ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಮಾರ್ಕೆಟಿಂಗ್‌ನಿಂದ ಕೈತುಂಬ ಆದಾಯ

ಮಹಿಳೆಯರ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟನೆ: ಶಿವಲೀಲಾ ಚಿದ್ರೆ ಹೇಳಿಕೆ
Last Updated 10 ಮಾರ್ಚ್ 2020, 14:14 IST
ಅಕ್ಷರ ಗಾತ್ರ

ಬೀದರ್: ‘ಮಹಿಳೆಯರು ಡಿಜಿಟಲ್ ಮಾರ್ಕೆಟಿಂಗ್‌ನಿಂದ ಕೈತುಂಬ ಆದಾಯ ಗಳಿಸಬಹುದು’ ಎಂದು ಹೈ ಐಡಿಯಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕಿ ಶಿವಲೀಲಾ ಚಿದ್ರೆ ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹೈ ಐಡಿಯಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಇಲ್ಲಿಯ ವಿದ್ಯಾನಗರ ಕಾಲೊನಿಯಲ್ಲಿ ಮಹಿಳೆಯರಿಗೆ ಆಯೋಜಿಸಿರುವ ಒಂದು ತಿಂಗಳ ಡಿಜಿಟಲ್ ಮಾರ್ಕೆಟಿಂಗ್ ಕೌಶಲ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಿಡುವಿನ ಅವಧಿಯಲ್ಲಿ ಮನೆಯಲ್ಲೇ ಕುಳಿತು ಕೆಲಸ ಮಾಡಬಹುದಾದದ್ದು ಡಿಜಿಟಲ್ ಮಾರ್ಕೆಟಿಂಗ್ ವಿಶೇಷವಾಗಿದೆ. ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ’ ಎಂದು ಹೇಳಿದರು.

‘ಸೋಸಿಯಲ್ ಮಿಡಿಯಾ ಮಾರ್ಕೆಟಿಂಗ್(ಎಫ್‌ಬಿ, ಯುಟ್ಯೂಬ್, ಟ್ವಿಟ್ಟರ್, ಇನ್‍ಸ್ಟ್ರಾಗ್ರಾಂ), ಸರ್ಚ್ ಎಂಜಿನ್ ಆಪ್ಟಿಮೈಝೇಶನ್, ಗೂಗಲ್ ಟೂಲ್ಸ್ (ಗೂಗಲ್ ಆ್ಯಡ್ಸ್, ಅನಾಲೈಟಿಕ್ಸ್), ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೊ ಎಡಿಟಿಂಗ್ ಟೂಲ್ಸ್ ಮತ್ತಿತರ ತರಬೇತಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿವೆ’ ಎಂದು ತಿಳಿಸಿದರು.

‘ಡಿಜಿಟಲ್ ಮಾರ್ಕೆಟಿಂಗ್ ತರಬೇತಿಗೆ ದುಬಾರಿ ಶುಲ್ಕ ಇದೆ. ಆದರೆ, ತಮ್ಮ ಕಂಪನಿಯು ಉಚಿತ ತರಬೇತಿ ಮೂಲಕ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಉಡುಗೊರೆ ನೀಡಿದೆ’ ಎಂದು ಹೇಳಿದರು.

‘ಮಹಿಳೆಯರು ಏನಾದರೊಂದು ಕೌಶಲ ಹೊಂದುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಪ್ರಯತ್ನಿಸಬೇಕು’ ಎಂದು ರೂಪಾ ಪಾಟೀಲ ಸಲಹೆ ಮಾಡಿದರು.

‘ಮಹಿಳೆ ಅಶಕ್ತಳಲ್ಲ. ಸಶಕ್ತಳು. ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಇದಕ್ಕೆ ನಿದರ್ಶನವಾಗಿವೆ’ ಎಂದು ಮಹಾನಂದಾ ಸ್ವಾಮಿ ತಿಳಿಸಿದರು.

‘ಪ್ರಸ್ತುತ ಸಾಧನೆಗೆ ಬಹಳಷ್ಟು ಅವಕಾಶಗಳು ಇವೆ. ಮಹಿಳೆಯರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸ್ವರೂಪಾರಾಣಿ ನಾಗೂರ ಹೇಳಿದರು.

ಅರ್ಪಿತಾ ಹಿರೇಮಠ ಅವರು ಮಹಿಳೆಯರು ಮನೆಯಲ್ಲೇ ಕುಳಿತು ಕೆಲಸ ಮಾಡಿ ಹಣ ಗಳಿಸಬಹುದಾದ ವಿವಿಧ ಉಪಾಯಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಹೈ ಐಡಿಯಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸಚ್ಚಿದಾನಂದ ಚಿದ್ರೆ, ರೋಟರಿ ಕ್ಲಬ್ ಆಫ್ ಬೀದರ್ ಕ್ವೀನ್ಸ್ ಅಧ್ಯಕ್ಷೆ ರುಚಿಕಾ ಶಾ, ರಶ್ಮಿ ಹೊಸಳ್ಳಿ, ವಿಜಯಲಕ್ಷ್ಮಿ ಚಿಕ್ಕಲಿಂಗೆ, ಮೀನಾಕ್ಷಿ ಉಳ್ಳಾಗಡ್ಡಿ, ವಿಜಯಲಕ್ಷ್ಮಿ ನಾಗೂರ, ನೀಲಾಂಬಿಕಾ ಇದ್ದರು. 30 ಜನ ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT