ಶನಿವಾರ, ಜನವರಿ 29, 2022
22 °C
ಕೇಂದ್ರ ಸಚಿವ ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ಸಭೆ

ಟೆಂಡರ್‌ ಹಂಚಿಕೆ ಪಾರದರ್ಶಕತೆ ಪರಿಶೀಲನೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘15ನೇ ಹಣಕಾಸು ಅನುದಾನದಲ್ಲಿ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಮೂಲಕ ಕಾಮಗಾರಿಗಳಿಗೆ ನೀಡಲಾದ ಟೆಂಡರ್‌ ಪ್ರಕ್ರಿಯೆಗಳ ಸಮಗ್ರ ಪರಿಶೀಲನೆ ಹಾಗೂ ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ (ದಿಶಾ) ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.

‘ಕಾಮಗಾರಿ ಟೆಂಡರ್‌ ಹಂಚಿಕೆ ವಿಷಯದಲ್ಲಿ ಕೆಲ ದೂರುಗಳು ಬಂದಿವೆ. ಹೀಗಾಗಿ ನಿಯಮಾವಳಿ ಪ್ರಕಾರ ಟೆಂಡರ್‌ ಕರೆಯಲಾಗಿದೆಯೇ? ಟೆಂಡರ್‌ ಹಂಚಿಕೆ ಪಾರದರ್ಶಕವಾಗಿ ನಡೆದಿದೆಯೇ? ಎನ್ನುವ ಕುರಿತು ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿ, ‘ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಇದೀಗ ಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಿಗೆ ವಿಧಾನ ಪರಿಷತ್ ಸದಸ್ಯರೂ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಅಧಿಕಾರಿಗಳು ನಮ್ಮ ಗಮನಕ್ಕೆ ತರದೇ ಕ್ರಿಯಾ ಯೋಜನೆ ಸಿದ್ಧಪಡಿಸಿ ತಾವೇ ಅನುಮೋದನೆ ನೀಡಿ ಕಾಮಗಾರಿಗಳಿಗೆ ಮಂಜೂರಾತಿ ಪಡೆದಿದ್ದಾರೆ’ ಎಂದು ದೂರಿದರು.

‘ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಕ್ರಿಯಾ ಯೋಜನೆ ಹೇಗೆ ಸಿದ್ಧಪಡಿಸಲಾಯಿತು. ಏಳು ಏಜೆನ್ಸಿಗಳಿಗೆ ಅನುಮತಿ ಕಲ್ಪಿಸಿ ಕೊನೆಯ ಕ್ಷಣದಲ್ಲಿ ನಾಲ್ವರಿಗೆ ಹೇಗೆ ಕಾಮಗಾರಿ ಒಪ್ಪಿಸಲಾಯಿತು ಎನ್ನುವ ಗೊಂದಲವಿದೆ. ಈ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲರಾಮ್‌ ಮಾತನಾಡಿ, ‘14ನೇ ಹಣಕಾಸು ಅನುದಾನದಲ್ಲಿ 1,303 ಕಾಮಗಾರಿಗಳ ಪೈಕಿ 1,126 ಕಾಮಗಾರಿಗಳು ಪೂರ್ಣವಾಗಿವೆ. ಒಟ್ಟು ₹95 ಕೋಟಿ ಅನುದಾನದಲ್ಲಿ ₹ 75 ಕೋಟಿ ಬಳಕೆಯಾಗಿದೆ. ಉಳಿದ ಕಾಮಗಾರಿಗಳಿಗೆ ಒಟ್ಟು 47 ಟೆಂಡರ್‌ ಕರೆಯಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಯೋಜನಾ ನಿರ್ದೇಶಕರ ಹುದ್ದೆ ಖಾಲಿ ಇದ್ದ ಕಾರಣ ಟೆಂಡರ್ ಕರೆದಿರಲಿಲ್ಲ. ಕೆಲ ಕಾಮಗಾರಿಗಳು ಹಾಗೆಯೇ ಉಳಿದಿದ್ದವು. 15ನೇ ಹಣಕಾಸು ಅನುದಾನದಲ್ಲಿ 386 ಕಾಮಗಾರಿಗಳ ಪೈಕಿ 143 ಕಾಮಗಾರಿಗಳು ಪೂರ್ಣಗೊಂಡಿವೆ. ಶೇಕಡ 36 ರಷ್ಟು ಪ್ರಗತಿಯಾಗಿದೆ’ ಎಂದು ತಿಳಿಸಿದರು.

‘ಬಸವಕಲ್ಯಾಣದಲ್ಲೂ ನಗರಸಭೆ ಇದೆ. ಯೋಜನಾ ನಿರ್ದೇಶಕರು ಬಸವಕಲ್ಯಾಣಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ನನ್ನೊಂದಿಗೆ ಚರ್ಚೆ ನಡೆಸಿಲ್ಲ’ ಎಂದು ಶಾಸಕ ಶರಣು ಸಲಗರ ಹೇಳಿದರು.

ನಗರೋತ್ಥಾನ ಯೋಜನೆಯಲ್ಲಿ 2018–2019ರಲ್ಲಿ ಶಹಾಪುರ ಗೇಟ್‌ನಿಂದ– ನೌಬಾದ್‌ ವರೆಗಿನ ರಸ್ತೆ ನಿರ್ಮಾಣಕ್ಕೆ ಅನುದಾನ ಬಂದರೂ ಕಾಮಗಾರಿಗೆ ಒ‍ಪ್ಪಿಗೆ ದೊರಕಿಲ್ಲ. ಇದಕ್ಕೆ ಏನು ಕಾರಣ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಅಮೃತ್ ಯೋಜನೆಯಲ್ಲಿ ಐದು ಉದ್ಯಾನಗಳ ಅಭಿವೃದ್ಧಿಗೆ ಅನುದಾನ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನಿರಂತರ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಕಾಮಗಾರಿಯ ಪ್ರಗತಿಯೂ ತೃಪ್ತಿದಾಯಕವಾಗಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್‌ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರತಿಕಾಂತ ಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಇದ್ದರು.

ಆರೋಗ್ಯ ಇಲಾಖೆ ಕಾರ್ಯವೈಖರಿಗೆ ಸಚಿವರ ಅಸಮಾಧಾನ

ಬೀದರ್: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಯಂತ್ರಗಳು ಇದ್ದರೂ ಸಾರ್ವಜನಿಕರಿಗೆ ಸರಿಯಾಗಿ ಸೇವೆ ಕೊಡದಿರುವ ಬಗ್ಗೆ ಕೇಂದ್ರ ಸಚಿವ ಭಗವಂತ ಖೂಬಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಅಧೀನದಲ್ಲೇ ಇದೆ. ಸಮಗ್ರವಾದ ಮಾಹಿತಿ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಎಷ್ಟು ಡಯಾಲಿಸಿಸ್‌ ಯಂತ್ರಗಳು ಇವೆ. ಇದರಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತಿವೆ. ಡಯಾಲಿಸಿಸ್‌ ಮಾಡಿಸಿಕೊಳ್ಳಲು ಎಷ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಎಷ್ಟು ಜನರಿಗೆ ಸೌಲಭ್ಯ ಒದಗಿಸಲಾಗಿದೆ ಎನ್ನುವ ಪ್ರಶ್ನೆಗೆ ಅಧಿಕಾರಿಗಳು ಸರಿಯಾದ ಉತ್ತರ ನೀಡಲಿಲ್ಲ.

ಜನರಿಗೆ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಕರ್ತವ್ಯ. ಅಧಿಕಾರಿಗಳ ಬಳಿಯೇ ಸರಿಯಾದ ಮಾಹಿತಿ ಇಲ್ಲದಿದ್ದರೆ ಹೊಸ ಯೋಜನೆಗಳನ್ನು ಜಿಲ್ಲೆಗೆ ಹೇಗೆ ತರಲು ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದರು.

ಜಿಲ್ಲಾ ನೋಡೆಲ್‌ ಅಧಿಕಾರಿ ಡಾ.ಮಹೇಶ ಬಿರಾದಾರ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 9 ಡಯಾಲಿಸಿಸ್‌ ಯಂತ್ರಗಳಿವೆ. ಎರಡು ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ’ ಎಂದು ತಿಳಿಸಿದರು. ಬ್ರಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಮಾತನಾಡಿ, ‘ಒಂದು ತಿಂಗಳ ಅವಧಿಯಲ್ಲಿ 150 ಜನರ ಡಯಾಲಿಸಿಸ್‌ ಮಾಡಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಎಂಸಿಐ ಬ್ರಿಮ್ಸ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಉನ್ನತ ಮಟ್ಟದಲ್ಲಿ ಪರಿಶ್ರಮ ಪಟ್ಟು ಪಿಜಿ ಕೋರ್ಸ್‌ಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದೇವೆ. ಆದರೆ, ಅಧಿಕಾರಿಗಳಿಗೆ ಗಂಭೀರತೆಯೇ ಇಲ್ಲವಾಗಿದೆ’ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ ಮಾತನಾಡಿ, ‘ಜಿಲ್ಲೆಯಲ್ಲಿ ಲಿಂಗಾನುಪಾತ ಅಂತರ ಕಡಿಮೆಯಾಗಿದೆ. ಒಂದು ಸಾವಿರ ಪುರುಷರಿಗೆ 841 ಮಹಿಳೆಯರು ಇದ್ದಾರೆ. ರಾಷ್ಟ್ರೀಯ ಲಿಂಗಾನುಪಾತ 1000; 935 ಹಾಗೂ ರಾಜ್ಯದ ಲಿಂಗಾನುಪಾತ 1000; 960 ಇದೆ’ ಎಂದು ತಿಳಿಸಿದರು.

‘ಲಿಂಗಾನುಪಾತ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಎಲ್ಲ ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ ಲಿಂಗ ಪತ್ತೆ ನಿಷೇಧ ಹಾಗೂ ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಉಲ್ಲೇಖಿಸಿ ನೋಟಿಸ್‌ ಬೋರ್ಡ್‌ಗಳನ್ನು ಹಾಕಲಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.