ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಕ್‌ ಮಾಲೀಕರ ಮುಷ್ಕರ | ಹಬ್ಬಿದ ವದಂತಿ, ಪೆಟ್ರೋಲ್‌ ಬಂಕ್‌ಗಳಲ್ಲಿ ಜನಜಾತ್ರೆ

Published 3 ಜನವರಿ 2024, 5:58 IST
Last Updated 3 ಜನವರಿ 2024, 5:58 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಒಂದಾದ ನಂತರ ಒಂದು ವದಂತಿಗಳು ಹಬ್ಬುತ್ತಿದ್ದು, ಜನ ಕೂಡ ಅದನ್ನೇ ಸತ್ಯವೆಂದು ನಂಬುತ್ತಿದ್ದಾರೆ.

ಇತ್ತೀಚೆಗೆ ಇ–ಕೆವೈಸಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವದಂತಿ ಹಬ್ಬಿತ್ತು. ಇ–ಕೆವೈಸಿ ಮಾಡಿಸಿಕೊಂಡರೆ ಅರ್ಧ ಬೆಲೆಗೆ ಸಿಲಿಂಡರ್‌ ಸಿಗುತ್ತದೆ ಎಂದು ವದಂತಿ ಹಬ್ಬಿದ್ದರಿಂದ ಜನ ದೈನಂದಿನ ಕೆಲಸಗಳನ್ನು ಬಿಟ್ಟು ಗ್ಯಾಸ್‌ ಏಜೆನ್ಸಿ ಎದುರು ಸೇರಿದ್ದರು. ಇ–ಕೆವೈಸಿಗೆ ಎಲ್ಲ ಏಜೆನ್ಸಿಗಳ ಎದುರು ಜನಜಾತ್ರೆ ಇತ್ತು. ಈ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ನಂತರ ಜಿಲ್ಲಾಡಳಿತ ಕೂಡ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿತ್ತು. ಇಷ್ಟಾದರೂ ಗ್ಯಾಸ್‌ ಏಜೆನ್ಸಿಗಳ ಎದುರು ಇ–ಕೆವೈಸಿ ಮಾಡಿಸಿಕೊಳ್ಳುವವರ ಸಂಖ್ಯೆ ಇನ್ನೂ ತಗ್ಗಿಲ್ಲ.

ಈಗ ಮತ್ತೊಂದು ವದಂತಿ ಹರಡಿದೆ. ಅದು ಪೆಟ್ರೋಲ್‌, ಡೀಸೆಲ್‌ಗೆ ಸಂಬಂಧಿಸಿದ್ದು. ಟ್ರಕ್‌ ಮಾಲೀಕರು ಐದು ದಿನಗಳ ವರೆಗೆ ಮುಷ್ಕರ ನಡೆಸುತ್ತಿದ್ದು, ಪೆಟ್ರೋಲ್‌, ಡೀಸೆಲ್‌ ಸರಬರಾಜು ನಿಂತು ಹೋಗುತ್ತದೆ. ಕನಿಷ್ಠ ಒಂದು ವಾರದ ಮಟ್ಟಿಗೆ ಸಿಗುವುದಿಲ್ಲ ಎಂದು ದೊಡ್ಡ ವದಂತಿ ಹಬ್ಬಿದೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಮಂಗಳವಾರ ಸಂಜೆಯಿಂದ ಜಿಲ್ಲೆಯ ಬಹುತೇಕ ಪೆಟ್ರೋಲ್‌ ಬಂಕ್‌ಗಳ ಎದುರು ಜನ ಸೇರಿದ್ದಾರೆ. ಬೈಕ್‌, ಕಾರು ಸೇರಿದಂತೆ ಇತರೆ ವಾಹನಗಳ ಮಾಲೀಕರು ಪೆಟ್ರೋಲ್‌ ಬಂಕ್‌ಗಳಿಗೆ ಹೋಗಿ ಸಾಲಿನಲ್ಲಿ ನಿಂತು ಟ್ಯಾಂಕ್‌ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ ಖಾಲಿ ಡಬ್ಬಿಗಳನ್ನು ತಂದು ಅದರಲ್ಲಿ ಪೆಟ್ರೋಲ್‌ ಕೊಂಡೊಯ್ಯುತ್ತಿದ್ದಾರೆ. ಎಲ್ಲ ಪೆಟ್ರೋಲ್‌ ಬಂಕ್‌ಗಳ ಎದುರು ಉದ್ದನೆಯ ಸಾಲು, ಜನಜಂಗುಳಿ ಕಂಡು ಬಂತು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಪೆಟ್ರೋಲ್‌ ಬಂಕ್‌ಗಳಿಗೆ ಬಂದದ್ದರಿಂದ ಮಾಲೀಕರು ಕೂಡ ಚಕಿತರಾಗಿದ್ದಾರೆ. ಕೆಲವರನ್ನು ಅವರು ವಿಚಾರಿಸಿದಾಗ, ಪೆಟ್ರೋಲ್‌ ಸಿಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ತುಂಬಿಸಿಕೊಳ್ಳಲು ಬಂದಿರುವೆ ಎಂದಿದ್ಧಾರೆ. ಆ ರೀತಿಯ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ನಿರಂತರವಾಗಿ ಪೆಟ್ರೋಲ್‌ ಸರಬರಾಜು ಆಗುತ್ತಿದೆ ಎಂದು ತಿಳಿಸಿದರು ಮಾಲೀಕರ ಮಾತು ಯಾರೂ ಒಪ್ಪುವ ಸ್ಥಿತಿಯಲ್ಲಿಲ್ಲ.

‘ಮಹಾರಾಷ್ಟ್ರ, ತೆಲಂಗಾಣದಲ್ಲಿ ಟ್ರಕ್‌ ಮಾಲೀಕರ ಮುಷ್ಕರ ಇದೆ. ಹೀಗಾಗಿ ಐದು ದಿನ ಪೆಟ್ರೋಲ್‌ ಸಿಗಲ್ಲ ಅಂತ ಹೇಳುತ್ತಿದ್ದಾರೆ. ಆದರೆ, ನಮ್ಮಲ್ಲಿ ಸಪ್ಲೈ ಪ್ರಾಬ್ಲಂ ಇಲ್ಲ. ಬೀದರ್‌ ಜಿಲ್ಲೆಯಲ್ಲಿ 150 ಪೆಟ್ರೋಲ್‌ ಬಂಕ್‌ಗಳಿದ್ದು, ಎಲ್ಲ ಕಡೆ ಸಪ್ಲೈ ಆಗುತ್ತಿದೆ. ಈ ಬಗ್ಗೆ ಜನರಿಗೆ ತಿಳಿಸಿದರೂ ನಂಬುವ ಸ್ಥಿತಿಯಲ್ಲಿಲ್ಲ’ ಎಂದು ಬೀದರ್‌ ನಗರದ ಪೆಟ್ರೋಲ್‌ ಬಂಕ್‌ವೊಂದರ ಮಾಲೀಕ ಬಸವರಾಜ ಸಿಂದೋಲ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

‘ನಮ್ಮಲ್ಲಿ ಸಮಸ್ಯೆ ಇಲ್ಲ’

‘ನೆರೆಯ ರಾಜ್ಯ ತೆಲಂಗಾಣದಲ್ಲಿ ಟ್ರಕ್‌ ಅಸೋಸಿಯೇಷನ್‌ನವರು ಬಂದ್‌ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಬಂದ್‌ಗೆ ಕರೆ ಕೊಟ್ಟಿಲ್ಲ. ನಮಗೆ ಕಲಬುರಗಿ ಮಾರ್ಗವಾಗಿ ಪೆಟ್ರೋಲ್‌ ಡೀಸೆಲ್‌ ಪೂರೈಕೆಯಾಗುತ್ತದೆ. ಸದ್ಯ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಜನ ವದಂತಿಗೆ ಕಿವಿಗೊಡಬಾರದು. ಅನಗತ್ಯವಾಗಿ ಪೆಟ್ರೋಲ್‌ ಬಂಕ್‌ಗಳ ಎದುರು ಸೇರಬಾರದು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ ಮೂಲಕ ಮನವಿ ಮಾಡಿದ್ದಾರೆ.

ನಮ್ಮ ಜಿಲ್ಲೆಗೆ ಎಂದಿನಂತೆ ಪೆಟ್ರೋಲ್‌ ಡೀಸೆಲ್‌ ಹಾಲು ಪತ್ರಿಕೆ ಎಂದಿನಂತೆ ಪೂರೈಕೆಯಾಗುತ್ತದೆ. ಈ ಕುರಿತು ಎಲ್ಲ ಪೆಟ್ರೋಲ್‌ ಬಂಕ್‌ಗಳ ಎದುರು ಧ್ವನಿವರ್ಧಕಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ವಾಟ್ಸ್ಯಾಪ್‌ನಲ್ಲಿ ಬಂದಿರುವುದನ್ನೇ ಸತ್ಯವೆಂದು ತಿಳಿದು ಜನ ಈ ರೀತಿ ಮಾಡುತ್ತಿದ್ದಾರೆ. ಇತ್ತೀಚೆಗೆ ಇ–ಕೆವೈಸಿ ವಿಷಯದಲ್ಲೂ ಗೊಂದಲ ಏರ್ಪಟ್ಟಿತ್ತು ಎಂದು ಹೇಳಿದರು.

ಪೆಟ್ರೋಲ್‌ ಬಂಕ್‌ ಎದುರು ಖಾಲಿ ಡಬ್ಬಿ ಬಾಟಲಿ ಹಿಡಿದುಕೊಂಡು ಕ್ಯೂನಲ್ಲಿ ನಿಂತಿರುವ ಜನ
ಪೆಟ್ರೋಲ್‌ ಬಂಕ್‌ ಎದುರು ಖಾಲಿ ಡಬ್ಬಿ ಬಾಟಲಿ ಹಿಡಿದುಕೊಂಡು ಕ್ಯೂನಲ್ಲಿ ನಿಂತಿರುವ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT