ಶುಕ್ರವಾರ, ಸೆಪ್ಟೆಂಬರ್ 25, 2020
28 °C
ಮಾರುಕಟ್ಟೆಯಲ್ಲಿ ಹಿರಿತನ ಕಳೆದುಕೊಂಡ ಹಿರೇಕಾಯಿ

ಗಜ್ಜರಿ, ಬೀನ್ಸ್‌ ಬೆಲೆ ಏರಿಕೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತವಾಗಿದೆ. ಗ್ರಾಹಕರು ಹೆಚ್ಚು ಇಷ್ಟಪಡುವ ತರಕಾರಿ ಬೆಲೆ ಏರಿದರೆ, ಸಹಜವಾಗಿ ಮಾರಾಟವಾಗುವ ತರಕಾರಿ ಬೆಲೆ ಸ್ಥಿರವಾಗಿದೆ. ಕೆಲ ತರಕಾರಿ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡು ಬಂದಿದೆ.

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹ 13,000 ಇದೆ. ಕಳೆದ ಮೂರು ವಾರಗಳಿಂದ ಬೆಳ್ಳುಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಮಳೆಗಾಲ ಪೂರ್ಣಗೊಳ್ಳುವ ವರೆಗೂ ಬೆಲೆ ಇಳಿಕೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಜಿಲ್ಲೆಯ ಜನರ ಅಚ್ಚುಮೆಚ್ಚಿನ ಬದನೆಕಾಯಿ, ಎಲೆಕೋಸು, ತೊಂಡೆಕಾಯಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.

ಹಸಿಮೆಣಸಿನಕಾಯಿ, ಗಜ್ಜರಿ, ಬೀನ್ಸ್‌ ಹಾಗೂ ಬಿಟ್‌ರೂಟ್‌ ಬೆಲೆ ಕ್ವಿಂಟಲ್‌ಗೆ ₹ 2 ಸಾವಿರ ಏರಿಕೆಯಾಗಿದೆ. ಹೂಕೋಸು, ಮೆಂತೆ ಹಾಗೂ ಸಬ್ಬಸಗಿ ಸೊಪ್ಪು ₹ 1 ಸಾವಿರ ಹಾಗೂ ಈರುಳ್ಳಿ ಬೆಲೆ ₹ 500 ಹೆಚ್ಚಳವಾಗಿದೆ. ಹಿರೇಕಾಯಿ, ಬೆಂಡೆಕಾಯಿ, ಟೊಮೆಟೊ, ಕೊತಂಬರಿ ಹಾಗೂ ಪಾಲಕ್‌ ಬೆಲೆಯಲ್ಲಿ ಒಂದು ಸಾವಿರ ರೂಪಾಯಿ ಇಳಿಕೆಯಾಗಿದೆ.

ಬೆಂಗಳೂರು ಸಮೀಪದ ಅರಸಿಕೆರೆಯಿಂದ ಟೊಮೆಟೊ, ಬೆಳಗಾವಿಯಿಂದ ಮೆಣಸಿನಕಾಯಿ, ಹೈದರಾಬಾದ್‌ನಿಂದ ಬೀನ್ಸ್, ತೊಂಡೆಕಾಯಿ, ಗಜ್ಜರಿ, ಬಿಟ್‌ರೂಟ್‌, ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನಲ್ಲಿ ಬೆಳೆದ ಹೂಕೋಸು, ಮೆಂತೆ, ಕರಿಬೇವು, ಪಾಲಕ್‌, ಬೆಂಡೆಕಾಯಿ, ಹಿರೇಕಾಯಿ ಬೀದರ್‌ ಮಾರುಕಟ್ಟೆಗೆ ಬಂದಿದೆ.

ಬೆಳಗಾವಿಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತರಕಾರಿಗೆ ಹಾನಿಯಾಗುತ್ತಿದೆ. ಹೀಗಾಗಿ ಅಲ್ಲಿನ ಮಾರುಕಟ್ಟೆಗೂ ಮೆಣಸಿನಕಾಯಿ ಆವಕ ಕಡಿಮೆ ಆಗುತ್ತಿವೆ. ಬೇಡಿಕೆ ಹೆಚ್ಚಳವಾಗಿರುವ ಕಾರಣ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 7 ಸಾವಿರಕ್ಕೆ ಏರಿದೆ. ಅಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯು ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆಯ ಮೇಲೂ ಪರಿಣಾಮ ಬೀರಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ತರಕಾರಿ ಸಗಟು ವ್ಯಾಪಾರಿ ಶಿವಕುಮಾರ ಹೂಗೇರಿ.

‘ಭಾನುವಾರ ಪಂಚಮಿ ಹಬ್ಬಕ್ಕೆ ದೇವರಿಗೆ ಹೋಳಿಗೆ, ಬದನೆಕಾಯಿ ಪಲ್ಯ ನೈವೇದ್ಯ ಸಮರ್ಪಿಸಲಿದ್ದಾರೆ. ಬದನೆಕಾಯಿ ಬೆಲೆ ಸ್ಥಿರವಾಗಿರುವುದು ಗ್ರಾಹಕರಿಗೆ ಸಂತಸ ತಂದಿದೆ’ ಎಂದು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.