ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಸುಪಾರಿ ಕೊಲೆ; ಐದು ಜನರ ಬಂಧನ

Published 1 ಜನವರಿ 2024, 3:17 IST
Last Updated 1 ಜನವರಿ 2024, 3:17 IST
ಅಕ್ಷರ ಗಾತ್ರ

ಬೀದರ್‌: ತಾಲ್ಲೂಕಿನ ಪೊಮಾ ತಾಂಡಾ ಸಮೀಪದ ಅಲಿಯಂಬರ್‌ ಸೇತುವೆ ಬಳಿ ನವೆಂಬರ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬೀದರ್‌ ಜಿಲ್ಲಾ ಪೊಲೀಸರು ಭೇದಿಸಿ, ಐದು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇಲ್ನೋಟಕ್ಕೆ ಅಪಘಾತದಂತೆ ಕಂಡು ಬಂದಿದ್ದ ಪ್ರಕರಣದ ಒಳ ಹೊರಗನ್ನು ಸೂಕ್ಷ್ಮವಾಗಿ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿ ಕೃತ್ಯ ಎಸಗಿದ ಐದೂ ಜನ ಆರೋಪಿಗಳನ್ನು ಒಂದು ತಿಂಗಳು 20 ದಿನಗಳಲ್ಲಿ ಬಂಧಿಸಿದ್ದಾರೆ.

ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದರ ಬಗ್ಗೆ ಪತಿಗೆ ಸಂಶಯ ಬಂದದ್ದರಿಂದ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ, ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ. ಕೊಲೆಗೆ ಸುಪಾರಿ ನೀಡಿದ ಹೊನ್ನಿಕೇರಿಯ ರವಿ ಪಾಟೀಲ್‌, ಮೈಸೂರಿನ ಚೈತ್ರಾ, ಆಕಾಶ, ಈತನ ತಂದೆ ವೆಂಕಟ ಗಿರಿಮಾಜೆ, ಕೊಲೆ ಸಂಚಿಗೆ ನೆರವಾದ ಸಿಕಂದರ್‌ ಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೃತ್ಯವನ್ನು ತಾವೇ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇನ್ನು, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಗಿದ್ದೇನು?:

ತಾಲ್ಲೂಕಿನ ವಿಳಾಸಪೂರದ ಅಮಿತ್‌ ಲಕ್ಷ್ಮಣರಾವ ಹಾಗೂ ಮೈಸೂರಿನ ಚೈತ್ರಾ ಪತಿ– ಪತ್ನಿ. 2023ರ ನವೆಂಬರ್‌ 11 ಹಾಗೂ 12ರ ರಾತ್ರಿ ಪೊಮಾ ತಾಂಡಾದ ಅಲಿಯಂಬರ್‌ ಸೇತುವೆ ಬಳಿ ಅಮಿತ್‌ ಅವರ ಮೃತದೇಹ ಸಿಕ್ಕಿತ್ತು. ಮೃತ ಅಮಿತ್‌ ಹೆಂಡತಿ ಚೈತ್ರಾ, ಈ ಕುರಿತು ಜನವಾಡ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದರಿಂದ ಪ್ರಕರಣ ದಾಖಲಾಗಿತ್ತು. ಮೇಲ್ನೋಟಕ್ಕೆ ಅಪಘಾತದಂತೆ ಕಂಡು ಬಂದ ಪ್ರಕರಣದ ಬಗ್ಗೆ ಸಂಶಯಗೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ತನಿಖೆಗೆ ವಿಶೇಷ ತಂಡವನ್ನು ರಚಿಸಿದರು. ಜಿಲ್ಲಾ ಶ್ವಾನ ದಳ, ಬೆರಳಚ್ಚು ತಂಡದೊಂದಿಗೆ ಕಲಬುರಗಿಯ ಎಫ್‌ಎಸ್‌ಎಲ್‌ ತಂಡದ ನೆರವು ಕೂಡ ಪಡೆದುಕೊಂಡರು. ಅಮಿತ್‌ ಅಪಘಾತದಲ್ಲಿ ಮೃತಪಟ್ಟಿದ್ದಲ್ಲ ಕೊಲೆ ಮಾಡಲಾಗಿದೆ ಎನ್ನುವುದು ತನಿಖೆಯಿಂದ ಖಾತ್ರಿ ಆಯಿತು. ಬಳಿಕ ತನಿಖಾ ತಂಡವು ಇಂಚಿಂಚೂ ತನಿಖೆ ನಡೆಸಿ ಐವರನ್ನು ಬಂಧಿಸಿತು.

ರವಿ ಪಾಟೀಲ್‌ ಜೊತೆಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ರವಿ ಪಾಟೀಲ್‌ ಆಕೆಗೆ ದುಬಾರಿ ಆಭರಣ, ಕೊಡುಗೆಗಳನ್ನು ಕೊಟ್ಟಿದ್ದ. ಆಕೆಯ ನಡವಳಿಕೆಯಿಂದ ಸಂಶಯಗೊಂಡ ಅಮಿತ್‌ ನವೆಂಬರ್‌ 2ರಂದು, ಪತ್ನಿಯನ್ನು ವಿಚಾರಿಸಿದ್ದಾನೆ. ಅನೈತಿಕ ಸಂಬಂಧ ಹೊಂದಿದ ವ್ಯಕ್ತಿ ಹಾಗೂ ನಿನ್ನನ್ನು ಸಾಯಿಸುತ್ತೇನೆ ಎಂದು ಪತ್ನಿಗೆ ಹೇಳಿದ್ದಾನೆ. ಚೈತ್ರಾ ಈ ವಿಷಯವನ್ನು ರವಿ ಪಾಟೀಲ್‌ ಜೊತೆಗೆ ಹಂಚಿಕೊಂಡಿದ್ದಾಳೆ. ಬಳಿಕ ಕೊಲೆಗೆ ಇಬ್ಬರು ಸಂಚು ರೂಪಿಸಿದ್ದಾರೆ ಎಂದು ಎಸ್ಪಿ ಚನ್ನಬಸವಣ್ಣ ತಿಳಿಸಿದರು.

ಸಿಕಂದರ್‌ ಷಾ ಎಂಬಾತನಿಗೆ ರವಿ ಪಾಟೀಲ್‌ ಕೊಲೆಗೆ ₹2 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಾನೆ. ಮುಂಗಡವಾಗಿ ₹15 ಸಾವಿರ ನೀಡಿದ್ದಾನೆ. ತನ್ನ ದೂರದ ಸಂಬಂಧಿ, ಹಿಂದೆ ತನ್ನಿಂದ ಹಣದ ಸಹಾಯ ಪಡೆದಿದ್ದ ವೆಂಕಟ್‌ ಗಿರಿಮಾಜೆ, ಆಕಾಶನ ನೆರವು ಪಡೆದುಕೊಂಡಿದ್ದಾನೆ. ಸಾಕ್ಷ್ಯಗಳನ್ನು ಆಧರಿಸಿ ಸಿಕಂದರ್‌ ಷಾ, ವೆಂಕಟ್‌ ಗಿರಿಮಾಜೆ ಮತ್ತು ಆಕಾಶನನ್ನು ಶನಿವಾರ (ಡಿ.30) ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ನಡೆದದ್ದನ್ನು ಹೇಳಿದ್ದಾರೆ. ಬಳಿಕ ರವಿ ಪಾಟೀಲ್‌, ಚೈತ್ರಾಳನ್ನು ವಶಕ್ಕೆ ಪಡೆದಾಗ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯವನ್ನು ಮುಚ್ಚಿ ಹಾಕುವ ದುರುದ್ದೇಶದಿಂದ ಸಾರ್ವಜನಿಕರಿಗೆ ಮತ್ತು ಮೃತನ ತಂದೆಗೆ ಅಪಘಾತದಲ್ಲಿ ಅಮಿತ್‌ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಪ್ರಯತ್ನಿಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ಹೇಳಿದರು.

ತನಿಖಾ ತಂಡದ ಹೀಗಿತ್ತು...

ಡಿವೈಎಸ್ಪಿ ಶಿವನಗೌಡ, ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ ವಿ. ಅಲ್ಲಾಪೂರ, ಜನವಾಡ ಪಿಎಸ್‌ಐ ಹುಲ್ಲೆಪ್ಪಾ, ಬೆರಳು ಮುದ್ರೆ ಘಟಕದ ಪಿಎಸ್‌ಐ ಸಂತೋಷ, ಚಿಂತಾಕಿ ಠಾಣೆ ಪಿಎಸ್‌ಐ ಸಿದ್ದಲಿಂಗ, ಎಎಸ್‌ಐಗಳಾದ ವಿಜಯಕುಮಾರ, ಅಶೋಕ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ವಿಷ್ಣುರೆಡ್ಡಿ, ಸುನೀಲ್‌, ಜಾರ್ಜ್‌, ಕಾನ್‌ಸ್ಟೆಬಲ್‌ಗಳಾದ ಸಂಜೆಪ್ಪಾ, ಶಿವಕುಮಾರ, ಇಸ್ಮಾಯಿಲ್‌, ವಿಜಯಕುಮಾರ, ಶಾಂತಕುಮಾರ, ಅಶೋಕ ಕೋಟೆ, ಶಿವಶಂಕರ, ಪ್ರಭಾಕರ, ಕೈಲಾಸ, ಸಂತೋಷ, ಸಚಿನ್‌, ಶ್ವಾನ ದಳದ ಅಶೋಕ ಅವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.

ಸ್ಪ್ರಿಂಕ್ಲರ್‌ ರಾಡ್‌ನಿಂದ ಅಮಿತ್‌ ಕೊಲೆ

ಧಾಬಾದವರಿಂದ ಮಹತ್ವ ಸುಳಿವು ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಧಾಬಾದವರು ಕೊಟ್ಟ ಮಹತ್ವದ ಸುಳಿವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಬಹಳ ನೆರವಾಗಿವೆ. ಘಟನೆ ನಡೆದ ಭಾಗದ ಧಾಬಾವೊಂದರ ಮಾಲೀಕರನ್ನು ವಿಚಾರಿಸಿದಾಗ ಬಿಳಿ ಬಣ್ಣದ ಸ್ಕಾರ್ಪಿಯೊ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಬಂದು ಸಿಗರೇಟ್‌ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದರು. ಅಲ್ಲಿಂದ ಬೈಕ್‌ ಹಾದು ಹೋದ ಕೂಡಲೇ ಚಿಲ್ಲರೆ ಹಣ ವಾಪಸ್‌ ಪಡೆಯದೆ ಬೈಕ್‌ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಪುನಃ ಬಂದು ಚಿಲ್ಲರೆ ಹಣ ಕೇಳಬಹುದೆಂದು ಅವರ ವಾಹನದ ಸಂಖ್ಯೆ ಬರೆದುಕೊಂಡಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ವಾಹನದ ವಿವರ ಕಲೆ ಹಾಕಿದಾಗ ಆ ವಾಹನ ಸಿಕಂದರ್‌ ಷಾ ಎಂಬಾತನಿಗೆ ಸೇರಿದ್ದು ಎಂಬುದು ಗೊತ್ತಾಯಿತು. ಈ ಕುರಿತು ಷಾನನ್ನು ವಿಚಾರಣೆಗೆ ಒಳಪಡಿಸಿದಾಗ ರವಿ ಪಾಟೀಲ್‌ ವೆಂಕಟ ಗಿರಿಮಾಜೆ ಒಳಸಂಚು ರೂಪಿಸಿ ನ. 5ರಂದು ಅಮಿತ್‌ ಎಂಬುವರ ಕೊಲೆಗೆ ಪ್ರಯತ್ನಿಸಿದ್ದರು. ಆದರೆ ಅದು ಕೈಗೂಡಿರಲಿಲ್ಲ. ನಂತರ ವೆಂಕಟ ಗಿರಿಮಾಜೆ ಮತ್ತು ಆತನ ಮಗ ಆಕಾಶ ಅವರಿಗೆ ರವಿ ಪಾಟೀಲಲ್‌ ತನ್ನ ಫಾರಂ ಹೌಸ್‌ಗೆ ಕರೆಸಿಕೊಂಡು ಸಂಚು ರೂಪಿದ್ದಾನೆ.

ನ. 11ರಂದು ಸ್ಪ್ರಿಂಕ್ಲರ್‌ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ಸಾಕ್ಷ್ಯ ನಾಶಗೊಳಿಸಲು ಕೊಲೆಗೆ ಬಳಸಿದ ಸ್ಪ್ರಿಂಕ್ಲರ್‌ ರಾಡ್‌ ಅನ್ನು ರವಿ ಪಾಟೀಲ್‌ ತನ್ನ ಫಾರಂ ಹೌಸಿನ ಜಮೀನಿನ ಬಾವಿಯೊಳಗೆ ಎಸೆದಿದ್ದಾನೆ. ಕೊಲೆಗೈದ ಆಕಾಶನಿಗೆ ಹಣ ಕೊಟ್ಟು ಹೈದರಾಬಾದಿಗೆ ಕಳಿಸಿದ್ದಾನೆ. ಆತ ಬಸ್ಸಿನಲ್ಲಿ ಹೋಗುವಾಗ ಮೊಬೈಲ್‌ ಕವರ್‌ ಬ್ಯಾಟರಿ ಕವರ್‌ ಅನ್ನು ತೆಲಂಗಾಣದ ಕೊತ್ತೂರ ಸಮೀಪದ ನಿರ್ಜನ ಪ್ರದೇಶದಲ್ಲಿ ಬಿಸಾಕಿದ್ದಾನೆ. ಉಳಿದ ಭಾಗವನ್ನು ಹೈದರಾಬಾದ್‌ನ ಪುರಾನಾ ಪೂಲ್‌ ಬಳಿ ಎಸೆದಿದ್ದಾನೆ. ಅವುಗಳನ್ನೆಲ್ಲ ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಲ್ಲ ಆರೋಪಿಗಳು ಪರಸ್ಪರರ ದೂರವಾಣಿ ಸಂಭಾಷಣೆ ವಾಟ್ಸ್ಯಾಪ್ ಸಂದೇಶ ಇಂಟರ್ನೆಟ್‌ ಕರೆಗಳನ್ನೆಲ್ಲ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ಕೊಲೆ ಮಾಡುವ ಉದ್ದೇಶದಿಂದ ರವಿ ಪಾಟೀಲ್‌ ತನ್ನ ಟೊಮೆಟೊ ಬೆಳೆಗೆ ಔಷಧ ತಂದುಕೊಡಬೇಕೆಂದು ನ. 5ರಂದು ಅಮಿತ್‌ನನ್ನು ಬೈಕ್‌ ಮೇಲೆ ಮಹಾರಾಷ್ಟ್ರದ ಉದಗೀರಕ್ಕೆ ಕಳಿಸಿದ್ದ. ಉದಗೀರನಿಂದ ವಾಪಸ್‌ ಬರುವಾಗ ಬಿಳಿ ಬಣ್ಣದ ಸ್ಕಾರ್ಪಿಯೊ ಡಿಕ್ಕಿ ಹೊಡೆದು ಸಾಯಿಸಲು ಪ್ರಯತ್ನಿಸಿತ್ತು. ಆಗ ನಾನು ಕಬ್ಬು ಸಾಗಣೆ ಮಾಡುತ್ತಿದ್ದ ಲಾರಿ ಹಿಂಭಾಗಕ್ಕೆ ಹೋಗಿ ಬಚಾವ್‌ ಆಗಿದ್ದೆ ಎಂದು ಅಮಿತ್‌ ಘಟನೆ ಕುರಿತು ನೆರೆಮನೆಯ ಸ್ನೇಹಿತನಿಗೆ ತಿಳಿಸಿದ್ದ. ಅದು ಕೂಡ ತನಿಖೆಗೆ ನೆರವಾಗಿದೆ ಎಂದು ತಿಳಿಸಿದರು.

ರವಿ ಪಾಟೀಲ್‌ ಜಮೀನಿಗೆ ಐಎಎಸ್‌ ಐಪಿಎಸ್‌ ಅಧಿಕಾರಿಗಳು ಭೇಟಿ

ಕೊಲೆಗೆ ಸಂಚು ರೂಪಿಸಿದ್ದ ಹೊನ್ನಿಕೇರಿಯ ರವಿ ಪಾಟೀಲ್‌ ಕೃಷಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದ. ವಿನೂತನ ರೀತಿಯಲ್ಲಿ ಬೆಳೆ ಬೆಳೆದು ಜಿಲ್ಲೆಯಾದ್ಯಂತ ಹೆಸರಾಗಿದ್ದ. ಈತನ ಫಾರಂ ಹೌಸಿಗೆ ಅನೇಕ ಜನ ಐಎಎಸ್‌ ಐಪಿಎಸ್‌ ಅಧಿಕಾರಿಗಳು ಗಣ್ಯರು ಭೇಟಿ ಕೊಟ್ಟಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ರವಿ ಪಾಟೀಲ್‌
ರವಿ ಪಾಟೀಲ್‌
ಚೈತ್ರಾ
ಚೈತ್ರಾ
ಸಿಕಂದರ್‌
ಸಿಕಂದರ್‌
ಆಕಾಶ ಗಿರಿಮಾಜೆ
ಆಕಾಶ ಗಿರಿಮಾಜೆ
ವೆಂಕಟ್‌ ಗಿರಿಮಾಜೆ
ವೆಂಕಟ್‌ ಗಿರಿಮಾಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT