ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಬಳಿ ಕೊಳವೆಬಾವಿ ಕೊರೆಸಲು ಹಣ ಇಲ್ಲ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ
Last Updated 4 ಫೆಬ್ರುವರಿ 2023, 15:59 IST
ಅಕ್ಷರ ಗಾತ್ರ

ಬೀದರ್: ‘ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ. ಹೀಗಾಗಿ ಬಡವರಿಗೆ ಕೊಡುತ್ತಿದ್ದ ಅಕ್ಕಿ ಪ್ರಮಾಣವನ್ನು 5 ಕೆ.ಜಿಗೆ ಇಳಿಸಲಾಗಿದೆ. ಶಾಸಕರಿಗೆ ಒಂದು ಕೊಳವೆಬಾವಿ ಸಹ ಕೊರೆಸಲು ಸಾಧ್ಯವಾಗಿಲ್ಲ. ಬಿಜೆಪಿ ಮುಖಂಡರು ಲೂಟಿ ಹೊಡೆಯುವುದನ್ನು ನಿಲ್ಲಿಸಿದ್ದರೆ ಬಡವರಿಗೆ 10 ಕೆ.ಜಿ ಅಕ್ಕಿಯನ್ನಾದರೂ ಕೊಡಬಹುದಿತ್ತು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಬೀದರ್‌ ಹಾಗೂ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.


‘ಬಿಜೆಪಿ ಸರ್ಕಾರಕ್ಕೆ ಮೂರು ವರ್ಷಗಳ ಅವಧಿಯಲ್ಲಿ ಒಂದು ಮನೆ ಕಟ್ಟಿಸಿಕೊಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿಸಿತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಡಿತರ ಅಕ್ಕಿ 7 ಕೆ.ಜಿಯಿಂದ 5 ಕೆ.ಜಿ ಕೊಡಲು ಶುರು ಮಾಡಿತು. ಹಣ ಹೊಡೆಯುವುದನ್ನು ಕಡಿಮೆ ಮಾಡಿದ್ದರೆ 10 ಕೆ.ಜಿ.ಅಕ್ಕಿ ಕೊಡಬಹುದಿತ್ತು ಎಂದು ಬಿ.ಎಸ್‌.ಯಡಿಯೂರಪ್ಪ ಅವರಿಗೂ ಹೇಳಿದ್ದೆ’ ಎಂದರು.

‘ಕಾಂಗ್ರೆಸ್‌ ಪಕ್ಷ ಕೊಟ್ಟ ಮಾತಿಗೆ ತಪ್ಪುದಿಲ್ಲ. 2013ರಲ್ಲಿ ಕೊಟ್ಟಿದ್ದ 162 ಭರವಸೆಗಳಲ್ಲಿ 158 ಈಡೇರಿಸಿದೆ. ಹೆಚ್ಚುವರಿಯಾಗಿ 30 ಕಾರ್ಯಕ್ರಮ ಕೊಟ್ಟಿದೆ. ಆದರೆ, ಬಿಜೆಪಿ 600 ಭರವಸೆ ಕೊಟ್ಟು 60 ಭರವಸೆಗಳನ್ನೂ ಈಡೇರಿಸಿಲ್ಲ. ಯಾರಿಗೂ ಒಳ್ಳೆಯ ದಿನಗಳು ಬರಲಿಲ್ಲ’ ಎಂದು ಟೀಕಿಸಿದರು.


‘ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ 371ಜೆ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿತು. ಕಲ್ಯಾಣ ಕರ್ನಾಟಕದ ಅನೇಕರು ವೈದ್ಯರು, ಎಂಜಿನಿಯರ್‌ ಆದರು. ಕಾಂಗ್ರೆಸ್ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹ 1,500 ಕೋಟಿ ಅನುದಾನ ಕೊಟ್ಟಿತ್ತು. ಬಸವರಾಜ ಬೊಮ್ಮಾಯಿ ₹ 3 ಸಾವಿರ ಕೊಡುವ ಭರವಸೆ ನೀಡಿದರೂ ಹಣ ಬಿಡುಗಡೆ ಮಾಡಿಲ್ಲ’ ಎಂದರು.


‘ಬೀದರ್‌ ಕ್ಷೇತ್ರದಲ್ಲಿ ಆರು ಜನ, ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 8 ಜನ ಆಕಾಂಕ್ಷಿಗಳು ಇದ್ದಾರೆ. ಪಕ್ಷ ಯಾರಿಗೇ ಟಿಕೆಟ್‌ ಕೊಟ್ಟರೂ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಹಿರಿಯ ಮುಖಂಡ, ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್‌ ಅಕಾಂಕ್ಷಿ ಬಸವರಾಜ ಬುಳ್ಳಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂಜಯ ಜಾಗೀರದಾರ್‌, ಅಬ್ದುಲ್ ಸತ್ತಾರ್ ಮಾತನಾಡಿದರು.


ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಅಧ್ಯಕ್ಷ ಬಸವರಾಜ ರಾಯರೆಡ್ಡಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ಅಜಯಸಿಂಗ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಭೀಮರಾವ್‌ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಮಾಜಿ ಶಾಸಕ ಅಶೋಕ ಖೇಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ವಿಜಯಸಿಂಗ್, ಎಐಸಿಸಿ ಸದಸ್ಯ ಆನಂದ ದೇವಪ್ಪ, ಧನರಾಜ್‌ ತಾಳಂಪಳ್ಳಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ರೋಹಿದಾಸ ಘೋಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಸಂಜುಕುಮಾರ ಡಿ.ಕೆ. ಇದ್ದರು. ಚಂದ್ರಕಾಂತ ಹಿಪ್ಪಳಗಾಂವ್ ವಂದಿಸಿದರು.

........

ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ₹ 2 ಸಾವಿರ

ಬೀದರ್‌: ‘ಯಾವುದೇ ಧರ್ಮ, ಜಾತಿಯ ಬಡವರಿದ್ದರೂ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ₹ 2 ಸಾವಿರದಂತೆ ವರ್ಷಕ್ಕೆ ₹ 24 ಸಾವಿರ ಆರ್ಥಿಕ ನೆರವು ಒದಗಿಸಲಾಗುವುದು. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್‌ ಹಾಗೂ ಬಡವರಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ಕೊಡಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಜೋಕರ್‌ ಇದ್ದ ಹಾಗೆ. ರಸ್ತೆ, ಗಟಾರ ನಿರ್ಮಾಣಕ್ಕಿಂತ ಲವ್‌ ಜಿಹಾದ್‌ ವಿರೋಧಿಸುವುದು ಮಹತ್ವದ್ದು ಎಂದು ಈಚೆಗೆ ಹೇಳಿಕೆ ಕೊಟ್ಟಿದ್ದಾರೆ. ಜನರನ್ನು ಎತ್ತಿ ಕಟ್ಟುವುದೇ ಅವರ ಕೆಲಸವಾಗಿದೆ. ನಾಡಿನ ಅಭಿವೃದ್ಧಿ ಚಿಂತನೆ ಮಾಡದವರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ದ್ವೇಷದ, ಹಿಂದುತ್ವದ, ಕೋಮುವಾದದ, ಸಮಾಜ ಒಡೆಯುವ ರಾಜಕಾರಣವೇ ಇದಕ್ಕೆ ಕಾರಣ’ ಎಂದು ಹೇಳಿದರು.

‘ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಆದರೆ, ಸಂವಿಧಾನ ರಚನೆಯಾದ ಮೇಲೆ ಹೆಗಡೆವಾರ, ವಿ.ಡಿ. ಸಾವರಕರ್‌, ಗೋಲವಾಲ್ಕರ್ ಹಾಗೂ ಘೋಡ್ಸೆ ಅವರು ಸಂವಿಧಾನದ ವಿರುದ್ಧವಾಗಿಯೇ ಮಾತನಾಡಿದ್ದಾರೆ. ಬಿಜೆಪಿಗೆ ಇಂಥವರೇ ಆರಾಧ್ಯ ದೈವಗಳು. ಮಹಾತ್ಮರನ್ನು ಕೊಂದವರನ್ನೇ ಪೂಜೆ ಮಾಡುತ್ತಿದೆ. ಬಿಜೆಪಿಯವರು ಇವರ ವಂಶಸ್ಥರೇ ಆಗಿದ್ದಾರೆ’ ಎಂದು ಮೊಣಚಾದ ಮಾತಿನಿಂದ ಚುಚ್ಚಿದರು.

‘ಗೊಂಡ, ರಾಜಗೊಂಡ, ಕುರುಬರು, ಕೋಲಿ ಸಮಾಜದವರನ್ನು ಎಸ್‌ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಶಿಫಾರಸು ಮಾಡಿದ್ದೆ. ಆದರೆ, ಡಬಲ್‌ ಎಂಜಿನ್‌ ಸರ್ಕಾರ ಇನ್ನೂ ಅನುಮೋದನೆ ಕೊಟ್ಟಿಲ್ಲ. ನಿಮಗೆ ಸ್ವಾಭಿಮಾನ ಇದ್ದರೆ ಒಂದು ಮತವನ್ನೂ ಬಿಜೆಪಿಗೆ ಕೊಡಬೇಡಿ’ ಎಂದು ಮನವಿ ಮಾಡಿದರು.

‘ಮೋದಿ ಮಾಡುವುದೊಂದು, ಹೇಳುವುದು ಇನ್ನೊಂದು. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್ ಎಂದು ಹೇಳುತ್ತಿದ್ದಾರೆ. ಆದರೆ, ವಿಜಯಪುರದ ಶಾಸಕ ಬಸವರಾಜ ಪಾಟೀಲ ಯತ್ನಾಳ ಟೋಪಿ ಹಾಕಿಕೊಂಡವರು ನಮ್ಮ ಕಚೇರಿಗೆ ಬರಬೇಡಿ ಎಂದು ಹೇಳುತ್ತಾರೆ. ಬಿಜೆಪಿ ಎಂದರೆ ಸುಳ್ಳಿನ ದೊಡ್ಡ ಫ್ಯಾಕ್ಟರಿ’ ಎಂದು ಕಟುವಾಗಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT