ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 19 ಮಂದಿ ಮನೆಗೆ, 12 ಪ್ರಕರಣ ದೃಢ

ಗುಣಮುಖರಾದವರ ಸಂಖ್ಯೆ 135ಕ್ಕೆ ಏರಿಕೆ, ಮತ್ತೆ ನಾಲ್ವರು ಐಸಿಯುಗೆ ದಾಖಲು
Last Updated 16 ಜುಲೈ 2020, 14:01 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 19 ಮಂದಿ ಕೋವಿಡ್‌–19ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಹೊಸದಾಗಿ 12 ಪ್ರಕರಣಗಳು ದೃಢಪಟ್ಟಿವೆ.

ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳ ಸಂಖ್ಯೆ 217ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 135ಕ್ಕೆ ಹಿಗ್ಗಿದೆ.

ಗುರುವಾರ ವರದಿಯಾದ ಹೊಸ ಪ್ರಕರಣಗಳ ಪೈಕಿ,ಬೆಂಗಳೂರಿನಿಂದ ಬಂದ ಏಳು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೈಸೂರಿನಿಂದ ಬಂದ ಇಬ್ಬರು ಕೋವಿಡ್‌ಗೆ ತುತ್ತಾಗಿದ್ದಾರೆ. ಇನ್ನೊಬ್ಬರು ಸೋಂಕಿತರ ಸಂಪರ್ಕಿತರು. ಇನ್ನಿಬ್ಬರ ಸೋಂಕಿನ ಮೂಲ ತಿಳಿದು ಬಂದಿಲ್ಲ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಐದು, ಕೊಳ್ಳೇಗಾಲದಲ್ಲಿ ನಾಲ್ಕು, ಚಾಮರಾಜನಗರ, ಯಳಂದೂರು ಮತ್ತು ಹನೂರು ತಾಲ್ಲೂಕುಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಗುರುವಾರ ಕೋವಿಡ್‌ ಪ್ರಯೋಗಾಲಯದಲ್ಲಿ 772 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 760 ಮಂದಿಯ ವರದಿ ನೆಗೆಟಿವ್‌ ಬಂದಿದೆ. ಇನ್ನೂ 894 ವರದಿಗಳ ಮಾದರಿಗಳು ಬರಬೇಕಿದೆ.

ಐಸಿಯುನಲ್ಲಿ ಏಳು ಮಂದಿ: ಈ ಮಧ್ಯೆ, ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ನಾಲ್ವರು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದಾರೆ.ಬುಧವಾರ ಐಸಿಯುನಲ್ಲಿ ಮೂವರಿದ್ದರು. ಈಗ ಆ ಸಂಖ್ಯೆ ಏಳಕ್ಕೆ ಏರಿದೆ.

19 ಮಂದಿ ಗುಣಮುಖರಾದವರ ಪೈಕಿ ಕೊಳ್ಳೇಗಾಲ ತಾಲ್ಲೂಕಿನ ಏಳು ಮಂದಿ, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಯಳಂದೂರು ತಾಲ್ಲೂಕುಗಳ ತಲಾ ನಾಲ್ವರು ಇದ್ದಾರೆ. ಯಳಂದೂರು ಆಶ್ರಯ ಬಡಾವಣೆಯ ಎಂಟು ವರ್ಷದ ಹೆಣ್ಣು ಮಗು ಸೋಂಕಿನಿಂದ ಮುಕ್ತವಾದ ಕಿರಿಯ ವ್ಯಕ್ತಿಯಾಗಿದ್ದರೆ, ಗುಂಡ್ಲುಪೇಟೆ ಕಲ್ಲಹಳ್ಳಿಯ 70 ವರ್ಷದ ಮಹಿಳೆ ಹಿರಿಯ ವ್ಯಕ್ತಿ.

ಸೋಂಕಿತರ ವಿವರ

ಗುಂಡ್ಲುಪೇಟೆ ತಾಲ್ಲೂಕು: ಸಂಪಿಗೆಪುರದ 27 ವರ್ಷದ ಯುವಕ, ಬೊಮ್ಮಲಾಪುರದ 24 ವರ್ಷದ ಯುವಕ, ಬೊಮ್ಮಲಾಪುರದ 40 ವರ್ಷದ ಮಹಿಳೆ(ಬೆಂಗಳೂರಿನಿಂದ ಬಂದವರು), ಗುಂಡ್ಲುಪೇಟೆಯ ಅಮೀರ್‌ ಜಾನ್‌ ರಸ್ತೆಯ 10 ವರ್ಷದ ಹೆಣ್ಣುಮಗಳು (ಮೂಲ ಗೊತ್ತಾಗಿಲ್ಲ), ತೆರಕಣಾಂಬಿಯ 52 ವರ್ಷದ ಮಹಿಳೆ (ರೋಗಿ ಸಂಖ್ಯೆ31,244ರ ಸಂಪರ್ಕಿತೆ).

ಕೊಳ್ಳೇಗಾಲ ತಾಲ್ಲೂಕು: ಮಧುವನಹಳ್ಳಿಯ 21 ವರ್ಷದ ಪುರುಷ, ಕೊಳ್ಳೇಗಾಲ ಮೋಳೆಯ 27 ವರ್ಷದ ಮಹಿಳೆ, (ಬೆಂಗಳೂರಿನಿಂದ ಬಂದವರು), ಕೊಳ್ಳೇಗಾಲದ 40 ವರ್ಷದ ಪುರುಷ (ಮೈಸೂರಿನಿಂದ ಬಂದವರು).

ಚಾಮರಾಜನಗರ ತಾಲ್ಲೂಕು: ಅರಳೀಪುರದ 20 ವರ್ಷದ ಯುವತಿ (ಚಾಮರಾಜನಗರ).

ಯಳಂದೂರು ತಾಲ್ಲೂಕು: ಮಾಂಬಳ್ಳಿಯ 35 ವರ್ಷದ ಪುರುಷ (ಮೈಸೂರಿನಲ್ಲಿ ವಾಸವಿದ್ದು, ತಾಲ್ಲೂಕಿಗೆ ಬಂದಿದ್ದಾರೆ).

ಹನೂರು ತಾಲ್ಲೂಕು: ಅಜ್ಜೀಪುರದ 65 ವರ್ಷದ ಮಹಿಳೆ (ಮೂಲ ಗೊತ್ತಾಗಿಲ್ಲ).

3,587 ಮಂದಿ ಮೇಲೆ ನಿಗಾ

ಜಿಲ್ಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ 1,649 ಹಾಗೂ ದ್ವಿತೀಯ ಸಂಪರ್ಕ ಹೊಂದಿದ 1,938 ಮಂದಿ ಸೇರಿ 3,587 ಮಂದಿಯನ್ನು ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT