ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸಂಗೀತ ಶಕ್ತಿ ವರ್ಣನಾತೀತ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿಕೆ
Last Updated 11 ಮಾರ್ಚ್ 2021, 12:49 IST
ಅಕ್ಷರ ಗಾತ್ರ

ಬೀದರ್: ‘ಒಳ್ಳೆಯ ಸಂಗೀತ ಆಲಿಸುವ ಮೂಲಕ ಮಾನಸಿಕ ಒತ್ತಡದಿಂದ ಹೊರ ಬರಲು ಸಾಧ್ಯವಿದೆ. ಮನಸ್ಸನ್ನು ಹಗುರವಾಗಿಸುವ ಸಂಗೀತದ ಶಕ್ತಿ ವರ್ಣನಾತೀತ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.

ಸವಿಗಾನ ಮ್ಯೂಸಿಕ್‌ ಅಕಾಡೆಮಿ ಹಾಗೂ ಸುಶಾ ಕಲ್ಚರಲ್‌ ಟ್ರಸ್ಟ್ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿಯ ಚಿಕ್ಕಪೇಟದ ಸವಿಗಾನ ಸಂಗೀತ ಸಭಾಂಗಣದಲ್ಲಿ ಆಯೋಜಿಸಿದ್ದ ಸವಿಗಾನ ಮಾಸಿಕ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ಸಂಗೀತಕ್ಕೆ ಚಿಕಿತ್ಸಕ ಶಕ್ತಿ ಇದೆ. ಸಂಗೀತಕಾರರು ಭಾವಾವೇಷಕ್ಕೆ ಒಳಗಾದ ಉದಾಹರಣೆಗಳು ಇಲ್ಲ. ಸಂಗೀತ ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ’ ಎಂದರು.

‘ಸಂಗೀತ ಅಕಾಡೆಮಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಸಾಲದು. ಅವುಗಳ ದಾಖಲಿಕರಣವನ್ನೂ ಮಾಡಬೇಕು. ಇದರಿಂದ ಅಕಾಡೆಮಿಯ ಹಿರಿಮೆ, ಗರಿಮೆಗಳನ್ನು ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಅಕಾಡೆಮಿಗಳ ದಾಖಲೆಗಳನ್ನು ಪರಿಶೀಲಿಸಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಗೀತ ಕಲಾವಿದರಿಗೆ ಕಾರ್ಯಕ್ರಮಗಳನ್ನು ಕೊಡುತ್ತದೆ. ಈ ಮೂಲಕ ಅರ್ಹ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸವಿಗಾನ ಸಂಗೀತ ಅಕಾಡೆಮಿ ನಿರ್ದೇಶಕಿ ಭಾನುಪ್ರಿಯಾ ಅರಳಿ ಮಾತನಾಡಿ, ‘ಸಂಗೀತ ಸಕಾರಾತ್ಮಕ ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಮನಸ್ಸು ವಿಚಲಿತವಾಗದಂತೆ ಮಾಡುತ್ತದೆ. ಮಾನಸಿಕ ಒತ್ತಡದಿಂದ ಹೊರ ಬರುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತದೆ’ ಎಂದರು.

‘ಪೈಲಟ್‌ಗಳು ಸಹ ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಾರೆ. ಮಾನಸಿಕ ಒತ್ತಡದಿಂದ ಹೊರಬರಲು ಅವರಿಗೂ ಸಂಗೀತ ವಾದ್ಯಗಳನ್ನು ನುಡಿಸುವ ಅಭ್ಯಾಸ ಮಾಡಿಸಲಾಗುತ್ತದೆ’ ಎಂದು ತಿಳಿಸಿದರು.

‘ಸಂಗೀತ ಅಕಾಡೆಮಿ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಮೊಬೈಲ್‌ ಫೋನ್‌ಗಳನ್ನು ಬದಗಿಟ್ಟು ಮಕ್ಕಳು ಬಹಳ ಆಸಕ್ತಿಯಿಂದ ಸಂಗೀತ ಕಲಿಯುತ್ತಿರುವುದು ಸಂತಸ ತಂದಿದೆ. ಸಂಗೀತ ತರಗತಿಗಳು ಮುಗಿದ ನಂತರವೂ ಸಂಗೀತ ವಾದ್ಯಗಳನ್ನು ನುಡಿಸುತ್ತ ಕುಳಿತುಕೊಳ್ಳುತ್ತಿದ್ದಾರೆ. ಇದು ಅವರಲ್ಲಿನ ಕಲಿಕಾ ಆಸಕ್ತಿಯನ್ನು ತೋರಿಸುತ್ತದೆ’ ಎಂದು ಹೇಳಿದರು.

ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿ, ‘ಹೆಣ್ಣುಮಕ್ಕಳು ಮದುವೆಯಾದ ಮಾತ್ರಕ್ಕೆ ನಮ್ಮ ಭವಿಷ್ಯ ಇಲ್ಲಿಗೆ ಮುಗಿಯಿತು ಎಂದು ಭಾವಿಸುತ್ತಾರೆ. ಕೆಲಸ ಮಾಡುವ ಉತ್ಸಾಹ ಹಾಗೂ ಸಾಧನೆಯ ಛಲ ಇದ್ದರೆ ಸಮಾಜದಲ್ಲಿ ತಮ್ಮದೇಯಾದ ಛಾಪು ಮೂಡಿಸಲು ಸಾಧ್ಯವಿದೆ’ ಎಂದರು.

‘ಪುರುಷರು ಬೆನ್ನೆಲುಬಾಗಿ ಇರುವ ಕಾರಣಕ್ಕಾಗಿಯೇ ಮಹಿಳೆಯರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮದುವೆಯಾದ ನಂತರವೂ ಮಹಿಳೆ ಒಳ್ಳೆಯ ಕೆಲಸ ಮಾಡುವ ಉದ್ದೇಶ ಹೊಂದಿದ್ದರೆ ಪುರುಷರು ಖಂಡಿತವಾಗಿಯೂ ಬೆಂಬಲವಾಗಿ ನಿಲ್ಲುತ್ತಾರೆ’ ಎಂದು ಹೇಳಿದರು.

‘ಭಾನುಪ್ರಿಯಾ ಅರಳಿ ಅವರು ಮೂಲತಃ ಶಿಕ್ಷಕಿಯಾದರೂ ಮಕ್ಕಳಿಗೆ ಸಂಗೀತ ಹೇಳಿ ಕೊಡುತ್ತಿದ್ದಾರೆ. ಸ್ವತಃ ಅವರೂ ಸಂಗೀತದಲ್ಲಿ ಸಾಧನೆ ಮಾಡಿದ್ದಾರೆ. ಒತ್ತಡದ ಕೆಲಸದಲ್ಲಿಯೂ ಒಂದಿಷ್ಟು ಬಿಡುವು ಮಾಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ’ ಎಂದು ಬಣ್ಣಿಸಿದರು.

ಅರಳು ಸಂಸ್ಥೆಯ ನಿರ್ದೇಶಕಿ ಸುನೀತಾ ಮಾತನಾಡಿ, ‘ಮಹಿಳೆ ಇಂದು ಯಾವ ಕ್ಷೇತ್ರದಲ್ಲೂ ಹಿಂದೆ ಉಳಿದಿಲ್ಲ’ ಎಂದರು.

ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಸಂಜೀವಕುಮಾರ ಅತಿವಾಳೆ, ಬೀದರ್‌ ತಾಲ್ಲೂಕಿನ ಯದಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅನಿಲಕುಮಾರ ಹಾಗೂ ಹಿರಿಯ ಪತ್ರಕರ್ತ ಚಂದ್ರಕಾಂತ ಎಂ.ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಜಲ್ ಜೀವನ ಮಿಷನ್‌ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಗೌತಮ ಅರಳಿ ಇದ್ದರು. ತಾಯಂದಿರು ಹಾಗೂ ಮಕ್ಕಳು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಶೈಲಜಾ ದಿವಾಕರ್‌ ಹಾಗೂ ಕಿರಂ ಜೆ.ಪಿ. ನಿರೂಪಿಸಿದರು. ಪ್ರಾಪ್ತಿ ಅರಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT