ಬೀದರ್: ‘ಚುನಾವಣೆ ಕಾರ್ಯವನ್ನು ಸುಗಮಗೊಳಿಸುವ ದಿಸೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಹಾಗೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಚುನಾವಣಾ ವೀಕ್ಷಕರು ಬಂದಾಗ ಸರಿಯಾದ ಮಾಹಿತಿ ನೀಡಬೇಕು. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಅಬಕಾರಿ ಇಲಾಖೆಗೆ ಅಧಿಕಾರಿಗಳಿಗೆ ಎಲ್ಲ ಮಧ್ಯದ ಅಂಗಡಿಗಳ ಮಾಹಿತಿ ನೀಡಬೇಕು. ಬಹಿರಂಗವಾಗಿ ಮಾರಾಟ ನಡೆಯದಂತೆ ಕ್ರಮಕೈಗೊಳ್ಳಬೇಕು’ ಎಂದರು.
‘ಕಿರಾಣಿ ಅಂಗಡಿಗಳು ಹೆದ್ದಾರಿ ಪಕ್ಕದ ಧಾಬಾಗಳಲ್ಲಿ ಮದ್ಯ ಮಾರಾಟ ನಡೆಯದಂತೆ ನಿಗಾ ಇಡಬೇಕು. ತಮ್ಮ ವ್ಯಾಪ್ತಿಯ ರಿಟರ್ನಿಂಗ್ ಅಧಿಕಾರಿಗಳಿಗೆ ಅಬಕಾರಿ ಇನ್ಸಪೆಕ್ಟರ್‌ಗಳು ಭೇಟಿಯಾಗಬೇಕು’ ಎಂದು ಸೂಚಿಸಿದರು.
‘ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ದಿನದ 24 ಗಂಟೆಯೂ ಎಚ್ಚರಿಕೆಯಿಂದ ಇರಬೇಕು. ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಕುಕ್ಕರ್, ಗಡಿಯಾರ, ಸೀರೆ ಸೇರಿದಂತೆ ಇನ್ನಿತರ ಉಡುಗೂರೆಗಳನ್ನು ಯಾರೂ ವಿತರಿಸದಂತೆ ನೋಡಿಕೊಳ್ಳಬೇಕು. ಚೆಕ್‌ಪೋಸ್ಟ್‌ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕರೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೆಚ್ಚು ವಾಹನಗಳು ಸಂಚರಿಸುವ ಚೆಕ್‌ಪೋಸ್ಟ್‌ಗಳಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕು’ ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್. ಮಾತನಾಡಿ, ‘ಅಧಿಕಾರಿಗಳು ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ನೀಡಲಾಗುವುದು. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇರುವ ಗೋದಾಮುಗಳಲ್ಲಿನ ಸ್ಟಾಕ್ ಚೆಕ್ ಮಾಡಬೇಕು. ಅಕ್ರಮವಾಗಿ ಸಾಮಗ್ರಿಗಳನ್ನು ಇಟ್ಟಿದ್ದರೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯವಿದ್ದರೆ ಪೊಲೀಸ್ ಇಲಾಖೆಯ ನೆರವು ನೀಡಲಾಗುವುದು. ಎರಡೂ ಇಲಾಖೆಗಳು ಸಹಕಾರದಿಂದ ಕಾರ್ಯನಿರ್ವಹಿದರೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸುಲಭವಾಗಲಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್ ಉಪ ವಿಭಾಗಾಧಿಕಾರಿ ಲವಿಶ್ ಓರ್ಡಿಯಾ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ಆಹಾರ ಮತ್ತು ನಾಗರಿಕ ಸರಾಬರಾಜು ಇಲಾಖೆಯ ಉಪ ನಿರ್ದೇಶಕ ಸುರೇಖಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.