ಸೋಮವಾರ, ಮೇ 17, 2021
21 °C

ಬೀದರ್: ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ವಿವಿಧೆಡೆ ಶನಿವಾರ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ಔರಾದ್ ತಾಲ್ಲೂಕಿನ ಮೆಡಪಳ್ಳಿ ಗ್ರಾಮದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಚಿಟಗುಪ್ಪ ತಾಲ್ಲೂಕಿನ ಕುಡಂಬಲ್‌ ಗ್ರಾಮದಲ್ಲಿ ಎಮ್ಮೆ ಸಾವನ್ನಪ್ಪಿದೆ.

ಕಮಲನಗರ, ಹುಲಸೂರು, ಭಾಲ್ಕಿ ಸೇರಿ ವಿವಿಧೆಡೆ ಕೆಲ ಕಾಲ ತುಂತುರು ಮಳೆ ಸುರಿದಿದೆ. ಮಧ್ಯಾಹ್ನದ ನಂತರ ಜಿಲ್ಲೆಯಲ್ಲಿ ವಾತಾವರಣದಲ್ಲಿ ಬದಲಾವಣೆ ಉಂಟಾಯಿತು. ಆಗಸದಲ್ಲಿ ಮೊಡಗಳು ಆವರಿಸಿದವು. ಮಿಂಚು, ಗುಡುಗಿನ ಸದ್ದು ಕೇಳಿಸಿತು. ಬಿರುಗಾಳಿಯೂ ಬೀಸಿತು.

ಕೋವಿಡ್ ಸೋಂಕಿನ ಕಾರಣ ವಿಧಿಸಲಾದ ಕರ್ಫ್ಯೂ ಪ್ರಯುಕ್ತ ಮನೆಯಲ್ಲೇ ಇರುವ ಸಾರ್ವಜನಿಕರು ಪ್ರಖರ ಬಿಸಿಲಿನಿಂದಾಗಿ ಬೀಸುತ್ತಿರುವ ಬಿಸಿ ಗಾಳಿಯಿಂದ ಕಂಗೆಟ್ಟಿದ್ದರು. ವಾತಾವರಣ ಬದಲಾಗಿ, ಸಂಜೆ ತಣ್ಣನೆಯ ಗಾಳಿ ಬೀಸಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಮಹಿಳೆ ಸಾವು: ಔರಾದ್ ತಾಲ್ಲೂಕಿನ ಮೆಡಪಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಅನಿತಾ ಬಸಯ್ಯ ಸ್ವಾಮಿ (35) ಮೃತ ಮಹಿಳೆ. ಹೊಲದಿಂದ ಮನೆಗೆ ಬರುವಾಗ ಮಾರ್ಗದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್ಐ ಅಶೋಕ, ಪೇದೆ ಮಹೇಂದ್ರ, ಪ್ರಕಾಶ ಸ್ಥಳಕ್ಕೆ ಭೇಟಿ ನೀಡಿದ್ದರು.

ಗುಡುಗು ಸಹಿತ ಮಳೆ: ಖಟಕಚಿಂಚೋಳಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಸುರಿಯಿತು.

ಮಧ್ಯಾಹ್ನ ನಾಲ್ಕು ಗಂಟೆಯವರೆಗೆ ಕಡು ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಆದರೆ ಸಂಜೆ ಸುರಿದ ಮಳೆಯಿಂದಾಗಿ ಮನೆಗಳ ಮೇಲಿನ ತಗಡಿನ ಶೀಟ್‌ (ಪತ್ರಾಸ್‌)ಗಳು ಹಾರಿಬಿದ್ದಿವೆ. ರಸ್ತೆಯ ತುಂಬಾ ನೀರು ಹರಿಯಿತು.

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ವಿವಿಧೆಡೆ, ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿ ಸುತ್ತಮುತ್ತ ಶನಿವಾರ ಆಲಿಕಲ್ಲು ಸಹಿತ ಜೋರು ಮಳೆಯಾಯಿತು. ಕಾಳಗಿ ತಾಲ್ಲೂಕಿನಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು