ಖಟಕಚಿಂಚೋಳಿ: ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾರಂಜಾ ಜಲಾಶಯ ತುಂಬಿದೆ. ಇದರಿಂದ ಜಲಾಶಯದ ನೀರು ಬಿಡುತ್ತಿರುವುದರಿಂದ ಬೆಳೆಗಳು ಜಲಾವೃತವಾಗುತ್ತಿವೆ. ಇದರಿಂದ ರೈತರ ಮೊಗದಲ್ಲಿ ಬೇಸರ ಮೂಡಿದೆ.
ಭಾಲ್ಕಿ ತಾಲ್ಲೂಕಿನ ಕಟ್ಟಿ ತುಗಾಂವ್ ಗ್ರಾಮದ ರೈತ ಸುರೇಶ ಗೌಳಿ ಎನ್ನುವ ರೈತ ತಮ್ಮ ಮೂರು ಎಕರೆ ಪ್ರದೇಶದಲ್ಲಿ ₹ 1 ಲಕ್ಷ ಖರ್ಚು ಮಾಡಿ ಚೆಂಡು ಹೂ ಬೆಳೆದಿದ್ದಾರೆ. ಬೆಳೆ ಹುಲುಸಾಗಿ ಬೆಳೆದಿದೆ. ಮುಂದಿನ ವಾರದಲ್ಲಿ ಬೆಳೆ ಕಟಾವಿಗೆ ಬರುತ್ತಿತ್ತು. ಆದರೆ ನಿರಂತರ ಮಳೆ ಹಾಗೂ ಕಾರಂಜಾ ಜಲಾಶಯದ ನೀರಿನಿಂದಾಗಿ ಹೊಲ ಸಂಪೂರ್ಣ ಜಲಾವೃತವಾಗಿದೆ.
‘ಹೊಲದಲ್ಲಿ ಬೆಳೆದು ನಿಂತ ಚೆಂಡು ಹೂವಿನ ಗಿಡಗಳು ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗುತ್ತಿವೆ . ಇನ್ನೂ ಬೆಳೆಗಳ ಸಾಲಿನಲ್ಲಿ ನೀರು ನಿಂತಿರುವುದರಿಂದ ಬೆಳೆಗಳು ಕೊಳೆಯುವ ಆತಂಕ ಕಾಡುತ್ತಿದೆ. ಇದಕ್ಕೆ ಏನು ಮಾಡಬೇಕು ಎಂಬುದು ತಿಳಿಯದಾಗಿದೆ ' ಎಂದು ರೈತ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಸಮೀಪದ ಕಟ್ಟಿ ತುಗಾಂವ್ ಗ್ರಾಮದ ರೈತ ಮಹೇಶ ಮಂಗಲಗಿ ಎನ್ನುವವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ತೊಗರಿ,ಸೊಯಾ ಬೆಳೆದಿದ್ದಾರೆ. ಆದರೆ ಸದ್ಯ ಹೊಲದಲ್ಲಿ ನೀರು ನಿಂತು ಸಂಪೂರ್ಣ ಬೆಳೆ ಹಾಳಾಗುತ್ತಿದೆ.
‘ಗ್ರಾಮದ ಹೊರವಲಯದಲ್ಲಿರುವ ಮಲ್ಲಿಕಾರ್ಜುನ ದೇವಾಲಯವು ಸಹ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ಕಣಜಿ ಹಾಗೂ ಕಟ್ಟಿ ತುಗಾಂವ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಹ ಜಲಾವೃತವಾಗಿದೆ. ಇದರಿಂದ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಖಾಶೆಂಪುರ್ ತಿಳಿಸಿದರು.
‘ನಿರಂತರವಾಗಿ ಸುರಿದ ಮಳೆಯಿಂದಾಗಿ ಕಾರಂಜಾ ಜಲಾಶಯದ ನೀರು ಬಿಡುತ್ತಿದ್ದಾರೆ. ಇದರಿಂದ ಬೆಳೆಗಳು ಮುಳುಗಿ ಹೊಗುತ್ತಿರುವುದರಿಂದ ರೈತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.