ಬೀದರ್: ‘ರಾಜ್ಯದಲ್ಲಿ ಐದು ‘ಗ್ಯಾರಂಟಿ’ ಘೋಷಿಸಿರುವುದರಿಂದ ಅಭಿವೃದ್ಧಿ ಕೆಲಸಗಳು ಸಾಧ್ಯವಿಲ್ಲವೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೊಟ್ಟಿರುವ ಹೇಳಿಕೆ ಕಳಪೆ ಆಡಳಿತಕ್ಕೆ ಸಾಕ್ಷಿ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ದಿಗೆ ತಿಲಾಂಜಲಿ ಹಾಡಿದ್ದಾರೆ. ಅದಕ್ಕೆ ಪೂರಕವಾಗಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಇದು ಸರ್ಕಾರ ನಡೆಸುವ ರೀತಿನಾ? ಅಭಿವೃದ್ಧಿ ಕೆಲಸಗಳು ಆಗದಿದ್ದಲ್ಲಿ ಜನರ ಜೀವನ ಶೈಲಿ ಮೇಲೆ ದೊಡ್ಡ ಹೊಡೆತ ಬೀಳಲಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಶಿಕ್ಷಣ, ಆರೋಗ್ಯ ಇಲಾಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ‘ಗ್ಯಾರಂಟಿ’ಗಳ ಸೋಗಿನಲ್ಲಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಗುರುವಾರ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ದುಡ್ಡಿಲ್ಲವೆಂದರೆ ಏನರ್ಥ. ಅವರ ಪಕ್ಷದ ಶಾಸಕರೇ ಅಭಿವೃದ್ಧಿಗೆ ಅನುದಾನ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಆದರೂ ಅನುದಾನ ನೀಡುತ್ತಿಲ್ಲ. ಇದನ್ನೆಲ್ಲ ನೋಡಿದರೆ ರಾಜ್ಯವನ್ನು ಎಲ್ಲಾ ರೀತಿಯಿಂದ ದಿವಾಳಿ ಮಾಡಲು ಹೊರಟಿದ್ದಾರೆ. ‘ಗ್ಯಾರಂಟಿ’ ಹೆಸರಲ್ಲಿ ಜನರಿಗೆ ಮೋಸ ಮಾಡಿ, ಇವರ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂದು ಜರಿದಿದ್ದಾರೆ.
ಈ ರೀತಿಯ ಆಡಳಿತ ನೋಡಿಯೇ ಜನ ಕೇಂದ್ರದಲ್ಲಿ ಅಧಿಕಾರದಿಂದ ಕಾಂಗ್ರೆಸ್ ಪಕ್ಷವನ್ನು ದೂರ ಇಟ್ಟಿದ್ದಾರೆ. ರಾಜ್ಯದಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಈಗಲಾದರೂ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಮಾಡಬೇಕು. ರಾಜ್ಯದ ಜನ ನೆಮ್ಮದಿಯ ಜೀವನ ನಡೆಸುವಂತಾಗಬೇಕೆಂದು ಹೇಳಿದ್ದಾರೆ.