ಬೀದರ್: ‘ಭಾರತದ ಸಂವಿಧಾನ ಶ್ರೇಷ್ಠವಾದುದು ಎಂದು ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದರೆ. ಆದರೆ, ಭಾರತೀಯರಾದ ನಾವು ಅದನ್ನು ಪ್ರಶ್ನಿಸುತ್ತಿದ್ದೇವೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಹಾಗೂ ಬೀದರ್ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ‘ಹಿಂದುತ್ವದ ಹುನ್ನಾರ ಹತ್ತಿಕ್ಕಲು ಜಾತ್ಯತೀತ ರಾಷ್ಟ್ರ ನಿರ್ಮಿಸಲು’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ವತಂತ್ರ ಭಾರತದ ಸಮಸ್ತ ಪ್ರಜೆಗಳಿಗೆ ಪ್ರಜಾಪ್ರಭುತ್ವದ ದೀಕ್ಷೆಯನ್ನು ನೀಡಿ, ಸರ್ವರೂ ಸಮಾನರು, ಸರ್ವರಿಗೂ ಸಮಾನ ಪ್ರಗತಿ, ಸರ್ವರಿಗೂ ಸಮಾನ ರಕ್ಷಣೆ ಸಂವಿಧಾನ ಕೊಟ್ಟಿದೆ. ಈ ನೆಲದಲ್ಲಿರುವ ಎಲ್ಲ ಧರ್ಮಗಳಿಗೆ ಸಮಾನ ಸ್ಥಾನಮಾನ ನೀಡಿದೆ ಎಂದರು.
ಸಂವಿಧಾನದ ಪೀಠಿಕೆ ನಮಗೆ ಪ್ರತಿದಿನ ಬದುಕಿನ ಪ್ರಗತಿ ತಿಳಿಸಿಕೊಡುತ್ತದೆ. ಸಂವಿಧಾನ ಜಾರಿಗೆ ಬಂದು 75 ವರ್ಷ ಪೂರೈಸಿರುವುದರಿಂದ ವಿದ್ಯಾರ್ಥಿಗಳಿಗೆ, ಗ್ರಾಮೀಣ ಭಾಗದ ಜನರಿಗೆ ಅದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅದರ ಮಹತ್ವ ಸಾರಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, 12 ನೇ ಶತಮಾನದಲ್ಲಿ ಸಮ ಸಮಾಜಕ್ಕಾಗಿ ವಚನ ಸಾಹಿತ್ಯದ ಮೂಲಕ ಸಂಘರ್ಷ ಮಾಡಿದ ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನೆಂದು ಸರ್ಕಾರ ಘೋಷಣೆ ಮಾಡಿದೆ. ಗ್ಯಾರಂಟಿಗಳ ಮೂಲಕ ಬಡ ಜನರಿಗೆ ಸರ್ಕಾರ ಆಶಾಕಿರಣವಾಗಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್ ಮಾತನಾಡಿ, ಎಲ್ಲ ಧರ್ಮಗಳು ಒಳ್ಳೆಯ ಕಾರ್ಯ ಮಾಡಿಯೆಂದು ಹೇಳಿಕೊಟ್ಟಿವೆ. ಆದರೆ, ಕೆಲ ಮನಃಸ್ಥಿತಿಗಳು ಅಸಮಾನತೆ ಸೃಷ್ಟಿಸುತ್ತಿವೆ. ಸಂವಿಧಾನಬದ್ದವಾಗಿ ಆಡಳಿತ ನಡೆಸುವವರಿಗೆ ಹಾಗೂ ಪ್ರತಿ ಪ್ರಜೆಗೂ ಆತ್ಮಗೌರವದ ಬದುಕು ಕೊಡುವವರಿಗೆ ಪ್ರಜಾಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಸಬ್ಸಿಡಿಗಾಗಿ ಸಾಲ ತೆಗೆದುಕೊಳ್ಳದೆ ಸ್ವಯಂ ಉದ್ಯೋಗಕ್ಕಾಗಿ ಸರ್ಕಾರ ಕೊಡುವ ಸಾಲ ಪಡೆಯಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಮಾತನಾಡಿ, ಸಂವಿಧಾನ ನಮ್ಮ ರಾಷ್ಟ್ರ ಧರ್ಮವಾಗಿದೆ. ರಾಷ್ಟ್ರ ಧರ್ಮಕ್ಕೆ ಅಪಮಾನ ಮಾಡುವವರು ಈ ದೇಶದ ಪ್ರಜೆಗಳಾಗಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಮುಖರಾದ ಅರುಣ ಪಟೇಲ್, ಸುಬ್ಬಣ್ಣ ಕರಕನಳ್ಳಿ, ಎಂ.ಎಸ್. ಮನೋಹರ್, ಶಿವರಾಜ ತಡಪಳ್ಳಿ, ಸುನೀಲ ಕಡ್ಡೆ, ವಿಜಯಕುಮಾರ ಸೋನಾರೆ, ದೇವಿದಾಸ ಚಿಮಕೋಡ್, ವೀಣಾ ದೇವದಾಸ ಚಿಮಕೋಡ್, ಹರೀಶ ಚಕ್ರವರ್ತಿ, ಸುಮಂತ ಕಟ್ಟಿಮನಿ, ಅಬ್ದುಲ್ ಮನ್ನಾನ್ ಸೇಠ್, ಬಾಬುರಾವ ಹೊನ್ನ, ಅಮೃತರಾವ ಚಿಮಕೋಡ್, ಬಾಬು ಟೈಗರ್, ರಮೇಶ ಡಾಕುಳಗಿ, ಕಾಶಿನಾಥ ಚಲುವಾ, ದಿಗಂಬರ ಮಡಿವಾಳ, ಗಾಲಿಬ್ ಹಾಸ್ಮಿ, ರಾಜಕುಮಾರ ಬನ್ನೇರ್, ಅಭಿಕಾಳೆ ರಾಜಕುಮಾರ, ವಾಘಮಾರೆ ಸುಭಾಷ ಟಿಳ್ಳೆಕರ್, ಅಶೋಕ ಗಾಯಕವಾಡ ಇತರರಿದ್ದರು.
ಈ ನೆಲಕ್ಕೆ ಅಂಟಿಕೊಂಡಿರುವ ಬಡತನ ಅಸಮಾನತೆ ತೊಲಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.–ಡಾ.ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆ ಸಚಿವ
ಸಂವಿಧಾನ ಓದಿ ರಾಜಕಾರಣ ಮಾಡಬೇಕು. ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು. ಧರ್ಮ ರಾಜಕಾರಣ ಕೈಬಿಡಬೇಕು.–ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.