ಶನಿವಾರ, ಅಕ್ಟೋಬರ್ 1, 2022
25 °C

ಸಚಿವ, ಶಾಸಕರ ಕಾರ್ಯಕರ್ತರ ಜಗಳ 15 ಜನರ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಬಸವಕಲ್ಯಾಣ ಶಾಸಕ ಶರಣು ‌ಸಲಗರ ಅವರ ಸಮ್ಮುಖದಲ್ಲೇ ಶನಿವಾರ ಇಲ್ಲಿ ನಡೆದ ಬಹಿರಂಗ ಜಗಳಕ್ಕೆ ಸಂಬಂಧಿಸಿದಂತೆ ಎರಡೂ‌ ಕಡೆಯ 15 ಜನರ ವಿರುದ್ಧ ಬಸವಕಲ್ಯಾಣ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಗವಂತ ಖೂಬಾ ಅವರು ಬೀದರ್‌ನಿಂದ ವಾಹನ ರ‍್ಯಾಲಿ ಮೂಲಕ ನಗರಕ್ಕೆ ಬಂದಾಗ ಕೆಲವರು ಸಚಿವರ ಕಾರನ್ನು ಜಖಂಗೊಳಿಸಿ ನಂಬರ್‌ ಪ್ಲೇಟ್ ಕಿತ್ತು ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಚಿವರ ಬೆಂಬಲಿಗ ಅಮೂಲ್ ಸದಾನಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಗಣೇಶ ಕುದರೆ ಪ್ರತಾಪುರ, ಶರಣು ಗುಗಳೆ, ಶಿವಕುಮಾರ ಹಳ್ಳೆ, ಅನಿಲ ಸಿಂಪಿ, ಸಲ್ಮಾನ್ ಖುರ್ಷಿದ್, ಭೀಮಣ್ಣ ಲಡ್ಡೆ, ಶಿವಕುಮಾರ ಆಗ್ರೆ, ಸಾಗರ ಸುಗೂರೆ, ಪವನ ರಾಠೋಡ್, ಸತೀಶ ರಾಠೋಡ್, ಸಾಗರ ರಾಠೋಡ, ವಿಜಯ ಚವಾಣ್, ಸಿದ್ದು ಬಿರಾದಾರ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದಲ್ಲದೆ ಶಾಸಕ ಸಲಗರ ಅವರ ಬೆಂಬಲಿಗರಾದ ನಗರಸಭೆ ಸದಸ್ಯ ಸಿದ್ದು ಬಿರಾದಾರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ನೊಂದವರು ನೀಡಿರುವ ದೂರಿನ ಮೇರೆಗೆ ಸಚಿವರ ಬಣದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಮತ್ತು ಅವರ ಸಹೋದರ ಶ್ರೀನಿವಾಸರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಬಸವಕಲ್ಯಾಣದಲ್ಲಿ ಶನಿವಾರ ಸಂಜೆ ಬಿಜೆಪಿಯ ಎರಡು ಗುಂಪುಗಳ ಮಧ್ಯೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಎರಡೂ ಗುಂಪುಗಳು ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿವೆ. ವಿಚಾರಣೆ ಮುಂದುವರಿದಿದ್ದು, ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ತಿಳಿಸಿದ್ದಾರೆ.

'ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರದಲ್ಲಿ ಪ್ರಸ್ತುತ ಮಾತನಾಡಲು ಬಯಸುವುದಿಲ್ಲ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಹೇಳಿದ್ದಾರೆ.

 ’ಪ್ರಕರಣ ಪೊಲೀಸ್‌ ಠಾಣೆ ಕಟ್ಟೆ ಏರಿರುವ ಕಾರಣ ಈ ವಿಷಯದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಲಾರೆ‘ ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ.

 
ಸಲಗರ ಬೆಂಬಲಿಗರಿಂದ ಹಿಟ್ಲರ್ ಶಾಹಿ ವರ್ತನೆ

ಬಸವಕಲ್ಯಾಣ: ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಶರಣು ಸಲಗರ ಕಾರ್ಯಕರ್ತರ ಮಧ್ಯೆ ಶನಿವಾರ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಪ್ರತಿಕ್ರಿಯೆ ನೀಡಿ 'ಶಾಸಕ ಶರಣು ಸಲಗರ ಹಿಟ್ಲರ್ ಶಾಹಿ ವರ್ತನೆ ನಡೆಸುತ್ತಿದ್ದಾರೆ. ನನ್ನದೇ ನಡೆಯಬೇಕು ಎನ್ನುವ ಮನಸ್ಥಿತಿಯಲ್ಲಿ ಇದ್ದಾರೆ' ಎಂದು ಕಟುವಾಗಿ ಟೀಕಿಸಿದ್ದಾರೆ.

‘ಶಾಸಕರ ಬೆಂಬಲಿಗರು ಕೇಂದ್ರ ಸಚಿವರ ಮೇಲೆ ಹಲ್ಲೆ ನಡೆಸುವುದು ಖಂಡನೀಯ. ಇಂಥ ಕೃತ್ಯ ನಡೆಸಿರುವುದು ನೋಡಿದರೆ ಇದು ಬಿಹಾರವೇ ಎಂಬ ಅನುಮಾನ ಬರುತ್ತಿದೆ. ಕಾರ್ಯಕರ್ತರು ನನ್ನದೇ ಜೈಕಾರ ಕೂಗಬೇಕು ಎಂದು ಅವರು ಬಯಸಿದ್ದರು. ಆದರೆ ಸಚಿವರು ಯಾರದ್ದೂ ಬೇಡ ಭಾರತ ಮಾತಾ ಕಿ ಜೈ ಎಂದರೆ ಸಾಕು ಎಂದಿದ್ದಕ್ಕಾಗಿ ಜಗಳ ಹುಟ್ಟಿಕೊಂಡಿತು' ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು