ಬೀದರ್: ಸೇಡಂನಲ್ಲಿ 2025ರ ಜನವರಿಯಲ್ಲಿ ನಡೆಯಲಿರುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಕೊತ್ತಲ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಹಮ್ಮಿಕೊಂಡಿರುವ ‘ಕಲ್ಯಾಣ ಕರ್ನಾಟಕ ವಿಕಾಸ ಪಥ’ ರಥಯಾತ್ರೆ ಶನಿವಾರ (ಸೆ. 7) ಜಿಲ್ಲೆಗೆ ಬರಲಿದೆ.
ಸಮಾವೇಶದ ಪ್ರಚಾರಾರ್ಥ ಸ್ವಾಮೀಜಿ ಅವರು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 48 ತಾಲ್ಲೂಕುಗಳಲ್ಲಿ ಐದು ಸಾವಿರ ಕಿ.ಮೀ. ರಥಯಾತ್ರೆ ಹಮ್ಮಿಕೊಂಡಿದ್ದಾರೆ. ಈಗಾಗಲೇ 40 ತಾಲ್ಲೂಕುಗಳಲ್ಲಿ ಯಾತ್ರೆ ಪೂರ್ಣಗೊಳಿಸಿದ್ದು, ಸೆ. 7 ರಿಂದ 10 ರ ವರೆಗೆ ಜಿಲ್ಲೆಯಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.
ಸೆ. 7ರಂದು ಬೆಳಿಗ್ಗೆ 10ಕ್ಕೆ ಹುಮನಾಬಾದ್, ಮಧ್ಯಾಹ್ನ 2.30ಕ್ಕೆ ಬಸವಕಲ್ಯಾಣದಲ್ಲಿ ಸಭೆ ನಡೆಸಿ, ಸಾರ್ವಜನಿಕರನ್ನು ಸಮಾವೇಶಕ್ಕೆ ಆಹ್ವಾನಿಸಲಿದ್ದಾರೆ. ರಾತ್ರಿ ಹಾರಕೂಡದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸೆ. 8ರಂದು ಬೆಳಿಗ್ಗೆ 10ಕ್ಕೆ ಹಾರಕೂಡ, ಮಧ್ಯಾಹ್ನ 2ಕ್ಕೆ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠ, ಸಂಜೆ 6ಕ್ಕೆ ಭಾಲ್ಕಿಯಲ್ಲಿ ಸಭೆ ನಡೆಸಲಿದ್ದಾರೆ. ಸೆ. 9 ರಂದು ಬೆಳಿಗ್ಗೆ 10ಕ್ಕೆ ಔರಾದ್ ಅಮರೇಶ್ವರ ಮಂದಿರದಲ್ಲಿ, ಮಧ್ಯಾಹ್ನ 2ಕ್ಕೆ ಬೀದರ್‌ನ ಸಿದ್ಧಾರ್ಥ ಕಾಲೇಜು ಸಮೀಪ ರಥಕ್ಕೆ ಸ್ವಾಗತಿಸಿ ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂಜೆ 6ಕ್ಕೆ ನಗರದ ಸಿದ್ಧಾರೂಢ ಮಠದಲ್ಲಿ ಶಿವಕುಮಾರ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ ಹಾಗೂ ರಾಜಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಭೆ ನಡೆಯಲಿದೆ. ಸೆ. 10 ರಂದು ಬೆಳಿಗ್ಗೆ 10ಕ್ಕೆ ಚಿಟಗುಪ್ಪದಲ್ಲಿ ಸಭೆ ಜರುಗಲಿದೆ. ನಂತರ ರಥ ಯಾತ್ರೆಯು ಚಿಂಚೋಳಿ ತಾಲ್ಲೂಕಿಗೆ ತೆರಳಲಿದೆ ಎಂದು ಹೇಳಿದ್ದಾರೆ.
9 ದಿನಗಳ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಮಾತೆ, ದೇಶ, ಧರ್ಮ, ಸಂಸ್ಕೃತಿ, ಶಿಕ್ಷಣ, ಸ್ವಯಂ ಉದ್ಯೋಗ, ಯುವ ಶಕ್ತಿ, ಆಹಾರ-ಆರೋಗ್ಯ, ಪರಿಸರ, ಕೃಷಿ, ಗ್ರಾಮ, ಸ್ವದೇಶಿ ಸ್ವಾಭಿಮಾನ ಇತ್ಯಾದಿ ವಿಷಯಾಧಾರಿತ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.