ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪಕ್ಕೆ 70 ಎಕರೆ ಜಾಗ ಲಭ್ಯ

ಮಂಡಳಿ ವಿಶೇಷಾಧಿಕಾರಿ ಡಾ.ಎಚ್.ಆರ್.ಮಹಾದೇವ ಮಾಹಿತಿ
Last Updated 12 ನವೆಂಬರ್ 2020, 5:48 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ನೂತನ ಅನುಭವ ಮಂಟಪದ ನಿರ್ಮಾಣಕ್ಕೆ ತ್ರಿಪುರಾಂತ ಕೆರೆ ದಂಡೆಯಲ್ಲಿನ ಈಗಿರುವ ಮಂಟಪದ ಸುತ್ತಲಿನಲ್ಲಿ 70 ಎಕರೆ ಜಮೀನು ಲಭ್ಯವಿದೆ’ ಎಂದು ಬಸವಕಲ್ಯಾಣ ಅಭಿ ವೃದ್ಧಿ ಮಂಡಳಿ ವಿಶೇಷಾಧಿಕಾರಿ ಡಾ.ಎಚ್.ಆರ್.ಮಹಾದೇವ ತಿಳಿಸಿದ್ದಾರೆ.

ಅವರು ಬುಧವಾರ ಇಲ್ಲಿಗೆ ಭೇಟಿ ನೀಡಿ ಶರಣ ಸ್ಮಾರಕಗಳನ್ನು ಪರಿಶೀಲಿಸಿದ ನಂತರ ಪತ್ರಕರ್ತ ರೊಂದಿಗೆ ಮಾತನಾಡಿದರು.

‘ಈಗಿನ ಅನುಭವ ಮಂಟಪದ ಹಕ್ಕುದಾರರಾಗಿರುವ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯವರು ತಮ್ಮ ಜಾಗದ ಹಕ್ಕು ಪತ್ರಗಳನ್ನು ಈಗಾಗಲೇ ಒಪ್ಪಿಸಿದ್ದಾರೆ. ಸುತ್ತಲಿನಲ್ಲಿರುವ ಹೊಳಕುಂದೆ ಕುಟುಂಬದವರು ಹಾಗೂ ಇತರರು ಕೂಡ ಜಮೀನು ನೀಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಗತ್ಯ ಜಾಗ ದೊರಕುತ್ತಿರುವ ಕಾರಣ ಇಲ್ಲಿಯೇ ಮಂಟಪ ನಿರ್ಮಾಣ ಮಾಡಲಾಗುತ್ತದೆ’ ಎಂದರು.

‘ಲಿಂಗ, ಜಾತಿ, ವರ್ಗ ಭೇದ ತೊಡೆದು ಹಾಕಲು ಯತ್ನಿಸಿದ ಬಸವಾದಿ ಶರಣರ ಈ ಸಂದೇಶ ಜಗತ್ತಿಗೆ ಹೋಗಬೇಕಾಗಿದೆ. ಆದ್ದರಿಂದ ಅನುಭವ ಮಂಟಪವನ್ನು ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವಾಗುವಂತೆ ರೂಪಿಸಲಾಗುತ್ತದೆ. ಅದಕ್ಕಾಗಿ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ. ಈಚೆಗೆ ನನ್ನನ್ನು ಮಂಡಳಿಯ ವಿಶೇಷಾಧಿಕಾರಿಯನ್ನಾಗಿ ನೇಮಿಸಿ ಕೆಲ ಜವಾಬ್ದಾರಿಯನ್ನು ನೀಡಿದ್ದು ಅಗತ್ಯ ದಾಖಲೆ ಪಡೆದು ಭೊಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲ ಸಮಯ ಬೇಕಾಗುತ್ತದೆ. ಮಂಟಪದ ಶಂಕುಸ್ಥಾಪನೆ ನೆರವೇರಲು ಅಂದಾಜು ಆರು ತಿಂಗಳ ಅವಧಿ ಬೇಕಾಗಬಹುದು’ ಎಂದರು.

ಮನವಿಪತ್ರ: ನೂತನ ಅನುಭವ ಮಂಟಪದ ಕಾಮಗಾರಿ ಶೀಘ್ರ ಆರಂಭಿ ಸಲು ಆಗ್ರಹಿಸಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ಡಾ.ಎಚ್.ಆರ್.ಮಹಾದೇವ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಇತರೆ ಶರಣರು ಇಲ್ಲಿ ಕಾರ್ಯಗೈದು ಜಗತ್ತಿನ ಪ್ರಥಮ ಸಂಸತ್ತು ಎಂಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪವನ್ನು ನಿರ್ಮಿಸಿದ್ದರು. ಅದೇ ಮಾದರಿಯಲ್ಲಿ ಹೊಸ ಮಂಟಪ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ. ಕೆಲ ಶರಣ ಸ್ಮಾರಕಗಳ ಜೀರ್ಣೋದ್ಧಾರ ನಡೆದಿದ್ದು ಇನ್ನುಳಿದವುಗಳ ಅಭಿವೃದ್ಧಿಯೂ ಕೈಗೊಳ್ಳಬೇಕು ಎಂದು ಕೇಳಿಕೊಳ್ಳಲಾಯಿತು.

ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೊಳ, ಮುಖಂಡರಾದ ಶಿವರಾಜ ನರಶೆಟ್ಟಿ, ಬಾಬು ವಾಲಿ, ಗುರುನಾಥ ಕೊಳ್ಳೂರ್, ಡಾ.ಎಸ್.ಬಿ.ದುರ್ಗೆ, ಡಾ.ಜಗನ್ನಾಥ ಹೆಬ್ಬಾಳೆ, ತಹಶೀಲ್ದಾರ್ ಸಾವಿತ್ರಿ ಸಲಗರ, ಮೀನಾಕುಮಾರಿ ಬೋರಾಳಕರ್, ಕಾಶಪ್ಪ ಬಾಲಿಕಿಲೆ, ಎಇ ಚಂದ್ರಕಾಂತರೆಡ್ಡಿ, ಡಾ.ಸುಶೀಲಾ ಹೊಳಕುಂದೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT