ಬುಧವಾರ, ಸೆಪ್ಟೆಂಬರ್ 22, 2021
23 °C
ಕಾಮಗಾರಿ ಶೀಘ್ರ ಕೈಗೊಳ್ಳಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

ಬಸವಕಲ್ಯಾಣ: ನೀರು ಪೂರೈಕೆ ಯೋಜನೆ ಅಪೂರ್ಣಕ್ಕೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ನಗರದ 24 ಗಂಟೆ ನೀರು ಪೂರೈಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ಅಪೂರ್ಣ ಇದ್ದರೂ ನಳದ ತೆರಿಗೆಯ ಹಣ ಪಡೆಯುತ್ತಿರುವುದಕ್ಕೆ ನಗರಸಭೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ರವೀಂದ್ರ ಬೋರೋಳೆ ಮಾತನಾಡಿ, ‘ಅನೇಕ ಓಣಿಗಳಲ್ಲಿ ಹಳೆಯ ಪೈಪ್‌ಲೈನ್‌ನಿಂದಲೇ ಹೊಸ ಯೋಜನೆಯ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ, ಸಂಬಂಧಿತರು ಕಾಮಗಾರಿ ಮುಗಿದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕೆಲವೆಡೆಯ ನಳಕ್ಕೆ ನೀರು ಬರದಿದ್ದರೂ ಬಿಲ್ ಮಾತ್ರ ನಿಯಮಿತವಾಗಿ ನೀಡ ಲಾಗುತ್ತಿದೆ. ಕೆಲ ಓಣಿಗಳ ನಿವಾಸಿಗಳಿಗೆ ಹಳೆಯ ಹಾಗೂ ಹೊಸ ಎರಡೂ ನಳಗಳ ಸಂಪರ್ಕದ ತೆರಿಗೆ ಹಣ ಕಟ್ಟಲು ಒತ್ತಾಯಿಸಲಾಗುತ್ತಿದೆ. ಇಂಥ ಅನ್ಯಾಯ ಸರಿಯಲ್ಲ. ಈ ಬಗೆಗಿನ ಗೊಂದಲ ನಿವಾರಣೆ ಆಗುವವರೆಗೆ ತೆರಿಗೆ ವಸೂಲು ಮಾಡಬಾರದು’ ಎಂದು ಸಂಬಂಧಿತ ಅಧಿಕಾರಿಗಳಿಗೆ ಒತ್ತಾಯಿಸಿದರು.

ರವೀಂದ್ರ ಗಾಯಕವಾಡ ಮಾತನಾಡಿ, ‘24 ಗಂಟೆ ನೀರು ಸರಬರಾಜು ಕೈಗೊಳ್ಳುವ ಯೋಜನೆಯ ಪೈಪ್‌ಲೈನ್‌ನಿಂದ ಹಾಳಾದ ರಸ್ತೆ ಸುಧಾರಣೆಗೆ ₹4 ಕೋಟಿ ಅನುದಾನ ಬಿಡುಗಡೆ ಆಗಿತ್ತು. ಎಲ್ಲಿಯೂ ಕೆಲಸ ಆಗಿಲ್ಲ. ಹೀಗಿದ್ದಾಗ ಆ ಹಣ ಎಲ್ಲಿ ಹೋಯಿತು. ಇದಲ್ಲದೆ ಕೆಲ ರಸ್ತೆಗಳು ಮಳೆಯಿಂದ ಹಾಳಾಗಿದ್ದು ಶೀಘ್ರ ದುರುಸ್ತಿ ಕೈಗೊಳ್ಳಬೇಕು. ಹಿಂದಿನ ಮೂರು ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಎಷ್ಟರ ಮಟ್ಟಿಗೆ ಜಾರಿಗೆ ಬಂದಿವೆ ಎಂಬುದನ್ನು ತಿಳಿಸಬೇಕು. ವ್ಯವಸ್ಥಾಪಕರು ಒಳಗೊಂಡು ಕೆಲ ಸಿಬ್ಬಂದಿ ವರ್ತನೆ ಸರಿಯಿಲ್ಲ. ತೊಂದರೆಯಲ್ಲಿರುವ ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸುವುದಕ್ಕೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ’ ಎಂದು ದೂರಿದರು.

ಗಫಾರ್ ಪೇಶಮಾಮ್ ಮಾತನಾಡಿ, ‘ನಗರದಲ್ಲಿನ ಶಾಲೆಗಳ ವಿದ್ಯಾರ್ಥಿ ಗಳಿಗೆ ಮಧ್ಯಾಹ್ನ ಊಟದ ಬದಲಾಗಿ ಆಹಾರಧಾನ್ಯದ ಕಿಟ್‌ಗಳ ವಿತರಣೆ ಆಗಿಲ್ಲ. ಕೆಲ ಅಂಗನವಾಡಿ ಗಳಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸುತ್ತಿಲ್ಲ. ಹೆರಿಗೆ ಹಾಗೂ ಇತರೆ ಸಮಸ್ಯೆ ಇದ್ದಾಗ ಆಶಾ ಕಾರ್ಯಕರ್ತೆಯರು ಮಹಿಳೆಯರ ಜತೆ ಆಸ್ಪತ್ರೆಗೆ ಹೋಗಬೇಕೆಂಬ ನಿಯಮವಿದ್ದರೂ ಯಾರೂ ಪಾಲನೆ ಮಾಡುತ್ತಿಲ್ಲ’ ಎಂದರು.

‘ಸಿಬ್ಬಂದಿಯವರು ಹಣಕ್ಕಾಗಿ ಅನ್ಯರ ಕೆಲಸ ತಕ್ಷಣ ಮಾಡಿಕೊಡುತ್ತಿದ್ದಾರೆ. ಆದರೆ, ಸದಸ್ಯರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ’ ಎಂದು ನಿರ್ಮಲಾ ಶಿವಣಕರ ಅರೋಪಿಸಿದರು.

‘ಶಾಸಕರಾಗಿದ್ದಾಗ ನಿಧನರಾದ ಬಿ.ನಾರಾಯಣರಾವ್ ಅವರ ವೃತ್ತ ಸ್ಥಾಪಿಸಬೇಕು’ ಎಂದು ಸದಸ್ಯರಾದ ಮಲ್ಲಿಕಾರ್ಜುನ ಬೊಕ್ಕೆ, ರಾಮಭಾವು ಜಾಧವ, ಶಹಾಜಹಾನಾ ಬೇಗಂ ಕೇಳಿಕೊಂಡರು.

‘ಪೌರ ಕಾರ್ಮಿಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತಿಳಿದು ಬಂದಿದ್ದು ಈ ಕುರಿತು ಪರಿಶೀಲನೆಗೆ ಸಮಿತಿ ರಚಿಸಬೇಕು. ಶಾಲೆಗಳ ಹಾಗೂ ಅಂಗನವಾಡಿಗಳಲ್ಲಿನ ಸಮಸ್ಯೆ ಬಗೆಹರಿಸುವುದಕ್ಕಾಗಿ ಪ್ರತ್ಯೇಕ ಸಭೆಗಳನ್ನು ಆಯೋಜಿಸಬೇಕು’ ಎಂದೂ ಸಹ ಕೆಲವರು ಆಗ್ರಹಿಸಿದರು.

ಶಾಸಕ ಶರಣು ಸಲಗರ ಮಾತನಾಡಿ, ‘ನಗರದ ವಿಕಾಸಕ್ಕಾಗಿ ಯೋಜನೆ ಮಂಜೂರು ಮಾಡಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತೇನೆ’ ಎಂದರು.

ನಗರಸಭೆ ಆಯುಕ್ತ ಶಿವಕುಮಾರ ಮಾತನಾಡಿ, ‘ಫಲಾನುಭವಿಗಳಿಗೆ ಮನೆ ವಿತರಣೆಗಾಗಿ ಜಮೀನು ಖರೀದಿಸ ಲಾಗಿದೆ. ಕೊಳಚೆ ಪ್ರದೇಶದವರಿಗೆ ಮನೆ ವಿತರಣೆಯ ಪ್ರಕ್ರಿಯೆಯೂ ಪೂರ್ಣಗೊಳ್ಳುವ ಹಂತದಲ್ಲಿದೆ. 24 ಗಂಟೆ ನೀರು ಸರಬರಾಜು ಕೈಗೊಳ್ಳುವ ಯೋಜನೆಯ ಬಗ್ಗೆ ಕುಲಂಕಷ ಚರ್ಚೆಗೆ ಪ್ರತ್ಯೇಕ ಸಭೆ ಆಯೋಜಿಸುವಂತೆ ಸಂಬಂಧಿತ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ’ ಎಂದು ತಿಳಿಸಿದರು.

ಅಧ್ಯಕ್ಷೆ ನಾಹೇದಾ ಸುಲ್ತಾನಾ, ಉಪಾಧ್ಯಕ್ಷೆ ಮೀನಾ ಗೋಡಬೋಲೆ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.