ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಹಂತಕನಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಟೋಕರೆ ಕೋಳಿ ಸಮಾಜ ಸಂಘದಿಂದ ಪ್ರತಿಭಟನಾ ರ್‍ಯಾಲಿ
Published 25 ಮೇ 2024, 16:02 IST
Last Updated 25 ಮೇ 2024, 16:02 IST
ಅಕ್ಷರ ಗಾತ್ರ

ಬೀದರ್‌: ‘ಹುಬ್ಬಳ್ಳಿಯ ವೀರಾಪುರ ಬಡಾವಣೆಯ ನಿವಾಸಿ ಅಂಜಲಿ ಅಂಬಿಗೇರ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ಬೀದರ್ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದವರು ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದ ಹತ್ತಿರದ ಪ್ರವಾಸಿ ಮಂದಿರದಿಂದ ಭಗತ್‌ ಸಿಂಗ್ ವೃತ್ತ, ಮಹಾವೀರ ವೃತ್ತ, ತಹಶೀಲ್ದಾರ್‌ ಕಚೇರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ‍್ಯಾಲಿ ನಡೆಸಿದರು. ‘ಅಂಜಲಿ ಕೊಲೆ ಮಾಡಿದವನನ್ನು ಗಲ್ಲಿಗೇರಿಸಿ ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

‘ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕೊಲೆ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಂಜಲಿ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು’ ಎಂದು ಕಲಬುರಗಿಯ ತೊನಸನಹಳ್ಳಿ ಅಲ್ಲಮ ಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ ಒತ್ತಾಯಿಸಿದರು.

‘ಕೊಲೆಯಾದ ಅಂಜಲಿ ಕುಟುಂಬಕ್ಕೆ ಸ್ವಂತ ಮನೆ ಹಾಗೂ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಟೋಕರೆ ಕೋಳಿ (ಕಬ್ಬಲಿಗ, ಗಂಗಾಮತ, ಅಂಬಿಗರು) ಸೇರಿದಂತೆ 37 ಪರ್ಯಾಯ ಪದಗಳಿಂದ ಕರೆಯಲಾಗುವ ಈ ಸಮಾಜದ 60 ಲಕ್ಷ ಜನರು ರಾಜ್ಯದಲ್ಲಿ ಇದ್ದಾರೆ. ಘಟನೆಯಿಂದ ಅವರೆಲ್ಲ ಬೆಚ್ಚಿಬಿದ್ದಿದ್ದಾರೆ. ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಸುಲಿಗೆ, ಶೋಷಣೆಗಳಂತಹ ಹೀನ ದುಷ್ಕೃತ್ಯಗಳನ್ನು ತಡೆಯಬೇಕು’ ಎಂದು ಮುಖಂಡ ಜಗನ್ನಾಥ ಜಮಾದಾರ್ ಆಗ್ರಹಿಸಿದರು.

‘ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿ ಗೂಂಡಾಗಳನ್ನು ಎನ್‌ಕೌಂಟರ್ ಮಾಡಬೇಕು’ ಎಂದು ಬಿಜೆಪಿ ಮುಖಂಡ ಈಶ್ವರ್‌ ಸಿಂಗ್ ಠಾಕೂರ್ ಒತ್ತಾಯಿಸಿದರು.

‘ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ್ ಅವರ ಕೊಲೆ ಮಾಡಿದ ಆರೋಪಿಗಳನ್ನು ರಾಜ್ಯ ಸರ್ಕಾರ ಎನ್‌ಕೌಂಟರ್ ಮಾಡಬೇಕು’ ಎಂದು ನಗರಸಭೆ ಸದಸ್ಯ ಶಶಿ ಹೊಸಳ್ಳಿ ಆಗ್ರಹಿಸಿದರು.

ಮುಖಂಡರಾದ ಶಾಂತಪ್ಪ ಜಿ. ಪಾಟೀಲ, ಮಹೇಶ ಪಾಲಂ, ರೇವಣಸಿದ್ದಪ್ಪ ಜಲಾದೆ, ನಾಗಭೂಷಣ ಸಂಗಮ್, ಪಾಂಡುರಂಗ ಗುರೂಜಿ, ಷಣ್ಮುಖಪ್ಪ ಶೇಕಾಪುರ್, ಶಕುಂತಲಾ ಹುಣಚಗೇರಾ, ಸರಸ್ವತಿ ಜಮಾದಾರ್, ಸುನೀಲ ಭಾವಿಕಟ್ಟಿ, ವಿಜಯಕುಮಾರ ಪಾಟೀಲ, ಸುನೀಲ ಕಾಶೆಂಪುರ್‌, ಈಶ್ವರ ಬೊಕ್ಕೆ, ಮಾರುತಿ ಮಾಸ್ಟರ್, ದಯಾನಂದ ಮೇತ್ರಿ, ಚಂದ್ರಕಾಂತ ಹಳ್ಳಿಖೇಡಕರ್, ಗೋವಿಂದ ಜಾಲಿ, ಶಿವರಾಜ ಜಮಾದಾರ್, ವಿಠಲ್ ಕುಂಬಾರ್, ಉಮೇಶ ಗೊಂದಗಾವ್, ಸಂಜುಕುಮಾರ ಯಾಕತಪೂರ, ರವಿಂದ್ರ ಕಾಶೆಂಪುರ್‌, ಶಿವರಾಜ ಜಾಗಿರದಾರ್, ಷಣ್ಮುಖಪ್ಪ ಲಿಂಗನಬಾಡ್, ಶಿವರಾಜ ಬಂಬುಳಗಿ, ಅವಿನಾಶ ಪೋಲದಾಸ್, ದೇವೆಂದ್ರ ನಿಡೋದಾ, ರಾಜಕುಮಾರ ಜಮಾದಾರ್, ಅನಿಲ ಜಮಾದಾರ್, ವಿಜಯಕುಮಾರ ಲಾಡಗೇರಿ, ಅಶೋಕ ಕಾಗೆ, ನರಸಪ್ಪ ಮಲ್ಕಾಪೂರವಾಡಿ, ಶಿವಶಂಕರ ಫುಲೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT