ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ | ಜನರ ನೀರಿನ ದಾಹ ತೀರಿಸದ ವಾಟರ್‌ ಫಿಲ್ಟರ್‌ಗಳು

ಹಣ ಖರ್ಚಾದರೂ ಬಳಕೆಗೆ ಬಾರದ ವಾಟರ್‌ ಫಿಲ್ಟರ್‌: ಆಕ್ರೋಶ
ಬಸವರಾಜ್‌ ಎಸ್‌.ಪ್ರಭಾ
Published 14 ಮೇ 2024, 5:07 IST
Last Updated 14 ಮೇ 2024, 5:07 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣ ವಾಸಿಗಳಿಗೆ, ನಾನಾ ಕಾರ್ಯ ನಿಮಿತ್ತ ತಾಲ್ಲೂಕು ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ನೀರಿನ ದಾಹ ತೀರಿಸಲು ಅನುಕೂಲವಾಗಬೇಕಿದ್ದ ವಾಟರ್‌ ಫಿಲ್ಟರ್‌ಗಳು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳು ಬಿದ್ದಿವೆ.

ಪಟ್ಟಣದ ಮಹಾತ್ಮ ಗಾಂಧಿ ವೃತ್ತ ಸಮೀಪ, ತರಕಾರಿ ಮಾರುಕಟ್ಟೆ, ಬಸವೇಶ್ವರ ವೃತ್ತ ಸಮೀಪದ ಪ್ರವಾಸಿ ಮಂದಿರದ ಕಾಂಪೌಂಡ್‌ ಗೋಡೆಗೆ ಅಳವಡಿಸಿರುವ ವಾಟರ್‌ ಫಿಲ್ಟರ್‌ಗಳು ರೋಗಗ್ರಸ್ಥ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ತೆರಿಗೆ ಹಣ ವ್ಯರ್ಥ ಪೋಲಾಗುತ್ತಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ಜನರಿಗೆ ನೀರು ಕುಡಿಯಲು ಅನುಕೂಲ ಆಗಬೇಕು ಎಂಬ ಸದುದ್ದೇಶದಿಂದ ಐದಾರು ತಿಂಗಳುಗಳ ಮುಂಚೆ ಮೂರು ಸ್ಥಳಗಳಲ್ಲಿ ಅಳವಡಿಸಿದ್ದ ವಾಟರ್‌ ಫಿಲ್ಟರ್‌ಗಳು ನಾನಾ ಸಮಸ್ಯೆಗಳಿಂದ ಬಳಲುತ್ತಿವೆ. ಮೇ ತಿಂಗಳ ತೀವ್ರ ಬಿಸಿಲಿನಿಂದ ಪ್ರತಿದಿನ ಬಸವಳಿಯುತ್ತಿರುವ ಸಾರ್ವಜನಿಕರ ಜಲ ದಾಹ ತೀರಿಸಬೇಕಿದ್ದ ವಾಟರ್‌ ಫಿಲ್ಟರ್‌ಗಳು ಅನುಪಯುಕ್ತ ಸ್ಥಿತಿಯಲ್ಲಿವೆ. ಹಾಗಾಗಿ, ಸಾರ್ವಜನಿಕರು ಹೋಟೆಲ್‌, ಅಂಗಡಿಗಳಲ್ಲಿ ಹಣ ನೀಡಿ ವಾಟರ್‌ ಬಾಟಲ್‌ ಖರೀದಿಸಿ ತಮ್ಮ ದಾಹ ನೀಗಿಸಿಕೊಳ್ಳಬೇಕಾದ ಸಂಕಷ್ಟದ ಸ್ಥಿತಿ ಎದುರಾಗಿದೆ ಎಂದು ಪುರಸಭೆ ಸದಸ್ಯ ಪ್ರವೀಣ ಸಾವರೆ, ಹರೀಶ ತಮಗ್ಯಾಳೆ ಆಕ್ರೋಶ ವ್ಯಕ್ತಪಡಿಸಿದರು.

ಬಸವೇಶ್ವರ ವೃತ್ತ ಸಮೀಪದ ವಾಟರ್‌ ಫಿಲ್ಟರ್‌ಗೆ ವಿದ್ಯುತ್‌ ಸಂಪರ್ಕ್‌ ಇಲ್ಲ. ನಳಗಳ ತೊಟ್ಟಿ ಮುರಿದಿವೆ. ಈ ವಾಟರ್‌ ಫಿಲ್ಟರ್‌ ಜನರಿಗೆ ಕಾಣುವ ಸ್ಥಳದಲ್ಲಿ ಇಲ್ಲ. ಮಹಾತ್ಮ ಗಾಂಧಿ ವೃತ್ತ ಸಮೀಪದ ಫಿಲ್ಟರ್‌ಗೆ ವಿದ್ಯುತ್‌ ಸಂಪರ್ಕ ಇದ್ದರೂ ನೀರಿನ ಟ್ಯಾಂಕ್‌ನಿಂದ ಫಿಲ್ಟರ್‌ಗೆ ನೀರು ಹರಿಯುವುದಿಲ್ಲ. ಇನ್ನು ತರಕಾರಿ ಮಾರುಕಟ್ಟೆ ಸಮೀಪದ ಫಿಲ್ಟರ್‌ಗೆ ನಳದ ನೀರಿನ ಸಂಪರ್ಕವೂ ಇಲ್ಲ. ನೀರಿನ ತೊಟ್ಟಿ, ಗ್ಲಾಸ್‌ಗಳು ಇಲ್ಲ ಎಂದು ಹೂವಿನ ವ್ಯಾಪಾರಿಗಳಾ ಚಂದ್ರಕಾಂತ, ಎಂ.ಡಿ.ಅಹ್ಮದ್‌, ಸುಲ್ತಾನಬಿ ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ವಿಶೇಷ ಕಾಳಜಿ ವಹಿಸಿ ಕೂಡಲೇ ಈ ಮೂರು ಸ್ಥಳಗಳಲ್ಲಿರುವ ವಾಟರ್‌ ಫಿಲ್ಟರ್‌ಗಳನ್ನು ದುರಸ್ತಿಗೊಳಿಸಿ, ಬೇಕಾದ ಅಗತ್ಯ ವಸ್ತು, ಸೌಕರ್ಯ ಒದಗಿಸಿ ಜನರ ಬಾಯಾರಿಕೆ ತಣಿಸಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಜನರ ಬಾಯಾರಿಕೆ ನೀಗಿಸಬೇಕಿದ್ದ ವಾಟರ್‌ ಫಿಲ್ಟರ್‌ಗಳು ಹಾಳು ಬಿದ್ದಿರುವುದು ಶೋಚನೀಯ. ಕೂಡಲೇ ಇವುಗಳನ್ನು ದುರಸ್ತಿ ಮಾಡಬೇಕು. ಗುತ್ತಿಗೆದಾರರ ಹೆಸರನ್ನು ಬಹಿರಂಗಪಡಿಸಬೇಕು.
ಪ್ರವೀಣ ಸಾವರೆ, ಪುರಸಭೆ ಸದಸ್ಯ
ಪ್ರತಿದಿನ ನೀರಿನ ದಾಹ ತೀರಿಸಿಕೊಳ್ಳಲು ವ್ಯಾಪಾರಿಗಳು ಹಣ ನೀಡಿ ಬಾಟಲಿ ನೀರಿಗೆ ಮೊರೆ ಹೋಗಬೇಕಾಗಿದೆ. ಶೀಘ್ರದಲ್ಲಿ ಫಿಲ್ಟರ್‌ಗಳನ್ನು ಕಾರ್ಯನಿರ್ವಹಿಸುವಂತೆ ಮಾಡಬೇಕು.
ಎಂ.ಡಿ.ಅಹ್ಮದ್‌, ತರಕಾರಿ ವ್ಯಾಪಾರಿ
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತ್ವರಿತವಾಗಿ ವಾಟರ್‌ ಫಿಲ್ಟರ್‌ಗಳ ದುರಸ್ತಿ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು.
ಸಂಗಮೇಶ ಕಾರಬಾರಿ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT