ಮಂಗಳವಾರ, ಫೆಬ್ರವರಿ 18, 2020
20 °C
ರಥದ ಗಾಲಿಗಳಿಗೆ ಪೂಜೆ, ಜೀರ್ಣೋದ್ಧಾರಕ್ಕೆ ಸಂಘಗಳು, ಭಕ್ತರು, ದಾನಿಗಳ ನೆರವು

ಹರದನಹಳ್ಳಿ: ಯಡಿಯೂರು ಸಿದ್ಧಲಿಂಗೇಶ್ವರ ರಥೋತ್ಸವಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯ ಇತಿಹಾಸ ಪ್ರಸಿದ್ಧ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಈ ವರ್ಷದಿಂದ ರಥೋತ್ಸವ ನಡೆಯಲಿದೆ. 

ಅಂದಾಜು ₹35 ಲಕ್ಷ ವೆಚ್ಚದಲ್ಲಿ ರಥವನ್ನು ತಯಾರಿಸಲಾಗುತ್ತಿದ್ದು, ಕಲ್ಲಿನ ನಾಲ್ಕು ಗಾಲಿಗಳು ದೇವಸ್ಥಾನಕ್ಕೆ ಬಂದಿವೆ. ಬುಧವಾರ ಇವುಗಳಿಗೆ ಪೂಜೆ ಸಲ್ಲಿಸಲಾಯಿತು. 

ಯಡಿಯೂರಿನ ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘ (ಯಡಿಯೂರಿನ ದಾಸೋಹ ಸಮಿತಿ), ಸ್ಥಳೀಯ ಸಂಘಗಳು, ದೇವಾಲಯದ ಭಕ್ತರು, ದಾನಿಗಳು ಹಾಗೂ ಗ್ರಾಮಸ್ಥರೆಲ್ಲ ಒಟ್ಟುಗೂಡಿ ದೇವಾಲಯದ ಜೀರ್ಣೋದ್ಧಾರದಲ್ಲಿ ತೊಡಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಸಂಕ್ರಾತಿ ಕಳೆದು ಏಳನೇ ದಿನಕ್ಕೆ (ಜನವರಿ 21) ರಥೋತ್ಸವ ನಡೆಸಲು ತೀರ್ಮಾನಿಸಿದ್ದಾರೆ. 

‘ರಥದ ಕಲ್ಲಿನ ಗಾಲಿಗಳನ್ನು ರಾಯಚೂರು ಬಳಿಯ ಮುದಗಲ್‌ನಲ್ಲಿ ತಯಾರಿಸಲಾಗಿದ್ದು, ರಥವನ್ನು ವಿಜಯಪುರದ ಬಳಿಯ ಸಾವಳಗಿಯಲ್ಲಿ ನಿರ್ಮಿಸಲಾಗುತ್ತಿದೆ. ಅದನ್ನು ಇನ್ನೊಂದು ವಾರದಲ್ಲಿ ಹರದನಹಳ್ಳಿಗೆ ತರಲಾಗುವುದು. ನಂತರ ರಥಕ್ಕೆ ಗಾಲಿಗಳನ್ನು ಜೋಡಿಸಿ ಅಂತಿಮ ರೂಪ ನೀಡಲಾಗುವುದು’ ಎಂದು ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ್ ಬುಳ್ಳ ‘ಪ್ರಜಾವಾಣಿ’ಗೆ ತಿಳಿಸಿದರು. 

ಗೋಸಲ ಪೀಠ ಪರಂಪರೆಯ ಶಿಷ್ಯ‌ ಯಡಿಯೂರು ಸಿದ್ಧಲಿಂಗೇಶ್ವರರು ಹುಟ್ಟಿದ ಸ್ಥಳ ಹರದನಹಳ್ಳಿ. ಈ ದೇವಸ್ಥಾನಕ್ಕೆ ಐದಾರು ಶತಮಾನಗಳ ಇತಿಹಾಸವಿದೆ. 

‘ಅವರು ತಪಸ್ಸು ಮಾಡಿರುವ ತುಮಕೂರು ಜಿಲ್ಲೆಯ ಕಗ್ಗೆರೆಯಲ್ಲಿ ಶಿವರಾತ್ರಿ ಕಳೆದ ಏಳನೇ ದಿನಕ್ಕೆ ರಥೋತ್ಸವ ನಡೆಯುತ್ತದೆ. ಐಕ್ಯಗೊಂಡಿರುವ ಕುಣಿಗಲ್‌ನ ಯಡಿಯೂರು ದೇವಸ್ಥಾನದಲ್ಲಿ ಯುಗಾದಿ ಕಳೆದ ಏಳನೇ ದಿನಕ್ಕೆ ತೇರು ನಡೆಯುತ್ತದೆ. ಅದೇ ರೀತಿಯಲ್ಲಿ ಹರದನಹಳ್ಳಿಯಲ್ಲಿ ಸಂಕ್ರಾಂತಿ ಮುಗಿದು ಏಳನೇ ದಿನಕ್ಕೆ ರಥೋತ್ಸವ ನಡೆಸಬೇಕು ಎಂಬ ಆಶಯ ಭಕ್ತರು, ಗ್ರಾಮಸ್ಥರದ್ದು’ ಎಂದು ಊರಿನ ಮುಖಂಡರೊಬ್ಬರು ಹೇಳಿದರು.  

ಬುಧವಾರ ನಡೆದ ಹೊಸ ರಥದ ಗಾಲಿಗಳ ಪೂಜೆಯ ಸಂದರ್ಭದಲ್ಲಿ ನಿಟ್ಟೂರು ಪ್ರಕಾಶ್, ಗುರುನಾಥ್, ಗೌಡಿಕೆ ಶಿವರಾಂ, ರೇವಣ್ಣ, ಎ.ಬಿ.ನಾಗರಾಜ್, ಭಕ್ತರು ಹಾಗೂ ಗ್ರಾಮಸ್ಥರು ಇದ್ದರು. 

2016ರಿಂದ ಜೀರ್ಣೋದ್ಧಾರ ಪ್ರಕ್ರಿಯೆ

ದಶಕದ ಹಿಂದೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರವು ದೇವಸ್ಥಾನದ ಅಭಿವೃದ್ಧಿಗಾಗಿ ₹2 ಕೋಟಿ ಅನುದಾನ ನೀಡುವುದಾಗಿ ಘೋಷಿಸಿತ್ತು. ಇದರ ಅಡಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ಸ್ವಲ್ಪ ನಡೆದು ನಿಂತಿದ್ದವು.

ನಂತರ ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘ, ದೇವಸ್ಥಾನದ ಅಭಿವೃದ್ಧಿಗಾಗಿ ಸ್ಥಳೀಯರು ಸ್ಥಾಪಿಸಿಕೊಂಡಿರುವ ಸಂಘಗ‌ಳು, ದೇವಸ್ಥಾನಕ್ಕೆ ನಡೆದುಕೊಳ್ಳುವವರು, ಗ್ರಾಮಸ್ಥರು ಹಾಗೂ ದಾನಿಗಳೆಲ್ಲ ಒಟ್ಟು ಸೇರಿ ಹಣ ಸಂಗ್ರಹಿಸಿ ಜೀರ್ಣೋದ್ಧಾರ ಮಾಡಲು ತೀರ್ಮಾನಿಸಿದ್ದರು. 2016ರಿಂದ ಈ ಕಾರ್ಯ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಕೆಲಸಗಳು ನಡೆದಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು