ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ | ಕಚ್ಚಾ ರಸ್ತೆ: ಡಾಂಬರಿಕರಣಕ್ಕೆ ಗ್ರಾಮಸ್ಥರ ಆಗ್ರಹ

ವೀರೇಶ ಮಠಪತಿ
Published 18 ಮೇ 2024, 7:07 IST
Last Updated 18 ಮೇ 2024, 7:07 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಭವಾನಿ ನಗರಕ್ಕೆ ಗೋವಿಂದ ತಾಂಡದಿಂದ ಸಂಪರ್ಕ‌ ಕಲ್ಪಿಸುವ 2 ಕಿ.ಮೀ ಉದ್ದದ ಮಣ್ಣಿನ ರಸ್ತೆ 14 ವರ್ಷಗಳಿಂದ ಅಭಿವೃದ್ಧಿಗೊಳ್ಳದೇ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರು ಹಾಗೂ ವಾಹನ ಚಾಲಕರು ಪರದಾಡುತ್ತಿದ್ದಾರೆ.

ಈ ರಸ್ತೆಯು ಮುತ್ತಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಮದರಗಿ ಗ್ರಾಮ, ಗೋವಿಂದ ತಾಂಡಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಈ ರಸ್ತೆಗೆ ಅನುದಾನ ಒದಗಿಸಬೇಕೆಂದು ಕೇಳಿಕೊಳ್ಳಲಾಗಿತ್ತು. ಆದರೆ, ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಯಾವ ಯೋಜನೆಯೂ ಈ ರಸ್ತೆಗೆ ಬಂದಿಲ್ಲ ಎಂದು ಗ್ರಾಮದ ಚಂದು, ಗೋಪಾಲ ರಾಠೋಡ್‌ ಆಕ್ಷೇಪಿಸಿದ್ದಾರೆ.

ಈ ರಸ್ತೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವ ಜನಪ್ರತಿನಿಧಿಗಳು ಚುನಾವಣೆ ಬಳಿಕ ಈ ಕಡೆ ತಲೆಹಾಕುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ರಸ್ತೆ ಬಗ್ಗೆ ಜನಪ್ರತಿನಿಧಿಗಳು ಅಭಿವೃದ್ಧಿ ಪಡಿಸದಿದ್ದಲ್ಲಿ ಮುಂಬರುವ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

’ಮಳೆಗಾಲದಲ್ಲಿ ರಸ್ತೆ ತುಂಬ ನೀರು ನಿಂತು ಎಲ್ಲಂದರಲ್ಲಿ ಕೆಸರು ಉಂಟಾಗಿ ದ್ವಿಚಕ್ರ ವಾಹನವೂ ಸಂಚರಿಸಲು ಕಷ್ಟವಾಗುತ್ತದೆ. ಆಸ್ಪತ್ರೆ ಇತರ ತುರ್ತು ಕೆಲಸಕ್ಕೆ ಗ್ರಾಮಸ್ಥರು ಹೋಗುವುದು ಸಾಧ್ಯವಾಗುತ್ತಿಲ್ಲ. ಶಾಲಾ ಮಕ್ಕಳು ನಡೆದುಕೊಂಡು ಸಮೀಪದ ಗೋವಿಂದ ತಾಂಡ, ಮದರಗಿ ಗ್ರಾಮಗಳಿಗೆ ಹೋಗಬೇಕಾಗಿದೆ, ಮಳೆಗಾಲದಲ್ಲಿ ಶಾಲೆಗೆ ಹೋದ ಮಕ್ಕಳು ಮರಳಿ ಮನೆಗೆ ಬರುವವರೆಗೂ ಚಾತಕ ಪಕ್ಷಿಯಂತೆ ಎದಿರು ನೋಡುತ್ತ ಕುಳಿತುಕೊಳ್ಳುವಂತಾಗಿದೆ ಪಾಲಕರ ಸ್ಥಿತಿ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಡಾಂಬರಿಕರಣ ಮಾಡಬೇಕು’ ಎಂದು ಗ್ರಾಮದ ಪುನು ನಾಯಕ್ ಆಗ್ರಹಿಸಿದ್ದಾರೆ.

ಅನೀಲ ರಾಠೋಡ್
ಅನೀಲ ರಾಠೋಡ್
ಗ್ರಾಮೀಣ ಭಾಗದ ನಿವಾಸಿಗರಿಗೆ ಮೂಲ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿರುವ ಭವಾನಿ ನಗರ ನಿವಾಸಿಗರಿಗೆ ತಕ್ಷಣ ರಸ್ತೆ ಡಾಂಬರಿಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಬೇಕು
ಅನೀಲ ರಾಠೋಡ್‌, ಗ್ರಾಮ ನಿವಾಸಿ
ನನೆಗುದಿಗೆ ಬಿದ್ದಿರುವ ರಸ್ತೆಗಳ ಬಗ್ಗೆ ಸರ್ಕಾರ ವರದಿ ಕೇಳಿದ್ದು ಸದರಿ ರಸ್ತೆ ಬಗ್ಗೆಯೂ ವರದಿ ನೀಡಲಾಗಿದೆ. ಯಾವುದೇ ಬಜೇಟ್‌ ಲಭ್ಯವಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ ಅನುದಾನ ಬಂದಲ್ಲಿ ಡಾಂಬರಿಕರಣ ಆರಂಭಿಸಲಾಗುತ್ತದೆ
-ಸುಭಾಷ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪಂಚಾಯತ್‌ ರಾಜ್ ವಿಭಾಗ ಹುಮನಾಬಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT