ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ರೈಲು ನಿಲ್ದಾಣಗಳಲ್ಲಿ ಹೈಸ್ಪೀಡ್ ವೈಫೈ

100 ಮೀಟರ್‌ ವ್ಯಾಪ್ತಿಯಲ್ಲಿ ಉಚಿತ ವೈಫೈ ಸೇವೆ ಲಭ್ಯ
Last Updated 28 ಜನವರಿ 2019, 12:52 IST
ಅಕ್ಷರ ಗಾತ್ರ

ಬೀದರ್: ‘ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಜಿಲ್ಲೆಯ ಆರು ರೈಲು ನಿಲ್ದಾಣಗಳಲ್ಲಿ ಹೈಸ್ಪೀಡ್ ವೈಫೈ ಉಚಿತ ಸೇವೆ ಆರಂಭಿಸಲಾಗಿದೆ. ನಿಲ್ದಾಣದ 100 ಮೀಟರ್‌ ಪರಿಧಿಯಲ್ಲಿ ಪ್ರತಿಯೊಬ್ಬರು ಇದರ ಸೇವೆ ಪಡೆಯಬಹುದು’ ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.

ರೈಲ್ವೆ ಇಲಾಖೆಯು ಜಿಲ್ಲೆಯ ಬೀದರ್, ಖಾನಾಪೂರ, ಹಲಬರ್ಗಾ, ಭಾಲ್ಕಿ, ಕಾಳಗಾಪೂರ ಹಾಗೂ ಕಮಲನಗರ ರೈಲು ನಿಲ್ದಾಣಗಳಲ್ಲಿ ಹೈಸ್ಪೀಡ್ ವೈಫೈ ಉಚಿತ ಸೇವೆಗೆ ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರೈಲು ನಿಲ್ದಾಣಗಳಲ್ಲಿ ರೈಲ್ಟೆಲ್ ಹಾಗೂ ಗೂಗಲ್ ಸಹಭಾಗಿತ್ವದಲ್ಲಿ ಹೈಸ್ಪೀಡ್ ವೈಫೈ ಸೇವೆ ನೀಡಲು ರೈಲ್ವೆ ಇಲಾಖೆ 2016ರಲ್ಲಿ ತೀರ್ಮಾನ ಕೈಗೊಂಡಿತ್ತು. ಪ್ರತಿ ನಿಲ್ದಾಣದಲ್ಲಿ ₹ 1 ಲಕ್ಷ ವೆಚ್ಚದಲ್ಲಿ ವೈಫೈ ಸೇವೆ ಒದಗಿಸಲಾಗಿದೆ. ನಿರ್ವಹಣೆಗೆ ವಾರ್ಷಿಕ ₹ 60 ಸಾವಿರ ಖರ್ಚಾಗಲಿದೆ. ಪ್ರತಿಯೊಬ್ಬರು ಯಾವುದೇ ಮಿತಿ ಇಲ್ಲದೆ ಸೇವೆ ಪಡೆಯಬಹುದು’ ಎಂದು ಹೇಳಿದರು.

‘ಪ್ರಯಾಣಿಕರು ರೈಲಿಗೆ ಕಾಯುವ ಸಂದರ್ಭದಲ್ಲಿ ಪುಸ್ತಕ, ಹೊಸ ಗೇಮ್ ಹಾಗೂ ಊರಿನ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ವಿಡಿಯೊಗಳನ್ನು ಸಹ ವೀಕ್ಷಿಸಬಹುದಾಗಿದೆ’ ಎಂದರು.

‘ದೇಶದ 125 ಕೋಟಿ ಜನರಲ್ಲಿ 35 ಕೋಟಿ ಜನ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ದೇಶದ ಜನರ ಹಿತವನ್ನು ಗಮನದಲ್ಲಿಕೊಂಡು ಉಚಿತ ಸೇವೆ ಒದಗಿಸಲಾಗಿದೆ. ದೇಶದ ಜನತೆಗೆ ಪಾರದರ್ಶಕ ಆಡಳಿತ ಕೊಡುವುದು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಡಿಜಿಟಲ್‌ ಇಂಡಿಯಾ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಬೀದರ್‌ ರೈಲು ನಿಲ್ದಾಣದಲ್ಲಿ ಈಗಾಗಲೇ ಎರಡು ಟಿಕೆಟ್‌ ಕೌಂಟರ್ ಆರಂಭಿಸಲಾಗಿದೆ. ವೃದ್ಧರು, ರೋಗಿಗಳು ಹಾಗೂ ಮಹಿಳೆಯರ ಹಿತ ಕಾಪಾಡುವ ದಿಸೆಯಲ್ಲಿ ಶೀಘ್ರದಲ್ಲೇ ಎಸ್ಕಿಲೇಟರ್‌ ಆರಂಭಿಸಲಾಗುವುದು. ಕಮಲನಗರದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಪ್ಲಾಟ್‌ ಫಾರಂ ವಿಸ್ತರಿಸಿ ಕಾಲ್ನಡಿಗೆ ಸೇತುವೆ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು.

‘ಡಿಜಿಟಲ್‌ ಇಂಡಿಯಾ ಯೋಜನೆ ಜಾರಿ ನಂತರ ಕೇಂದ್ರ ಸರ್ಕಾರಕ್ಕೆ ₹ 90 ಸಾವಿರ ಕೋಟಿ ಉಳಿತಾಯವಾಗಿದೆ. ಇದೇ ಹಣವನ್ನು ಬಡವರ ಹಾಗೂ ಜನಸಾಮಾನ್ಯರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT