ಸೋಮವಾರ, ಜುಲೈ 26, 2021
26 °C
ಜಿಲ್ಲಾಡಳಿತ ಅನುಮತಿ ಇಲ್ಲದೇ ಪ್ರವೇಶ, ಸ್ಥಳೀಯ ಕಾರ್ಮಿಕರಿಂದ ದೂರು

ಚಾಮರಾಜನಗರ | ತಮಿಳುನಾಡಿನ 10 ಮಂದಿ ಕ್ವಾರಂಟೈನ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲಾಡಳಿತದ ಅನುಮತಿ ಇಲ್ಲದೇ ತಮಿಳುನಾಡಿನಿಂದ ಬಂದಿದ್ದ 10 ಮಂದಿ ಕಾರ್ಮಿಕರನ್ನು, ಸ್ಥಳೀಯರು ದೂರು ನೀಡಿದ ನಂತರ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. 

ತಾಲ್ಲೂಕಿನ ಬದನಗುಪ್ಪೆಯಲ್ಲಿರುವ ಗ್ರಾನೈಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡುವುದಕ್ಕಾಗಿ ಈ ಹತ್ತು ಮಂದಿ ಅಧಿಕಾರಿಗಳ ಕಣ್ತಪ್ಪಿಸಿ ಬೆಂಗಳೂರು ಮಾರ್ಗವಾಗಿ ಮಂಗಳವಾರ ರಾತ್ರಿ ಕಾರ್ಖಾನೆಗೆ ಬಂದಿದ್ದರು. 

ಕಾರ್ಖಾನೆಯಲ್ಲಿ ಈಶಾನ್ಯ ರಾಜ್ಯದ ಕಾರ್ಮಿಕರು ಹಾಗೂ ಸ್ಥಳೀಯರು ಕೆಲಸ ಮಾಡುತ್ತಿದ್ದರು. ತಮಿಳುನಾಡಿನಿಂದ ಬಂದಿದ್ದ ಕಾರ್ಮಿಕರನ್ನು ಕಂಡು ಆತಂಕಗೊಂಡ ಸ್ಥಳೀಯ ಕಾರ್ಮಿಕರು, ಆರೋಗ್ಯ ಇಲಾಖೆಯ ಗಮನಕ್ಕೆ ತಂದರು. ತಕ್ಷಣ ಅವರನ್ನು ಕ್ವಾರಂಟೈನ್‌ ಮಾಡುವಂತೆ ಒತ್ತಾಯಿಸಿದರು. 

ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಎಲ್ಲರನ್ನೂ ಅಲ್ಲಿಂದ ಕರೆದುಕೊಂಡು ಬಂದು ಹಾಸ್ಟೆಲ್‌ ಒಂದರಲ್ಲಿ ಇರಿಸಿದ್ದಾರೆ. 

‘15 ದಿನಗಳ ಹಿಂದೆ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡುವಂತೆ ಕೋರಿ 10 ಮಂದಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ, ಜಿಲ್ಲಾಡಳಿತ ಅನುಮತಿ ಕೊಟ್ಟಿರಲಿಲ್ಲ. ಹಾಗಿದ್ದರೂ, ಬೆಂಗಳೂರು ಮಾರ್ಗವಾಗಿ ಬಂದಿದ್ದರು. ಸ್ಥಳೀಯ ಕಾರ್ಮಿಕರು ನಮ್ಮ ಗಮನಕ್ಕೆ ತಂದ ಕೂಡಲೇ ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

94 ಜನರ ವರದಿ ನೆಗೆಟಿವ್

ಕೋವಿಡ್‌–19 ಪರೀಕ್ಷೆಗಾಗಿ ಈ ಹಿಂದೆ ಕಳುಹಿಸಲಾಗಿದ್ದ 94 ಜನರ ಗಂಟಲಿನ ದ್ರವ ಮಾದರಿಗಳ ವರದಿ ನೆಗೆಟಿವ್ ಬಂದಿದೆ. ಬುಧವಾರ 104 ಮಂದಿಯ ಮಾದರಿಗಳನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಸಲಾಗಿದೆ.

‘ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಬಂದಿದ್ದ 42 ಜನರನ್ನು ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ ವಿವಿಧ ಹಾಸ್ಟಲ್‌ಗಳಲ್ಲಿ ಇರಿಸಿ ನಿಗಾವಣೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.