ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೇಖಕರಿಂದ ಗಟ್ಟಿ ಸಾಹಿತ್ಯ ಹೊರಬರಲಿ: ಬಸವರಾಜ ಬಲ್ಲೂರ

ಮನೆ ಅಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಸಾಹಿತ್ಯ ಗುರುನಾಥ ಅಕ್ಕಣ್ಣ ಸನ್ಮಾನ
Published 18 ಜೂನ್ 2024, 5:09 IST
Last Updated 18 ಜೂನ್ 2024, 5:09 IST
ಅಕ್ಷರ ಗಾತ್ರ

ಬೀದರ್‌: ‘ಲೇಖಕರಿಂದ ಗಟ್ಟಿ ಸಾಹಿತ್ಯ ಹೊರಬರಬೇಕು’ ಎಂದು ಕರ್ನಾಟಕ ಪದವಿಪುರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಹೇಳಿದರು.

ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಮನೆ ಅಂಗಳದಲ್ಲಿ ಮಾತು ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸಾಹಿತ್ಯಾಸಕ್ತರಲ್ಲಿ ಪಕ್ವತೆ ಕೊರತೆ ಇದೆ. ವ್ಯವಧಾನ ಇಲ್ಲ. ಸಾಹಿತಿಯಾದವರಲ್ಲಿ ಸೌಹಾರ್ದತೆ ನೆಲೆಗೊಳ್ಳಬೇಕು. ಜವಾಬ್ದಾರಿ ಅರಿತು ಗಟ್ಟಿ ಸಾಹಿತ್ಯ ರಚಿಸಬೇಕೆಂದು ಸಲಹೆ ನೀಡಿದರು. 

ಪರಿಷತ್ತು ಮನೆ ಮನೆಗೆ ತೆರಳಿ ಸಾಹಿತಿಗಳು, ಕಲಾವಿದರು, ಚಿಂತಕ ಹೋರಾಟಗಾರರು, ಸಂಗೀತಗಾರರು, ಪತ್ರಕರ್ತರ ವಿಚಾರಗಳನ್ನು ಅರ್ಥೈಸಿಕೊಳ್ಳುವ ವಿನೂತನವಾದ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

ಸಾಹಿತಿ ಗುರುನಾಥ ಅಕ್ಕಣ್ಣನವರಲ್ಲಿ ರೋಚಕ ಅನುಭವವಿದೆ. ಮುಲಾಜಿಗೆ ಒಳಗಾಗದೆ ಗಂಭೀರ ವ್ಯಕ್ತಿತ್ವ, ಸಂವೇದನಶೀಲ, ವಿಚಾರ ಬದ್ಧತೆಯುಳ್ಳವರು. ಪ್ರಶಸ್ತಿ ಪುರಸ್ಕಾರ, ಮಾನ ಸನ್ಮಾನ ಅವಕಾಶ ಮನೆ ಬಾಗಿಲಿಗೆ ಬಂದಾಗ ಅಷ್ಟೇ ವಿನಯದಿಂದ ನಿರಾಕರಿಸಿದವರು ಎಂದರು.

ಸಾಹಿತಿ ಪಾರ್ವತಿ ಸೋನಾರೆ ಮಾತನಾಡಿ, ಅಕ್ಕಣ್ಣನವರಲ್ಲಿ ಗ್ರಾಮೀಣ ಸೊಗಡಿದೆ. ಶಬ್ಧ ಸಂಗ್ರಹ ಅನುಭವ, ಅಮೃತ ಅಡಗಿದೆ ಎಂದರು.

ಸಾಹಿತಿ ಗುರುನಾಥ ಅಕ್ಕಣ್ಣ ಮಾತನಾಡಿ, ನನ್ನ ವಿವೇಚನಗೆ ತಕ್ಕಂತೆ ಆತ್ಮ ಪ್ರಜ್ಞೆಯಿಂದ ಸಾಹಿತ್ಯ ರಚಿಸಿದ್ದೇನೆ. ಮೂರು ಗ್ರಂಥಗಳು ಪ್ರಕಟಗೊಂಡಾಗ ಅತಿಥಿಗಳಾದವರು ವಿವಾದ ಮಾಡಿರುವುದಕ್ಕೆ ನಾನು ಹೊಣೆಗಾರನಲ್ಲ. ಬಾಲ್ಯದಿಂದಲೆ ಸಾಹಿತ್ಯದ ಅಭಿರುಚಿಯುಳ್ಳ ನಾನು ಪ್ರಬಂಧ ಭಾಷಣಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದೆ. ನನ್ನ ಸಿದ್ದವ್ವ ಅಜ್ಜಿ ಕಥೆಗಳಿಗೆ ಪ್ರೇರಣೆ ಎಂದರು.

ಬರಗೂರ ರಾಮಚಂದ್ರಪ್ಪ, ಗೀತಾ ನಾಗಭೂಷಣ, ಗಿರಡ್ಡಿ ಗೋವಿಂದರಾಜ, ವಿರೇಂದ್ರ ಸಿಂಪಿ, ಮಲ್ಲಿನಾಥ ಗದ್ವಾಲ ಚಿಕ್ಕಪೇಟೆ  ಮುಂತಾದವರು ನನ್ನ ಸಾಹಿತ್ಯಕ್ಕೆ ಪ್ರೇರಣೆ ನೀಡಿದವರು. ಕಲ್ಲಣ್ಣನ ಕಾಂಪ್ಲೇಂಟ್‌ ಏಳು ಸಲ ಮರು ಮುದ್ರಣಗೊಂಡಿದೆ. ಇಲ್ಲಿಯವರೆಗೆ ನೂರಾರು ಕಥೆಗಳನ್ನು ಬರೆದಿದ್ದೇನೆ. ಆದರೆ 50 ಕಥೆಗಳು ವಿವಿಧ ಪತ್ರಿಕೆ, ಸಂಚಿಕೆ ಪುಸ್ತಕ ರೂಪದಲ್ಲಿ ಹೊರಬಂದಿವೆ. ‘ಮಾಯೆ ನಿನ್ನೊಳಗೆ’ ಎಂಬ ನನ್ನ ಕಥೆ ಸಿನಿಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಎಂ.ಎ. ಅಂತಿಮ ವರ್ಷದ ಪಠ್ಯಕ್ಕೆ ನನ್ನ ಕಥೆ ಆಯ್ಕೆಯಾಗಿದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಪರಿಷತ್ತಿನ ಕಾರ್ಯದರ್ಶಿ ಪ್ರೊ. ಶಿವಕುಮಾರ ಕಟ್ಟೆ, ತಾಲ್ಲೂಕು ಅಧ್ಯಕ್ಷ ಎಮ್.ಎಸ್. ಮನೋಹರ, ಪ್ರಧಾನ ಕಾರ್ಯದರ್ಶಿ ಟಿ.ಎಮ್. ಮಚ್ಚೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಸಂಜೀವಕುಮಾರ ಅತಿವಾಳೆ, ಪ್ರೊ. ಜಗನ್ನಾಥ ಕಮಲಾಪೂರೆ, ಡಾ. ರಘುಶಂಖ ಭಾತಂಬ್ರಾ, ಬಸವರಾಜ ಮೈಲೂರ, ವಿಜಯಕುಮಾರ ಸೋನಾರೆ, ರುಕ್ಮೊದ್ದಿನ್ ಇಸ್ಲಾಂಪೂರ, ನಾಗಶೆಟ್ಟಿ ಜೋತ್ಯೆಪ್ಪನವರ, ಪ್ರಭು ಗಂಗು, ಶಿವಪುತ್ರಪ್ಪ ಪಾಟೀಲ, ನಾಗಶೆಟ್ಟಿ ಧರ್ಮಪೂರ, ಸುರೇಶ ಅಕ್ಕಣ್ಣ, ದೇವೇಂದ್ರ ಕರಂಜಿ, ಬಿ. ಎನ್. ಸ್ವಾಮಿ, ಸಿದ್ಧಾರೂಢ ಭಾಲ್ಕೆ, ರಾಜಕುಮಾರ ಲದ್ದೆ, ಪ್ರೊ. ಜಗನ್ನಾಥ ಕಮಲಾಪೂರೆ ಪಾಲ್ಗೊಂಡಿದ್ದರು. ಹಾವಗಿ ಸ್ವಾಮಿ ಕನ್ನಡ ಗೀತೆಗಳನ್ನು ಹಾಡಿದರು. ಅಕ್ಕಣ್ಣ ದಂಪತಿಯನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT