ ಮಾನಸಿಕ ಮತ್ತು ದೈಹಿಕವಾಗಿ ಬೆಳವಣಿಗೆ ಹೊಂದುತ್ತಿರುತ್ತಾರೆ. ಇಂತಹ ಸಂದರ್ಭದೊಳಗೆ ಅವರನ್ನು ಬಲವಂತವಾಗಿ ವಿವಾಹ ಮಾಡುತ್ತಿರುವುದರಿಂದ ರಕ್ತಹೀನತೆ, ನರದೌರ್ಬಲ್ಯ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ರೀತಿ ಆಗುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಕೂಡ ಉತ್ತಮವಾಗಿರುವುದಿಲ್ಲ. ಸದೃಢ ಸಮಾಜದ ಆಶಯ ಈಡೇರುವುದಿಲ್ಲ ಎಂದರು.

‘ನಮ್ಮ ದೇಶದ ಕಾನೂನಿನ ಪ್ರಕಾರ 18 ವರ್ಷದೊಳಗಿನ ಬಾಲಕಿಯರನ್ನು ಒತ್ತಾಯಪೂರ್ವಕವಾಗಿ ವಿವಾಹ ಮಾಡುತ್ತಿರುವುದು ದೊಡ್ಡ ಅಪರಾಧ. ಇದನ್ನು ತಡೆಯುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಏನೂ ಗೊತ್ತಿಲ್ಲದ ಮುಗ್ಧರನ್ನು ವೈವಾಹಿಕ ಬಂಧನಕ್ಕೆ ಒಳಪಡಿಸಿ ಸಣ್ಣ ವಯಸ್ಸಿನಲ್ಲಿ ಅವರು ಗರ್ಭಿಣಿಯರಾಗುತ್ತಿರುವುದರಿಂದ ಅನೇಕ ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತಿವೆ. ಇದರಿಂದ ಸಮಾಜ ಕೂಡ ಆರೋಗ್ಯಕರವಾಗಿ ಇರುವುದಿಲ್ಲ. ಆದಕಾರಣ ಆರೋಗ್ಯ ಇಲಾಖೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡು ಬಾಲ್ಯವಿವಾಹಕ್ಕೆ ಕಡಿವಾಣ ಹಾಕಬೇಕಿದೆ’ ಎನ್ನುತ್ತಾರೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT