ಶುಕ್ರವಾರ, ಜುಲೈ 30, 2021
28 °C
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್‌ ಸೂಚನೆ

ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಬರೆಸಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು ₹3 ಸಾವಿರ ನೀಡಲು ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಕಾರ್ಯಪಡೆಯ ಸಭೆಯಲ್ಲಿ ಅವರು ಮಾತನಾಡಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಅಂಗನವಾಡಿ, ಶಾಲೆಗಳು ಮತ್ತು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು ಟೆಲಿ ಫ್ರೀ ಕೌನ್ಸೆಲಿಂಗ್ 14499 ಸಂಖ್ಯೆಯನ್ನು ಬರೆಯಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಪಾಲಕರನ್ನು ಕಳೆದುಕೊಂಡ 6 ಅನಾಥ ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ಅವರ ಬ್ಯಾಂಕ್‌ ಖಾತೆಗೆ ಜುಲೈ ತಿಂಗಳ ₹3 ಸಾವಿರ ಜಮಾ ಮಾಡಲಾಗಿದೆ. ಬಾಲ ಸ್ವರಾಜ್ ಪೋರ್ಟಲ್ ಅಭಿವೃದ್ಧಿ, ಬಾಲ ಸೇವಾ ಯೋಜನೆ ಹಾಗೂ ಬಾಲ ಹಿತೈಷಿ ಯೋಜನೆ ಅನುಷ್ಠಾನದಲ್ಲಿ ಬೀದರ್ ಜಿಲ್ಲೆ ಪ್ರಗತಿ ಸಾಧಿಸಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರವೀಂದ್ರ ರತ್ನಾಕರ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮಾತನಾಡಿ, ‘ಏಕ ಪೋಷಕತ್ವ ಹೊಂದಿದ, ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳನ್ನು ಸರಿಯಾಗಿ ಗುರುತಿಸಿ ಅವರಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಈವರೆಗೆ 23 ಬಾಲ್ಯ ವಿವಾಹ ತಡೆಯಲಾಗಿದೆ ಎನ್ನುವ ಮಾಹಿತಿ ಇದೆ. ಇಂತಹ ಪ್ರಕರಣಗಳು ಕಂಡುಬರದ ಹಾಗೆ ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಏಕಪೋಷಕತ್ವ ಹೊಂದಿದ 125 ಮಕ್ಕಳು ಜನರಿದ್ದಾರೆ. ಕೋವಿಡ್‌ನಿಂದ ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಸಂಖ್ಯೆ ಆರು ಇದೆ. ಕೋವಿಡ್ ಅಲ್ಲದೇ ಹೃದಯ ಕಾಯಿಲೆ, ಕ್ಯಾನ್ಸರ್, ಅಪಘಾತದಂತಹ ಇತರೆ ಕಾರಣಗಳಿಂದ ತಂದೆ ಇಲ್ಲವೇ ತಾಯಿಯನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ 506 ಇದೆ. ಇಬ್ಬರನ್ನೂ ಕಳೆದುಕೊಂಡ 10 ಮಕ್ಕಳು ಇದ್ದಾರೆ’ ಎಂದು ತಿಳಿಸಿದರು.

‘ಸರ್ಕಾರದ ನೆರವು ಕೋರಿದ 102 ಮಕ್ಕಳ ಮಾಹಿತಿ ಬಾಲ ಸ್ವರಾಜ್ ಪೋರ್ಟಲ್‌ನಲ್ಲಿ ಹಾಕಲಾಗಿದೆ’ ಎಂದು ರವೀಂದ್ರ ರತ್ನಾಕರ್ ತಿಳಿಸಿದರು.

ಡಿಎಚ್‌ಒ ಡಾ.ವಿ.ಜಿ. ರೆಡ್ಡಿ, ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಕಾರ್ಯಪಡೆಯ ಸಂಯೋಜಕರಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗ ಹಿರೇಮಠ, ಕಾರ್ಯಪಡೆಯ ಸದಸ್ಯರಾದ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬದ್, ಮಕ್ಕಳ ರಕ್ಷಣಾಧಿಕಾರಿ ಗೌರಶಂಕರ ಪರತಾಪೂರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು