ಸೋಮವಾರ, ಜೂನ್ 14, 2021
22 °C
ಸೋಂಕಿತರ ಸಂಖ್ಯೆ 1,787ಕ್ಕೆ

ಚಾಮರಾಜನಗರ: ಶತಕ ದಾಟಿದ ದಿನದ ಪ್ರಕರಣ, ಒಂದೇ ದಿನ 111 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ದೃಢಪಟ್ಟ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಶತಕ ದಾಟಿದೆ. ಬುಧವಾರ 105 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. 

ಒಂದೇ ದಿನ 111 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯ ಪಾಲಿಗೆ ಇದು ಕೂಡ ದಾಖಲೆಯೇ. ಸತತ ಎರಡನೇ ದಿನವೂ ಸಾವಿನ ಪ್ರಕರಣ ವರದಿಯಾಗಿಲ್ಲ. 

ಬುಧವಾರದ ಅಂಕಿ ಅಂಶಗಳೂ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ ವರದಿಯಾಗಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ 1,787ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 397ಕ್ಕೆ ಇಳಿದಿದೆ. ಈ ಪೈಕಿ 159 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಬುಧವಾರ ಸೋಂಕು ದೃಢಪಟ್ಟ 10 ಮಂದಿ ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಐಸಿಯುಗೆ ದಾಖಲಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ‌ಸದ್ಯ 34 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ವರೆಗೆ 19 ಮಂದಿ ಸೋಂಕಿನಿಂದ ಹಾಗೂ ಕೋವಿಡ್‌ ಇದ್ದರೂ, ಬೇರೆ ಕಾರಣಗಳಿಂದ 12 ಮಂದಿ ಮೃತಪಟ್ಟಿದ್ದಾರೆ. 

ಬುಧವಾರ 685 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗಳನ್ನು (ಆರ್‌ಟಿಪಿಸಿಆರ್‌–456, ರ‍್ಯಾಪಿಡ್‌ ಆ್ಯಂಟಿಜೆನ್‌–229) ನಡೆಸಲಾಗಿದೆ. 103 ಮಂದಿಗೆ ಸೋಂಕು ದೃಢಪಟ್ಟು, 582 ಜನರ ವರದಿಗಳು ನೆಗೆಟಿವ್‌ ಬಂದಿವೆ. ಎರಡು ಪ್ರಕರಣಗಳು ಮೈಸೂರಿನಲ್ಲಿ ದೃಢಪಟ್ಟಿವೆ.

105 ಪ್ರಕರಣಗಳಲ್ಲಿ ಕೊಳ್ಳೇಗಾಲ ತಾಲ್ಲೂಕಿನಲ್ಲಿ 27, ಚಾಮರಾಜನಗರ 36, ಗುಂಡ್ಲುಪೇಟೆಯಲ್ಲಿ 11, ಹನೂರಿನಲ್ಲಿ 11 ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಎಂಟು ಪ್ರಕರಣಗಳು ವರದಿಯಾಗಿವೆ. ಇನ್ನೆರಡು ಪ್ರಕರಣಗಳು ಮೈಸೂರು ಜಿಲ್ಲೆಯದ್ದಾಗಿವೆ.

ಗುಣಮುಖರಾದ 111 ಜನರ ಚಾಮರಾಜನಗರ ತಾಲ್ಲೂಕಿನ 40, ಕೊಳ್ಳೇಗಾಲದ 35, ಯಳಂದೂರು 15, ಗುಂಡ್ಲುಪೇಟೆಯ 11 ಮತ್ತು ಹನೂರು ತಾಲ್ಲೂಕಿನ ಒಂಬತ್ತು ಮಂದಿ ಇದ್ದಾರೆ. ಮೈಸೂರಿನ ಒ‌ಬ್ಬರು ಗುಣಮುಖರಾಗಿದ್ದಾರೆ. 

ಹೋಂ ಐಸೊಲೇಷನ್‌ ಇದ್ದವರ ಪೈಕಿ ಬುಧವಾರ ಎಂಟು ಮಂದಿ ಸೋಂಕು ಮುಕ್ತರಾಗಿದ್ದು, ಈವರೆಗೆ 10 ಮಂದಿ ಗುಣಮುಖರಾಗಿದ್ದಾರೆ. 

27,303 ಮಂದಿ ಮೇಲೆ ನಿಗಾ

ಸೋಂಕಿತರ 12,951 ಪ್ರಾಥಮಿಕ ಸಂಪರ್ಕಿತರು, 14,352 ದ್ವಿತೀಯ ಸಂಪರ್ಕಿತರು ಸೇರಿದಂತೆ 27,303 ಮಂದಿ ಮನೆ ಕ್ವಾರಂಟೈನ್‌ನಲ್ಲಿದ್ದು, ಜಿಲ್ಲಾಡಳಿತ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು