ಬುಧವಾರ, ಮೇ 18, 2022
23 °C

ಕೇಂದ್ರ ಸಚಿವ ಖೂಬಾ ಹೇಳಿಕೆ ಹಾಸ್ಯಾಸ್ಪದ: ಅರವಿಂದಕುಮಾರ ಅರಳಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ದಾರಿ ತಪ್ಪಿಸುವಂಥದ್ದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಟೀಕಿಸಿದ್ದಾರೆ.
ಖೂಬಾ ಅವರು ಮೋದಿ, ಆರ್‍ಎಸ್‍ಎಸ್ ಮೆಚ್ಚಿಸಲು ಹಾಗೂ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಯ ಬಳತ (ಬಿ) ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಅವರು ನೀಡಿದ ಹೇಳಿಕೆಯಲ್ಲಿ ಸತ್ಯವಿದೆ. ಅವರು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದಕ್ಕೆ ಬಿಜೆಪಿಯವರಿಗೆ ಸಂಕಟವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ಕೆಟ್ಟ ನೀತಿಗಳಿಂದಾಗಿ ದೇಶದಲ್ಲಿ ಅರಾಜಕತೆ ಮೂಡಿದೆ. ರೈತರು, ಯುವಕರು, ಬಡವರು ಬೀದಿ ಪಾಲಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವ ಭರವಸೆ ನೀಡಿದ್ದು ಯಾರು, ಮೂರು ಕರಾಳ ಕಾನೂನುಗಳನ್ನು ತಂದು ನಂತರ ವಾಪಸ್ ಪಡೆದದ್ದು ಯಾರು, ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿಸಿದ್ದು, ಅಡುಗೆ ಅನಿಲ ದುಬಾರಿಯಾಗಿದ್ದು ಯಾರು, ಬಿಎಸ್‍ಎನ್‍ಎಲ್, ಏರ್‍ಪೋರ್ಟ್, ಹಡಗು, ಬಂದರು, ಎಲ್‍ಐಸಿ ಸೇರಿ ಸಾರ್ವಜನಿಕ ಸ್ವತ್ತುಗಳ ಖಾಸಗೀಕರಣ, ಹಿಜಾಬ್, ಹಲಾಲ್, ಝಟಕ್, ಆಜಾನ್, ಚರ್ಚೆಗಳ ಮೇಲೆ ದಾಳಿ ಮಾಡುತ್ತಿರುವುದು ಯಾರು ಎನ್ನುವ ಬಗ್ಗೆ ಸಚಿವರು ಯೋಚಿಸಬೇಕು ಎಂದು ಹೇಳಿದ್ದಾರೆ.

ಬಡವರಿಗೆ ಅಡುಗೆ ಅನಿಲ ಸಿಲಿಂಡರ್ ನೀಡಿದ್ದರ ಬಗ್ಗೆ ಮಾತನಾಡುವ ಸಚಿವರು ಸಿಲಿಂಡರ್ ರಿಫಿಲ್ ಮಾಡಿಸಿಕೊಂಡ ಕುಟುಂಬಗಳ ಮಾಹಿತಿ ನೀಡಬೇಕು. ಕಿಸಾನ್ ಸಮ್ಮಾನ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಿರುವ ಅವರು ಎಷ್ಟು ರೈತರಿಗೆ ನಿಜವಾಗಿ ಯೋಜನೆ ಲಾಭ ತಲುಪಿದೆ ಎನ್ನುವುದನ್ನು ತಿಳಿಸಬೇಕು. ಬಿಜೆಪಿಯವರ ಬಾಲಿಶತನದ ಹೇಳಿಕೆ ಸರಿಯಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ಅವರು ಸಂವಿಧಾನದ ಬಗ್ಗೆ ಮಾತನಾಡುತ್ತ ತಿರುಗುತ್ತಿದ್ದರು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಬಿಜೆಪಿ ನಾಯಕರ ಕಾರ್ಯಗಳನ್ನು ಗಮನಿಸಿದರೆ ಸಂವಿಧಾನ ಬದಲಾವಣೆ ಹುನ್ನಾರ ಕಂಡು ಬರುತ್ತದೆ. ಹೀಗಾಗಿ ಖರ್ಗೆ ಅವರು ಆತಂಕ ವ್ಯಕ್ತಪಡಿಸಿ, ಜನರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದು ತಪ್ಪೇ ಎಂದು ಪ್ರಶ್ನಿಸಿದ್ದಾರೆ.

ಜಾತಿ ರಾಜಕಾರಣ ಮಾಡುತ್ತಿರುವ ಬಿಜೆಪಿಯವರಿಗೆ ಯಾವ ರೀತಿ ಹೇಳಿದರೂ ಸಾಲದು. ಜನರನ್ನು ಮತಾಂಥರಾಗಿಸುವ ಬಿಜೆಪಿ ಕಾರ್ಯ ಸರಿಯೇ, ಈ ಬಗ್ಗೆ ಖೂಬಾ ಅವರು ಅರಿತುಕೊಂಡರೆ ಒಳ್ಳೆಯದು ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು