ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 7 ರಿಂದ ವಚನ ವಿಜಯೋತ್ಸವ

ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಕ್ಕ ಅನ್ನಪೂರ್ಣ ಮಾಹಿತಿ
Last Updated 1 ಜನವರಿ 2020, 15:16 IST
ಅಕ್ಷರ ಗಾತ್ರ

ಬೀದರ್: ‘2020ನೇ ಸಾಲಿನ ವಚನ ವಿಜಯೋತ್ಸವವನ್ನು ನಗರದ ಬಸವಗಿರಿಯಲ್ಲಿ ಫೆಬ್ರುವರಿ 7, 8 ಮತ್ತು 9 ರಂದು ಅರ್ಥಪೂರ್ಣ ಹಾಗೂ ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಅಕ್ಕ ಅನ್ನಪೂರ್ಣ ಹೇಳಿದರು.

ಇಲ್ಲಿಯ ಶರಣ ಉದ್ಯಾನದಲ್ಲಿ ನಡೆದ ವಚನ ವಿಜಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಕನ್ನಡದ ಅಂತಃಸತ್ವ, ಮಾನವೀಯ ಮೌಲ್ಯಗಳ ಆಗರವಾದ ವಚನಗಳನ್ನು ಉಳಿಸಿಕೊಟ್ಟದ್ದರ ಹಿಂದೆ ಅನೇಕ ಶರಣರ ಬಲಿದಾನವಾಗಿದೆ. ವಚನ ಸಾಹಿತ್ಯ ಸಂರಕ್ಷಣೆಗಾಗಿ ತ್ಯಾಗ, ಬಲಿದಾನಗೈದವರ ಸಂಸ್ಮರಣೆಗಾಗಿ ಲಿಂಗಾಯತ ಮಹಾಮಠದಿಂದ ಪ್ರತಿವರ್ಷ ವಚನ ವಿಜಯೋತ್ಸವ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಬಸವಾದಿ ಶರಣರ ಆಶಯದಂತೆ ಸಮಾರಂಭ ಆಯೋಜಿಸಲಾಗುತ್ತಿದ್ದು, ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಸಮಾರಂಭದಲ್ಲಿ ವಚನಗಳಿಗೆ ಪಟ್ಟಗಟ್ಟಿ, ಹೂವಿನ ರಥದಲ್ಲಿ ಮೆರವಣಿಗೆ ಮಾಡಿ ವಚನಗಳಿಗೆ ಪರಮೋಚ್ಛ ಗೌರವ ಸಲ್ಲಿಸಲಾಗುತ್ತಿದೆ’ ಎಂದು ನುಡಿದರು.

ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ ಮಾತನಾಡಿ, ‘ಬೀದರ್ ಜಿಲ್ಲೆಗೆ ಗೌರವ ತಂದುಕೊಟ್ಟ ಕಾರ್ಯಕ್ರಮ ವಚನ ವಿಜಯೋತ್ಸವ. ನಾವೆಲ್ಲ ತನು-ಮನ-ಧನದಿಂದ ಕಾರ್ಯಕ್ರಮದ ಯಶಸ್ಸಿಗೆ ದುಡಿಯೋಣ’ ಎಂದರು.

ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಮತೆ, ‘ವಚನ ವಿಜಯೋತ್ಸವ ಶರಣ ಸಂಸ್ಕೃತಿ ಉಳಿಸಿ-ಬೆಳೆಸುವ ಉತ್ಸವವಾಗಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ‘ಕನ್ನಡ ಬೇರೆಯಲ್ಲ, ವಚನಗಳು ಬೇರೆಯಲ್ಲ. ಆದ್ದರಿಂದ ವಚನಗಳಿಗಾಗಿ ದುಡಿಯುವುದು ನಮ್ಮೆಲ್ಲರ ಕರ್ತವ್ಯ’ ಎಂದು ತಿಳಿಸಿದರು.

ಉದ್ಯಮಿ ಗುರುನಾಥ ಕೊಳ್ಳೂರ, ‘ಶಿಸ್ತು ಮತ್ತು ಅಚ್ಚುಕಟ್ಟುತನಕ್ಕೆ ಹೆಸರಾದ ವಚನ ವಿಜಯೋತ್ಸವವು ನಮ್ಮೆಲ್ಲರ ಮೌಲ್ಯವರ್ಧನೆಗೆ ಕಾರಣವಾಗಿದ್ದು, ಹೊರದೇಶಗಳಲ್ಲಿಯೂ ಬಸವ ಭಕ್ತರ ಗಮನ ಸೆಳೆದಿದೆ’ ಎಂದರು.

ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ ಅವರು, ಒಂದು ಸಾವಿರ ಯುವಕರನ್ನು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ನೀಲ ನಕ್ಷೆ ನೀಡಿದರು.

ವಿರೂಪಾಕ್ಷ ಗಾದಗಿ, ವೀರಶೆಟ್ಟಿ ಪಟ್ನೆ ಮಾತನಾಡಿದರು. ಡಾ. ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿದ್ದರು. ಚಂದ್ರಶೇಖರ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು. ಶಂಕರೆಪ್ಪ ಹೊನ್ನಾ, ಸಿ.ಎಸ್. ಪಾಟೀಲ, ಸಂತೋಷ ತಾಳಂಪಳ್ಳಿ, ಸೂರ್ಯಕಾಂತ ಅಲ್ಮಾಜೆ, ಶ್ರೀಕಾಂತ ಸ್ವಾಮಿ, ರವಿ ಬೆಟ್ಟದ್, ಪ್ರಶಾಂತ ಭಾವಿಕಟ್ಟಿ, ಸಂಜು, ಶರಣಪ್ಪ ಮಿಠಾರೆ, ಸಿ.ಎಸ್. ಗಣಚಾರಿ, ಅಣವೀರ ಕೊಡಂಬಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT