ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ | ಪೈಪ್‍ಲೈನ್ ಕಾಮಗಾರಿ ದುರುಸ್ತಿ, ನಿತ್ಯ ನೀರಿಗಾಗಿ ಪರದಾಟ

Last Updated 21 ಮೇ 2020, 19:45 IST
ಅಕ್ಷರ ಗಾತ್ರ

ಕಮಲನಗರ: ಕಳೆದ ವರ್ಷ ಉತ್ತಮ ಮಳೆ ಸುರಿದಿದ್ದರೂ ಇಲ್ಲಿನ ಮುರ್ಕಿ ಗ್ರಾಮದ ಜನರು ಇಂದಿಗೂ ಕುಡಿಯುವ ನೀರಿಗಾಗಿ ಪರದಾಡುತ್ತಲೇ ಇದ್ದಾರೆ.

ಕಳೆದ ವರ್ಷ ಇಲ್ಲಿನ ಶಿವಪುರ, ಶಿವಪುರವಾಡಿ, ಮುರ್ಕಿವಾಡಿ, ಮುರ್ಕಿ, ವಾಗನಕೇರಾ, ಹಕ್ಯಾಳ ಮುಂತಾದ ಗ್ರಾಮಗಳಲ್ಲಿ ಮುರ್ಕಿ ಗ್ರಾ.ಪಂ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಅಧಿಕಾರಿಗಳು ಶಾಶ್ವತ ನೀರಿನ ಸಮಸ್ಯೆಯನ್ನು ಬಗೆಹರಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದರು. ಇದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಮುರ್ಕಿ ಗ್ರಾಮಕ್ಕೆ ವಾಗನಕೇರಾ ಗ್ರಾಮದಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ. ಗ್ರಾಮದಲ್ಲಿ ಸಾವಿರಾರು ಲೀಟರ್ ನೀರು ಸರಬರಾಜು ಮಾಡುವ ದೊಡ್ಡ ಟ್ಯಾಂಕ್ ವ್ಯವಸ್ಥೆ ಇದೆ. ಆದರೆ, ಹನುಮಾನ ಗುಡಿ ಬಸವೇಶ್ವರ ಸಭೆ ಮಂಟಪದ ಸುತ್ತಲಿನ ಮನೆಗಳಿಗೆ ಕಳೆದ ಎರಡು ವರ್ಷಗಳಿಂದ ಅಳವಡಿಸಿದ ಪೈಪ್‍ಲೈನ್‍ಗೆ ಹನಿ ನೀರು ಬಂದಿಲ್ಲ. ಹೀಗಾಗಿ, ಅಲ್ಲಿನ ನಿವಾಸಿಗಳ ಸಂಕಷ್ಟ ಹೆಚ್ಚಿದೆ. ನೀರಿಗಾಗಿ ಬಸ್ ಸ್ಟ್ಯಾಂಡ್ ಬಳಿ ಗೋಕಟ್ಟೆ ಹತ್ತಿರದ ನೀರು ಅಥವಾ ಹನುಮಾನ ಮಂದಿರ ಬಳಿಯ ನೀರಿನ ತೊಟ್ಟಿಯಿಂದ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಲೇ ಇದೆ. ಇದರಿಂದಾಗಿ ಜಲಮೂಲ ಕೂಡ ಬತ್ತಿಹೋಗುತ್ತಲೇ ಇದೆ. ಕೆಲ ಜನವಸತಿ ಪ್ರದೇಶಗಳಲ್ಲಿ ಟ್ಯಾಂಕರ್ ನೀರಿಗಾಗಿ ಎದುರು ನೋಡುವ ಸ್ಥಿತಿಯಿದೆ. ಈ ಕುರಿತು ಜಿಲ್ಲಾಡಳಿತದ ಅಧಿಕಾರಿಗಳವರೆಗೂ ಮಾಹಿತಿ ಇದೆ. ಈ ಕುಡಿಯುವ ನೀರಿನ ಸಮಸ್ಯೆಗೆ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರ ದೂರು ವ್ಯಾಪಕವಾಗಿದೆ.

ದನಕರು ಸೇರಿದಂತೆ ಸಾಕುಪ್ರಾಣಿಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಬಸ್ ನಿಲ್ದಾಣ ಬಳಿಯ ಬಡಾವಣೆಯಲ್ಲಿ ಜಾನುವಾರು ತೊಟ್ಟಿ, ಗೋಕಟ್ಟೆ ನಿರ್ಮಿಸಲಾಗಿದೆ. ಅಲ್ಲಿಯೇ ಸದ್ಯ ಜನ – ಜಾನುವಾರುಗಳ ಬಾಯಾರಿಕೆ ನೀಗಿಸುತ್ತಿದೆ. ಆದರೆ, ಮನೆ ಮನೆಗಳಿಗೆ ಪೈಪ್‍ಲೈನ್ ಮೂಲಕ ಬರಬೇಕಾದ ನೀರು ಬರುತ್ತಿಲ್ಲ.

ಕಳೆದ 3-4 ವರ್ಷಗಳ ಹಿಂದೆ ಅಲ್ಲಿನ ಮನೆಗಳಿಗೆ ಕೈಗೊಂಡ ಪೈಪ್‍ಲೈನ್ ಕೈಗೊಂಡ ಕಾಮಗಾರಿಯಿಂದಾಗಿ ಮನೆ ಮನೆಗೂ ನೀರು ಹರಿದು ಬರುತ್ತಿತ್ತು. ಆದರೆ ಕಳೆದ 2 ವರ್ಷಗಳ ಹಿಂದೆ ಕೈಗೊಂಡ ರಸ್ತೆ ಅಭಿವೃದ್ಧಿ ಯೋಜನೆಯಡಿ ಪೈಪ್‍ಲೈನ್ ರಸ್ತೆಯಡಿ ಮುಗುಟು ಹೋಗಿವೆ. ಹೀಗಾಗಿ ಅಲ್ಲಿನ 25ಕ್ಕೂ ಅಧಿಕ ಮನೆಗಳಿಗೆ ನೀರು ಬರುತ್ತಿಲ್ಲ. ಅವೈಜ್ಞಾನಿಕ ರಸ್ತೆ ಅಭಿವೃದ್ಧಿ ನೆಪದಲ್ಲಿ ಪೈಪ್‍ಲೈನ್ ಹಾಳು ಮಾಡಲಾಗಿದೆ. ಕುಡಿಯುವ ಹನಿ ನೀರಿಗಾಗಿ ಪರದಾಡುವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಮುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಕೊಳವೆಬಾವಿಗಳಿದ್ದು ಅದರಲ್ಲೂ ನೀರು ಬರುತ್ತಿದೆ. ಶಿವಪೂರ ಗ್ರಾಮದಲ್ಲಿ ಈಚೆಗೆ ಮೋಟಾರ್ ಕೆಟ್ಟುಹೋದ ಪರಿಣಾಮ ನೀರಿನ ಸಮಸ್ಯೆ ಎದುರಾಗಿತ್ತು. ಸಮಸ್ಯೆ ಬಗೆಹರಿಸಿ ಅಂತರ್ಜಲ ಮಟ್ಟ ಕಡಿಮೆಯಾದಲ್ಲಿ ಖಾಸಗಿ ನೀರು ಪಡೆದು ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಅಲ್ಲಿನ ಅಧಿಕಾರಿಗಳು.

ಮುರ್ಕಿಯ ಬಸವೇಶ್ವರ ಮಂಟಪ ಸುತ್ತಲಿನ ಕೆಲ ಮನೆಗಳಿಗೆ ನೀರಿನ ಸಮಸ್ಯೆ ಇದೆ ಎಂಬುದನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಶಾಶ್ವತ ಕುಡಿಯುವ ನೀರಿನ ಒದಗಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಆದರೆ, ಇದು ಅನುಷ್ಠಾನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

‘ಮುರ್ಕಿ ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು. ಗ್ರಾಮದಲ್ಲಿ 7000 ಕ್ಕೂ ಅಧಿಕ ಜನಸಂಖ್ಯೆ ಇದೆ. ಬದುಕಿಗಾಗಿ ವಲಸೆ ಹೋಗಿದ್ದವರು ಇದೀಗ ಗ್ರಾಮಕ್ಕೆ ಮರಳಿದ್ದಾರೆ. ಹೀಗಾಗಿ ಹೆಚ್ಚಿನ ನೀರು ಅಗತ್ಯವಿದೆ‘ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

‘ಬಿಸಿಲಿನಲ್ಲಿಯೇ ಇಲ್ಲಿನ ಹನುಮಾನ ಮಂದಿರದ ಬಳಿ ಸಿಗುವ ನೀರು ತಂದು ಮನೆಯಲ್ಲಿ ಸಂಗ್ರಹಿಸುತ್ತಿದ್ದೇವೆ. ಕೂಡಲೇ ಸಂಬಂಧಪಟ್ಟವರು ಅಗತ್ಯವಿರುವ ಕಡೆ ಪೈಪ್‍ಲೈನ್ ಕಾಮಗಾರಿ ಕೈಗೊಳ್ಳಬೇಕು‘ ಎಂದು ಗ್ರಾಮಸ್ಥರ ಒತ್ತಾಯಿಸುತ್ತಾರೆ.

*
ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಬಗೆಹರಿಸುವುದಾಗಿ ಹೇಳಿದವರೂ 2 ವರ್ಷ ಕಳೆದರೂ ಪೈಪ್‍ಲೈನ್ ಕಾಮಗಾರಿ ದುರುಸ್ತಿಗೊಳಿಸಿಲ್ಲ.
-ಶಿವಕಾಂತ ಮುರ್ಕಿ ಗ್ರಾಮ ನಿವಾಸಿ.

*
ಮುರ್ಕಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಹಾಳಾಗಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ದುರಸ್ತಿ ಮಾಡಿಸಿ, ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.
-ಹಣಮಂತಪ್ಪ , ಮುರ್ಕಿ ಗ್ರಾಪಂ ಪಿಡಿಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT