ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ಮೌಲ್ಯಗಳನ್ನು ಬೆಳೆಸಿಕೊಳ್ಳಲಿ

ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿಕೆ
Last Updated 23 ಜುಲೈ 2018, 13:22 IST
ಅಕ್ಷರ ಗಾತ್ರ

ಬೀದರ್: ‘ಶಿಕ್ಷಕರಲ್ಲಿ ಒಳ್ಳೆಯ ಮೌಲ್ಯಗಳಿದ್ದರೆ, ಅವು ವಿದ್ಯಾರ್ಥಿಗಳಲ್ಲೂ ಬೆಳೆಯುತ್ತವೆ. ಆದ್ದರಿಂದ ಮೊದಲು ಶಿಕ್ಷಕರು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ವತಿಯಿಂದ ಭಾನುವಾರ ಶಿಕ್ಷಕರಿಗಾಗಿ ಆಯೋಜಿಸಿದ್ದ ಸೃಜನಾತ್ಮಕ ಬೋಧನಾ ಕಾರ್ಯಾಗಾರ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಸಾಧಕ ವಿದ್ಯಾರ್ಥಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘20 ವರ್ಷಗಳಿಂದ ಒಂದೇ ಪದ್ಧತಿಯಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡುವುದು ಸರಿಯಲ್ಲ. ಬದಲಾವಣೆಗೆ ಅನುಗುಣವಾಗಿ ಶಿಕ್ಷಕರ ಪಾಠ ಬೋಧನೆ ಬದಲಾಗಬೇಕು’ ಎಂದು ತಿಳಿಸಿದರು.

‘ಪಠ್ಯಕ್ರಮದಲ್ಲಿ ಯಾವುದೇ ವಿಷಯ ಒಳ್ಳೆಯದ್ದು ಅಥವಾ ಕೆಟ್ಟದ್ದು ಇರದು. ಬೋಧನೆ ಮಾಡುವ ವಿಧಾನ ಇಂತಹ ಗೊಂದಲಕ್ಕೆ ಸಿಲುಕುವಂತೆ ಮಾಡುತ್ತದೆ. ಶಿಕ್ಷಕರು ಕೇವಲ ಪಾಠ ಬೋಧನೆ ಮಾಡಿ ತೃಪ್ತಿಪಟ್ಟುಕೊಳ್ಳಬಾರದು. ಪ್ರತಿಯೊಂದು ಮಗುವಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವನ್ನೂ ಮಾಡಬೇಕು’ ಎಂದು ಹೇಳಿದರು.

‘ಶಿಕ್ಷಕರು ಸೂಕ್ಷ್ಮದರ್ಶಕದ ಕೆಳಗೆ ಇಟ್ಟ ವಸ್ತು ಇದ್ದಂತೆ. ವಿದ್ಯಾರ್ಥಿಗಳು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಶಿಸ್ತು, ಸಮಯಪ್ರಜ್ಞೆ ಹಾಗೂ ಬದಲಾವಣೆಗೆ ಹೊಂದಿಕೊಳ್ಳುವ ಪ್ರವೃತ್ತಿಯನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ತರಗತಿಯ ವ್ಯವಸ್ಥಾಪನೆಯೂ ಒಂದು ಕಲೆಯಾಗಿದೆ. ಶಿಕ್ಷಕರು ಬೋಧನೆಯನ್ನು ಲಘುವಾಗಿ ಪರಿಗಣಿಸಬಾರದು. ಭಾಷೆಯ ಮೇಲಿನ ಪ್ರಭುತ್ವವು ಶಿಕ್ಷಕನ ಸಾಮರ್ಥ್ಯವನ್ನು ಬಲಗೊಳಿಸುತ್ತದೆ. ಸಿದ್ಧತೆ ಮಾಡಿಕೊಂಡು ತರಗತಿಗೆ ತೆರಳಬೇಕು. ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ಪಾಠ ಬೋಧನೆ ಮಾಡಬೇಕು’ ಎಂದು ಹೇಳಿದರು.

‘ಅಂತರರಾಷ್ಟ್ರೀಯ ಮನಶಾಸ್ತ್ರಜ್ಞರ ಸೊಸೈಟಿ 2015ರಲ್ಲಿ ನಡೆಸಿದ ಅಧ್ಯಯನ ಪ್ರಕಾರ ಎರಡು ತಲೆಮಾರುಗಳ ನಡುವಿನ ಅಂತರ ಹೆಚ್ಚುತ್ತಿದೆ. ಹಿಂದೆ ಏಕಾಗ್ರತೆಯ ಸಮಯ 45 ನಿಮಿಷ ಇತ್ತು. 2016ರಲ್ಲಿ ಅದು 6 ನಿಮಿಷಕ್ಕೆ ಇಳಿದಿದೆ’ ಎಂದು ತಿಳಿಸಿದರು.

‘ಟಿವಿ ಹಾಗೂ ಮೊಬೈಲ್‌ಗಳು ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಮಧ್ಯ ವಯಸ್ಸಿನವರಿಗೆ ಮೊಬೈಲ್‌ ಬಳಕೆ ಸ್ವಲ್ಪ ಕಷ್ಟವಾಗುತ್ತದೆ. ಆದರೆ, ಮಕ್ಕಳು ಮೊಬೈಲ್‌ ಬಳಕೆಯಲ್ಲಿ ಚುರುಕಾಗಿದ್ದಾರೆ. ವಯಸ್ಸಿನ ಅಂತರವನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ’ ಎಂದು ಹೇಳಿದರು.

ಕಲಬುರ್ಗಿಯ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಮೊಬೈಲ್‌ಫೋನ್‌ಗಳ ಬಳಕೆಯಿಂದಾಗಿ ಮಕ್ಕಳು ಮಾನಸಿಕ ವ್ಯಸನಿಯಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳು ವೈದ್ಯರು ಹಾಗೂ ಎಂಜಿನಿಯರ್‌ ಆಗಬೇಕು ಎಂದು ಬಯಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಹಾಗೂ ಜ್ಞಾನಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ’ ಎಂದರು.

‘ತಾಯಿ ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದ ಮೇಲೆ ನಿಗಾ ಇಡುತ್ತಾಳೆ. ಮಗುವಿನ ಆರೈಕೆ ಮಾಡುವುದರಿಂದ ಉತ್ತಮ ವೈದ್ಯೆಯೂ ಆಗಿದ್ದಾಳೆ’ ಎಂದು ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ್ದ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಬಸವರಾಜ ಭರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ಸಿಕನಪುರ ಇದ್ದರು. ರಾಜೇಂದ್ರ ಮಣಗೇರಿ ಸ್ವಾಗತಿಸಿದರು. ಬಾಬುರಾವ್‌ ಗೊಂಡಾ ನಿರೂಪಿಸಿದರು. ಗಣಪತಿ ಸೋಲಪುರೆ ವಂದಿಸಿದರು.

ಪಾಲಕರ ಒತ್ತಡದಿಂದಾಗಿ ಇಂದಿನ ಮಕ್ಕಳು ತಮಗೆ ಆಸಕ್ತಿ ಇರುವ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ
- ಬಸವರಾಜ ಪಾಟೀಲ ಸೇಡಂಕಲಬುರ್ಗಿಯ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT