ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಪ್ರವಾಸೋದ್ಯಮಕ್ಕೆ ನೀಡಿಲ್ಲ ಬಿಡಿಗಾಸು

ಹಳೆಯ ಯೋಜನೆಗಳಿಗೆ ಅನುದಾನ ಘೋಷಣೆ
Last Updated 8 ಮಾರ್ಚ್ 2021, 15:39 IST
ಅಕ್ಷರ ಗಾತ್ರ

ಬೀದರ್: ರಾಜ್ಯದ ಮುಕುಟ ಮಣಿಯಂತಿರುವ ಬೀದರ್‌ ಜಿಲ್ಲೆಯಲ್ಲಿ ಅಸಂಖ್ಯ ಸ್ಮಾರಕಗಳು, ಐತಿಹಾಸಿಕ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳು ಇದ್ದರೂ ರಾಜ್ಯ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಡಿಗಾಸು ನೀಡಿಲ್ಲ. ಹಿಂದಿನ ಸರ್ಕಾರ ಘೋಷಣೆ ಮಾಡಿದ ಹಳೆಯ ಯೋಜನೆಗಳಿಗೆ ಮಾತ್ರ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದೆ.

20 ವರ್ಷಗಳ ಅವಧಿಯಲ್ಲಿ ಅನೇಕ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದರೂ ಬೀದರ್ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಸಾಧ್ಯವಾಗಿಲ್ಲ. ಕೃಷಿ ಕಾಲೇಜು ಹಾಗೂ ಮಹಿಳಾ ಪೊಲೀಸ್‌ ತರಬೇತಿ ಶಾಲೆ ಆರಂಭಿಸಬೇಕು ಎನ್ನುವ ಜಿಲ್ಲೆಯ ಜನತೆಯ ಬೇಡಿಕೆಗೆ ತಣ್ಣೀರು ಎರಚಲಾಗಿದೆ.

ಬಚಾವತ್‌ ಆಯೋಗದ ತೀರ್ಪಿನಂತೆ ಗೋದಾವರಿ ಜಲಾನಯನ ಪ್ರದೇಶದ ನೀರನ್ನು ಮಾಂಜ್ರಾ ನದಿಯ ಮೂಲಕ ಬಳಸಿಕೊಳ್ಳಲು ಬ್ಯಾರೇಜ್‌ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಲಾಗಿತ್ತು. ಬಿಎಸ್‌ಎಸ್‌ಕೆ ಪುನರಾರಂಭ, ಕಾರಂಜಾ ಸಂತ್ರಸ್ತರಿಗೆ ಪರಿಹಾರ ನಿರೀಕ್ಷಿಸಲಾಗಿತ್ತು. ಜನರ ಲೆಕ್ಕಾಚಾರವೇ ಬುಡಮೇಲಾಗಿದೆ.

ಬೀದರ್‌ ತಾಲ್ಲೂಕಿನ ಜನವಾಡ ಸಮೀಪದ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿರ್ಮಿಸಿರುವ ಬ್ಯಾರೇಜ್‌ನ ತಡೆಗೋಡೆ ಕೊಚ್ಚಿಕೊಂಡು ಹೋಗಿ ಮೂರು ವರ್ಷಗಳು ಕಳೆದಿವೆ. ತಡೆ ಗೋಡೆ ನಿರ್ಮಿಸಲು ಸಹ ಅನುದಾನ ಒದಗಿಸಿಲ್ಲ. ಕೊಳಾರ(ಕೆ) ಗ್ರಾಮದ ಬಳಿ ಜಿಲ್ಲಾ ಕೇಂದ್ರ ಕಾರಾಗೃಹದ ಹೊಸ ಕಟ್ಟಡ ನಿರ್ಮಾಣ ಮಾಡುವ ಕಾರ್ಯ ಈವರೆಗೂ ಆರಂಭವಾಗಿಲ್ಲ. ಒಂದು ಬದಿಗೆ ಗೋಡೆ ಕಟ್ಟಿದ್ದನ್ನು ಬಿಟ್ಟರೆ ಅಲ್ಲಿ ಬೇರೆ ಕೆಲಸಗಳು ಆಗಿಲ್ಲ.

‘ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಹಾಗೂ ಒತ್ತಡ ಹಾಕಿ ಅಭಿವೃದ್ಧಿಗೆ ಹಣ ತರುವಲ್ಲಿ ವಿಫಲರಾಗಿದ್ದಾರೆ’ ಎಂದು ಔರಾದ್‌ನ ಗುಂಡಪ್ಪ ಬೇಲೆ ಬೇಸರ ವ್ಯಕ್ತಪಡಿಸುತ್ತಾರೆ.

ನೂತನ ಅನುಭವ ಮಂಟಪ ನಿರ್ಮಾಣ ₹ 200 ಕೋಟಿ :

ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹ 500 ಕೋಟಿಯ ಪೈಕಿ ₹ 200 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗೊರುಚ ನೇತೃತ್ವದ ಸಮಿತಿಯು ₹ 650 ಕೋಟಿ ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಯೋಜನೆಯನ್ನು ಪರಿಷ್ಕರಿಸಿ ₹ 500 ಕೋಟಿ ನಿಗದಿಪಡಿಸಿದ್ದಾರೆ. ಭೂಸ್ವಾಧೀನ ಪಡಿಸಿಕೊಳ್ಳತ್ತಿದ್ದರೂ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದೀಗ ಬಜೆಟ್‌ನಲ್ಲೇ ₹ 200 ಕೋಟಿ ಘೋಷಣೆ ಮಾಡಿರುವುದು ಬಸವ ಭಕ್ತರಲ್ಲಿ ಸಂತಸ ಉಂಟು ಮಾಡಿದೆ.

ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬೀದರ್‌ ಜಿಲ್ಲೆಗೆ ಕೃಷಿ ಉಪಕರಣಗಳ ತಯಾರಿಕಾ ಕ್ಲಸ್ಟರ್‌ ಘೋಷಣೆ ಮಾಡಿತ್ತು. ಈವರೆಗೂ ಕ್ಲಸ್ಟರ್‌ಗಳು ಕಾರ್ಯಾರಂಭ ಮಾಡಿಲ್ಲ. ಯೋಜನೆಯ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟತೆ ಇಲ್ಲ. ಇದೀಗ ಯಡಿಯೂರಪ್ಪ ಅವರು ಬೀದರ್‌ನ ಕೃಷಿ ಉಪಕರಣಗಳ ತಯಾರಿಕಾ ಕ್ಲಸ್ಟರ್‌ನಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಸವಕಲ್ಯಾಣ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ಯಾಕೇಜ್ ಘೋಷಣೆ ಮಾಡಿರಬಹುದು ಎನ್ನುವುದು ಜಿಲ್ಲೆಯ ಪ್ರಮುಖರ ಅಭಿಪ್ರಾಯವಾಗಿದೆ.

‘ಕೋವಿಡ್‌ ಮಧ್ಯೆಯೂ ರಾಜ್ಯ ಸರ್ಕಾರ ಉತ್ತಮ ಬಜೆಟ್ ಮಂಡಿಸಿದೆ. ಬಸವಕಲ್ಯಾಣದ ನೂತನ ಅನುಭವ ಮಂಟಪಕ್ಕೆ ಬಜೆಟ್‌ನಲ್ಲಿ ₹ 200 ಕೋಟಿ ಒದಗಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬದ್ಧತೆ ಪ್ರದರ್ಶಿಸಿದ್ದಾರೆ’ ಎಂದು ಜನ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT