ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ನಾಮಪತ್ರ ಸಲ್ಲಿಕೆ, ಒಗ್ಗಟ್ಟಾಗಿ ಗೆಲುವಿನ ವಿಶ್ವಾಸ

ಬಿಜೆಪಿ ನಾಯಕರ ಸಾಥ್‌
Last Updated 15 ಅಕ್ಟೋಬರ್ 2018, 14:23 IST
ಅಕ್ಷರ ಗಾತ್ರ

ರಾಮನಗರ: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಲ್‌. ಚಂದ್ರಶೇಖರ್ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ನಾಯರದ ದಂಡೇ ಹಾಜರಿದ್ದು, ಶುಭ ಕೋರಿತು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಆರ್. ಅಶೋಕ್‌, ಮುಖಂಡ ಸಿ.ಪಿ.ಯೋಗೇಶ್ವರ್ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಅವರು ಉಮೇದುವಾರಿಕೆಯ ಸಂದರ್ಭ ಚಂದ್ರಶೇಖರ್‌ಗೆ ಸಾಥ್‌ ನೀಡಿದರು.

ಈ ಸಂದರ್ಭ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ ‘ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿ ಇರುವ ಪ್ರಾಮಾಣಿಕರು ಸಮ್ಮಿಶ್ರ ಸರ್ಕಾರದ ನಡೆಯಿಂದ ಬೇಸತ್ತು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆರಂಭಗೊಂಡಿದೆ’ ಎಂದು ಹೇಳಿದರು.

‘ಅಪ್ಪನ ಮೇಲೆ ಆಣೆಗಳನ್ನು ಹಾಕಿದ್ದವರು ಇಂದು ರಾಜ್ಯದಲ್ಲಿ ಒಂದಾಗಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರ ಸ್ಥಿರವಾಗಿ ಇಲ್ಲ ಎಂದು ಅವರದ್ದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಬಳ್ಳಾರಿಯಲ್ಲಿನ ಸಭೆಗೆ ಅವರ ಶಾಸಕರೇ ಹೋಗುವುದಿಲ್ಲ. ಶಿವಮೊಗ್ಗದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇಲ್ಲ. ಹೀಗಾಗಿ ತ್ರಿಪುರ ಮಾದರಿಯಲ್ಲಿ ಇಲ್ಲಿಯೂ ಬಿಜೆಪಿ ಗೆಲುವಿನ ಬಾವುಟ ಹಾರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಆರ್. ಅಶೋಕ್ ಮಾತನಾಡಿ, ‘ರಾಜ್ಯ ಸರ್ಕಾರಕ್ಕೆ ಐದು ತಿಂಗಳ ಹನಿಮೂನ್‌ ಅವಧಿ ಕಳೆದರೂ ಅದು ಇನ್ನೂ ಟೇಕ್ ಆಫ್ ಆಗಿಲ್ಲ. ಸಾಲ ಮನ್ನಾ ಘೋಷಣೆ ಆದರೂ ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ರೈತರ ಆತ್ಮಹತ್ಯೆ ನಿಂತಿಲ್ಲ’ ಎಂದು ಟೀಕಿಸಿದರು. ‘ರಾಜ್ಯ ಸರ್ಕಾರ ಜನರ ಪಾಲಿಗೆ ಸತ್ತಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಎನ್ನುವುದೇ ಸಿಎಂಗೆ ಗೊತ್ತಿಲ್ಲ ಎನ್ನುವುದು ಅವರ ಹೇಳಿಕೆಯಿಂದಲೇ ವ್ಯಕ್ತವಾಗಿದೆ. ಇನ್ನೂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡುವ ಮುಖಂಡರಿಗೆ ಲೋಕಸಭೆ ಚುನಾವಣೆವರೆಗೂ ಸುಮ್ಮನಿರಿ ಎಂದು ಸಮಾಧಾನ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ರಾಮನಗರ ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಈ ಕ್ಷೇತ್ರವೂ ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಗೊಂಡಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ‘ಕುಮಾರಸ್ವಾಮಿ ಈ ಕ್ಷೇತ್ರವನ್ನು ಕಾಲ ಕಸದಂತೆ ಕಂಡು ಹೋಗಿದ್ದಾರೆ. ಅಂತಹವರಿಗೆ ಇಲ್ಲಿನ ಸ್ವಾಭಿಮಾನಿ ಜನರು ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.

‘ಹಳೇ ಮೈಸೂರು ಭಾಗ ಕೇವಲ ಒಂದೇ ಕುಟುಂಬಕ್ಕೆ ಸೇರಿದ್ದಲ್ಲ. ಮತದಾರರು ಜಾಗೃತರಾಗಬೇಕು’ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಮುನಿರಾಜುಗೌಡ, ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಜೀಂ ಇದ್ದರು.

ಅನಿತಾ ಎದುರು ‘ಮೋದಿ’ ಘೋಷಣೆ!
ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ನಾಮಪತ್ರ ಸಲ್ಲಿಸಿ ಮುಖಂಡರೊಟ್ಟಿಗೆ ಹೊರ ಬರುತ್ತಿದ್ದಂತೆ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮಿನಿ ವಿಧಾನಸೌಧದ ಗೇಟಿನ ಬಳಿ ಬಂದರು. ಅಲ್ಲಿಯೇ ಗುಂಪಾಗಿದ್ದ ಬಿಜೆಪಿ ಕಾರ್ಯಕರ್ತರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದರು. ಇದ್ಯಾವುದನ್ನೂ ಗಮನಿಸದ ಅನಿತಾ ನಾಮಪತ್ರ ಸಲ್ಲಿಕೆಗಾಗಿ ಒಳ ನಡೆದರು.

ದರ್ಗಾ, ಮಂದಿರಕ್ಕೆ ಭೇಟಿ
ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ನಗರದ ರೈಲು ನಿಲ್ದಾಣದ ಬಳಿಯ ದರ್ಗಾಕ್ಕೆ ಭೇಟಿ ನೀಡಿ ಅಲ್ಪಸಂಖ್ಯಾತರ ಬೆಂಬಲವನ್ನೂ ಕೋರಿದರು. ಇದಕ್ಕೂ ಮುನ್ನ ಅವರು ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಪಕ್ಷದ ಜಿಲ್ಲಾ ಕಚೇರಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಪೊಲೀಸರು ಅನುಮತಿ ನೀಡಲಿಲ್ಲ.

*ಲಿಂಗಪ್ಪ–ನನ್ನ ನಡುವೆ ವೈಯಕ್ತಿಕ ದ್ವೇಷ ಇರಲಿಲ್ಲ. ಅವರು ನಮಗಿಂತ ಹಿರಿಯರು. ಅವರ ಮೇಲೆ ಬೇಸರ ಇಲ್ಲ.
–ತೇಜಸ್ವಿನಿ ಗೌಡ,ವಿಧಾನ ಪರಿಷತ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT