ಗುರುವಾರ , ಏಪ್ರಿಲ್ 9, 2020
19 °C
ಕೊರೆಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಡಕುಂದಾ ಗ್ರಾಮದಲ್ಲಿ ಸಮಸ್ಯೆ

ಚರಂಡಿ ದುರ್ವಾಸನೆಯಿಂದ ಜನರಿಗೆ ಜಾಗರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಮಲನಗರ: ತಾಲ್ಲೂಕಿನ ಠಾಣಾಕುಶನೂರು ವಲಯದ ಕೊರೆಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಡಕುಂದಾ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯನ್ನು ಸಮಸ್ಯೆಗಳು ಕಾಡುತ್ತಿವೆ.

ಕಳೆದ ಒಂದು ವರ್ಷದಿಂದ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ. ಚರಂಡಿ ಹೊಲಸು ಸರಾಗವಾಗಿ ಹರಿದು ಹೋಗದಿರುವುದರಿಂದ ಅಲ್ಲಿಯೇ ಸಂಗ್ರವಾದ ಹೊಲಸು ನೀರು ಹಂದಿಗಳ ವಾಸಸ್ಥಾನವಾಗಿದೆ. ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.

ವಿವಿಧ ಯೋಜನೆಗಳ ಅಡಿಯಲ್ಲಿ ಕೆಲ ಕಾಮಗಾರಿಗಳು ನಡೆದಿವೆ. ಆದರೆ, ಅನುಷ್ಠಾನದಲ್ಲಿನ ಸಮಸ್ಯೆಗಳಿಂದಾಗಿ ಜನರಿಗೆ ಅನುಕೂಲವಾಗುತ್ತಿಲ್ಲ. ಹೀಗಾಗಿ ಅಲ್ಲಿನ ಜನರಿಗೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಗ್ರಾಮಸ್ಥರನ್ನು ತೀವ್ರವಾಗಿ ಕಾಡುತ್ತಿವೆ. ಈ ಹಿಂದೆ ಗ್ರಾಮೋದಯ, ಜಿ.ಪಂ, ತಾ.ಪಂ ಮತ್ತು ಉದ್ಯೋಗ ಖಾತ್ರಿ ಮತ್ತಿತರ ಯೋಜನೆಗಳಲ್ಲಿ ಚರಂಡಿ ನಿರ್ಮಿಸಲಾಗಿದೆ.

ರಸ್ತೆ ಅಕ್ಕ ಪಕ್ಕದಲ್ಲಿ ಚರಂಡಿ ನಿರ್ಮಿಸದ ಕಾರಣ ಹೊಲಸು ನೀರು ಊರಿನ ಹೊರಗೆ ಹರಿದು ಹೋಗುವಂತಹ ವ್ಯವಸ್ಥೆ ಮಾಡಲಾಗಿಲ್ಲ. ಇಳಿಜಾರು ಕಾಯ್ದು ಕೊಳ್ಳದಿರುವುದರಿಂದ ಚರಂಡಿಗಳಲ್ಲಿ ಹೊಲಸು ತುಂಬಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ ಗ್ರಾಮದ ಜನರು ಚರಂಡಿ ನೀರಿನ ಪಕ್ಕದ ಮಧ್ಯದಲ್ಲಿಯೇ ಕೊಳವೆಬಾವಿ ನೀರು ತೆಗೆದುಕೊಳ್ಳುವುದು ಮತ್ತು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಲ್ಪ ಮಳೆ ಬಿಳುತ್ತಲೇ ಚರಂಡಿಯಲ್ಲಿನ ಹೊಲಸು ರಸ್ತೆಯಲ್ಲಿ ತುಂಬಿಕೊಂಡು ನಡೆಯಲು ಬಾರದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಮೂಗು ಮುಚ್ಚಿಕೊಂಡು ಬನ್ನಿ…! ಎಂಬ ಬೋರ್ಡ್ ಹಾಕುವ ಅಗತ್ಯವಿದೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ಕುಡಿಯುವ ನೀರಿನ ಸಮಸ್ಯೆಯೂ ಗ್ರಾಮಸ್ಥರನ್ನು ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿದೆ. ಶೌಚಾಲಯ ಸಮಸ್ಯೆಯೂ ಗಂಭೀರವಾಗಿದೆ. ಸಂಪೂರ್ಣ ನೈರ್ಮಲ್ಯ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಅವಕಾಶವಿತ್ತು. ಆದರೆ, ಸ್ಥಳದ ಕೊರತೆ ಮಾಹಿತಿ ಕೊರತೆಯಿಂದಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಕೆಲವರಿಗೆ ಆಗಲಿಲ್ಲ. ಹೀಗಾಗಿ ಜನ ತಂಬಿಕೆ ಹಿಡಿದುಕೊಂಡು ಹೋಗುವುದು ಅನಿವಾರ್ಯವಾಗಿದೆ.

ಅಭಿವೃದ್ಧಿ ನೆಪದಲ್ಲಿ ಎಷ್ಟರಮಟ್ಟಿಗೆ ಹಣ ಬಳಕೆಯಾಗುತ್ತಿದೆ ಎನ್ನುವುದು ಬೇರೆ ಸಂಗತಿ. ಆದರೆ, ಒಟ್ಟಾರೆಯಲ್ಲಿ ಅಭಿವೃದ್ಧಿ ಮಂತ್ರ ಹೇಳಿ ಹಣ ಮಾತ್ರ ಖರ್ಚಾಗುತ್ತಿರುವುದಂತು ಸತ್ಯ. ಈ ಸತ್ಯವನ್ನು ಮೆಲಾಧಿಕಾರಿಗಳ ಗಮನಕ್ಕೂ ಭಂದಿದೆ. ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳು ಮೌನಕ್ಕೆ ಶರಣಾಗುತ್ತಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಕೂಡಲೇ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನು ಒದಗಿಸಲು ಕ್ರಮಕೈಗೊಳ್ಳಬೇಕು. ಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅನೀಲಕುಮಾರ ಶಂಕರ ಮಾನೆ, ಝರೆಪ್ಪ ಶ್ರೀಪತಿ, ವೀರಶೇಟ್ಟಿ ಶಂಕರ ಕಾಂಬಳೆ, ಶ್ರೀಮಂತ ಝರೆಪ್ಪ, ನಾಗೇಶ ಕಾಂಬಳೆ, ನಿವಾಸ ಲಾಖೆ, ವಿಜಯಕುಮಾರ ಮಾನೆ, ಶ್ರೀಮಂತ ಹಾಗೂ ಮಹಿಳೆಯರು
ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು