ಶುಕ್ರವಾರ, ಸೆಪ್ಟೆಂಬರ್ 24, 2021
24 °C
ತನ್ನ ಮನೆ ತೆರಿಗೆ ಪಾವತಿಗೂ ನಕಲಿ ಸೀಲ್

ತೆರಿಗೆ ಹಣ ಲಪಟಾಯಿಸಿದ ಮೂವರು ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಬೀದರ್‌: ಬಿಲ್‌ ಕಲೆಕ್ಟರ್, ದ್ವಿತೀಯ ದರ್ಜೆ ಸಹಾಯಕ ಹಾಗೂ ಇನ್ನೊಬ್ಬ ನೌಕರ ಸೇರಿ ನಗರಸಭೆ ಆಸ್ತಿ ತೆರಿಗೆ ಹಣವನ್ನೇ ಕಬಳಿಸಿರುವುದು ಬೆಳಕಿಗೆ ಬಂದಿದೆ. ತೆರಿಗೆ ಕಡಿಮೆ ಸಂಗ್ರಹವಾದ ಬಗ್ಗೆ ಸಂಶಯಗೊಂಡು ನಗರಸಭೆಯ ಅಧಿಕಾರಿಗಳು ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ಬ್ಯಾಂಕ್‌ ಚಲನ್‌ ಮೂಲಕ ನಗರಸಭೆ ತೆರಿಗೆ ಪಾವತಿಸಲಾಗುತ್ತದೆ. ಆದರೆ, ಆರೋಪಿಗಳು ಚಲನ್‌ ಮೇಲೆ ನಕಲಿ ಸೀಲ್‌ ಹಾಕಿ, ರಸೀದಿಯನ್ನು ತೆರಿಗೆ ಪಾವಸಿದ ವ್ಯಕ್ತಿಗೆ ಕೊಟ್ಟು ನಗರಸಭೆ ದಾಖಲೆಗಳಲ್ಲೂ ಸಂಗ್ರಹಿಸಿ ಇಟ್ಟಿದ್ದಾರೆ. ಬ್ಯಾಂಕ್‌ ಖಾತೆಯಲ್ಲಿರುವ ಹಣ ಹಾಗೂ ನಗರಸಭೆ ಲೆಕ್ಕಪತ್ರದಲ್ಲಿ ಉಲ್ಲೇಖವಿರುವ ಜಮಾ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಾಗ ನಗರಸಭೆ ಅಧಿಕಾರಿಗಳು ಕೆಲವರಿಗೆ ನೋಟಿಸ್‌ ನೀಡಿದ್ದಾರೆ.

ಆಸ್ತಿ ತೆರಿಗೆ ಪಾವತಿಗೆ ನಕಲಿ ಸೀಲ್‌ ಹಾಕಿ ಲಕ್ಷಾಂತರ ರೂಪಾಯಿ ಕಬಳಿಸಿರುವ ಆರೋಪ ಹೊತ್ತಿರುವ ನಗರಸಭೆ ನೌಕರನೊಬ್ಬ ತನ್ನ ಆಸ್ತಿ ತೆರಿಗೆ ಪಾವತಿಗೇ ನಕಲಿ ಸೀಲ್‌ ಹಾಕಿರುವುದು ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದೆ.

ಬೀದರ್‌ ನಗರಸಭೆಯಲ್ಲಿ ಪ್ರತಿ ವರ್ಷ ಸರಾಸರಿ ₹ 11 ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ಎರಡು ವರ್ಷಗಳಿಂದ ತೆರಿಗೆ ಸಂಗ್ರಹ ಕಡಿಮೆಯಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮೂವರು ನೌಕರರು ಸರ್ಕಾರಕ್ಕೆ ಆಸ್ತಿ ತೆರಿಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡಿರುವುದು ಬಹಿರಂಗವಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ನೇರವಾಗಿ ನಗರಸಭೆಗೆ ತೆರಿಗೆ ಪಾವತಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬಾರದು. ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ನ್ಯೂ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲಾಖೆ ಮಟ್ಟದಲ್ಲಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ನಗರಸಭೆ ಆಯುಕ್ತ ರವೀಂದ್ರ ಅಂಗಡಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.