ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎಸ್‌ಪಿ ಕಾರು ಚಾಲಕ, ಸೆಸ್ಕ್‌ ಲೆಕ್ಕಾಧಿಕಾರಿಗೂ ಸೋಂಕು

ನಾಲ್ಕನೇ ದಿನ ಬಂದ ವರದಿ, 22 ಮಂದಿಗೆ ಕೋವಿಡ್‌–19, ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆ
Last Updated 1 ಜುಲೈ 2020, 15:41 IST
ಅಕ್ಷರ ಗಾತ್ರ

ಚಾಮರಾಜನಗರ: ಗಂಟಲ ದ್ರವದ ಮಾದರಿಯನ್ನು ಕಳುಹಿಸಿದ ನಾಲ್ಕು ದಿನಗಳ ನಂತರ ಬುಧವಾರ ಬೆಂಗಳೂರಿನ ಪ್ರಯೋಗಾಲಯದಿಂದ ಕೋವಿಡ್‌‌–19 ಪರೀಕ್ಷಾ ವರದಿ ಬಂದಿದ್ದು, 22 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಅರ್ಧಶತಕ (54) ದಾಟಿದೆ.

ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರ ಕಾರಿನ ಚಾಲಕ, ಸೆಸ್ಕ್‌ನ ಚಾಮರಾಜನಗರ ವಿಭಾಗದ ಲೆಕ್ಕಾಧಿಕಾರಿ, ಸೆಸ್ಕ್‌ನ ಕಾಶಿಯರ್, ಏಳು ವರ್ಷದ ಬಾಲಕನೊಬ್ಬ‌ ಕೂಡ ಸೋಂಕಿತರ ಪಟ್ಟಿಯಲ್ಲಿ ಸೇರಿದ್ದಾರೆ. ಚಾಲಕನಲ್ಲಿ ಸೋಂಕು ದೃಢಪಟ್ಟಿರುವುದರಿಂದ ಎಸ್‌ಪಿ ಅವರು ಕೆಲವು ದಿನಗಳ ಕಾಲ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಲು ನಿರ್ಧರಿಸಿದ್ದಾರೆ.

‘ಚಾಲಕನಲ್ಲಿ ಕೋವಿಡ್‌–19 ಪತ್ತೆಯಾಗಿರುವುದರಿಂದ ನಾನು ಕೂಡ ಕೋವಿಡ್‌–19 ಪರೀಕ್ಷೆಗಾಗಿ ಗಂಟಲದ್ರವ ನೀಡಲಿದ್ದೇನೆ. ಅದರ ವರದಿ ಬರುವವರೆಗೂ ಮನೆಯಲ್ಲೇ ಇರಲು ತೀರ್ಮಾನಿಸಿದ್ದೇನೆ’ ಎಂದು ಆನಂದ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೆಸ್ಕ್‌ನಲ್ಲಿ ಈಗಾಗಲೇ ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿತ್ತು (ರೋಗಿ ಸಂಖ್ಯೆ 10,631). ಲೆಕ್ಕಾಧಿಕಾರಿ ಹಾಗೂ ಕ್ಯಾಶಿಯರ್‌ ಇಬ್ಬರೂ ಅವರ ಸಂಪರ್ಕಿತರಾಗಿದ್ದರು.

ವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ತಾತ್ಕಾಲಿಕವಾಗಿ ಸ್ಥಗಿತವಾಗಿರುವುದರಿಂದಮೂರು ದಿನಗಳ ಅವಧಿಯಲ್ಲಿ ಬೆಂಗಳೂರು ಪ್ರಯೋಗಾಲಯಕ್ಕೆ 1,684 ಮಾದರಿಗಳನ್ನು ಕಳುಹಿಸಲಾಗಿತ್ತು. ಈ ಪೈಕಿ ಬುಧವಾರ 904 ಮಾದರಿಗಳ ವರದಿ ಬಂದಿದೆ. 22 ಜನರ ವರದಿ ಪೊಸಿಟಿವ್‌ ಆಗಿದ್ದು, 882 ವರದಿಗಳು ನೆಗೆಟಿವ್‌, ಸೋಂಕು ದೃಢಪಟ್ಟ ಒಬ್ಬರು ಬೆಂಗಳೂರಿನವರಾಗಿದ್ದು, ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಂಕು ತಗುಲಿಸಿಕೊಂಡಿರುವ ಜಿಲ್ಲೆಯ 21 ಮಂದಿಯ ಪೈಕಿ 16 ಮಂದಿ ಗುಂಡ್ಲುಪೇಟೆ ತಾಲ್ಲೂಕಿನವರು. ಐವರು ಚಾಮರಾಜನಗರ ತಾಲ್ಲೂಕಿನವರು.

ಗ್ರಾಮಾಂತರಕ್ಕೂ ವ್ಯಾಪಿಸಿದ ಸೋಂಕು: ಬುಧವಾರ ಪತ್ತೆಯಾದ ಪ್ರಕರಣಗಳಲ್ಲಿ ಎರಡು ಪ್ರಕರಣಗಳು ಚಾಮರಾಜನಗರದ ನಾಗವಳ್ಳಿ ತಾಲ್ಲೂಕಿನವರು. ಗುಂಡ್ಲುಪೇಟೆ ತಾಲ್ಲೂಕಿನ ಬರಗಿಯಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ. ಹೀಗಾಗಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕೂ ಕೋವಿಡ್‌–19 ವ್ಯಾಪಿಸಿದಂತಾಗಿದೆ.

ಸೋಂಕು ದೃಢಪಟ್ಟವರ ‌ಮನೆ ಇದ್ದ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸುವ ಕಾರ್ಯವೂ ನಡೆಯುತ್ತಿದೆ.

ಸದ್ಯ ನಗರದ ಕೋವಿಡ್‌–19 ಆಸ್ಪತ್ರೆಯಲ್ಲಿ53 ಮಂದಿಚಿಕಿತ್ಸೆ ಪಡೆಯುತ್ತಿದ್ದು, 317 ಪ್ರಾಥಮಿಕ ಸಂಪರ್ಕಿತರು ಹಾಗೂ 269 ದ್ವಿತೀಯ ಸಂಪರ್ಕಿತರನ್ನು ಮನೆ ಕ್ವಾರಂಟೈನ್‌ನಲ್ಲಿಟ್ಟು ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

ಪೊಲೀಸ್‌ ಇಲಾಖೆಗೆ ಕೋವಿಡ್‌ ಕಾಟ

ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯನ್ನು ಕೋವಿಡ್‌–19 ಕಾಡುತ್ತಿದೆ. ಎಸ್‌ಪಿಯ ಕಾರು ಚಾಲಕ ಸೇರಿದಂತೆ ಇದುವರೆಗೆ ನಾಲ್ವರು ಸಿಬ್ಬಂದಿಗೆ ಸೋಂಕು ತಗುಲಿದೆ.

ಚಾಮರಾಜನಗರ ರಾಮಸಮುದ್ರ ಠಾಣೆಯ ಕಾನ್‌ಸ್ಟೆಬಲ್‌, ಗುಂಡ್ಲುಪೇಟೆಯ ಮಹಿಳಾ ಕಾನ್‌ಸ್ಟೆಬಲ್‌ ಹಾಗೂ ಜಿಲ್ಲೆಯ ವೈರ್‌ಲೆಸ್‌ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಅವರು ಈ ಹಿಂದೆ ಕೋವಿಡ್‌–19ಗೆ ತುತ್ತಾಗಿದ್ದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಾಮರಾಜನಗರದಲ್ಲಿ ‌ಪೊಲೀಸ್‌ ಸಿಬ್ಬಂದಿಗೆ ಬಹುಬೇಗ ತಗುಲಿದೆ. ಉಳಿದ ಕಡೆಗಳಲ್ಲೆಲ್ಲ, ಪ್ರಕರಣಗಳು ವರದಿಯಾಗಲು ಆರಂಭವಾದ ಹಲವು ದಿನಗಳ ನಂತರ, ಕಂಟೈನ್‌ಮೆಂಟ್‌ ವಲಯ, ಆಸ್ಪತ್ರೆಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿಯಲ್ಲಿ ಕಾಣಿಸಿಕೊಂಡಿತ್ತು. ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಎರಡೇ ವಾರದಲ್ಲಿ ಪೊಲೀಸರಲ್ಲೂ ಕಂಡು ಬಂದಿದೆ.

ಎಸ್‌ಪಿ ಅವರ ಕಾರು ಚಾಲಕ ಅನಾರೋಗ್ಯ ಎಂದು ಆರು ದಿನಗಳಿಂದ ರಜೆದಲ್ಲಿದ್ದರು. ಈ ನಡುವೆ ಅವರು ಪರೀಕ್ಷೆಗಾಗಿ ಗಂಟಲದ್ರವ ಮಾದರಿ ನೀಡಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಯೋಗಾಲಯ ಕಾರ್ಯನಿರ್ವಹಣೆಇಂದಿನಿಂದ

ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟ್ಟ ಕಾರಣಕ್ಕೆ ತಾತ್ಕಾಲಿಕವಾಗಿ ಮುಚ್ಚಿದ್ದ ವೈದ್ಯಕೀಯ ಕಾಲೇಜಿನ ಕೋವಿಡ್‌–19 ಪ್ರಯೋಗಾಲಯ ಗುರುವಾರದಿಂದ ಮತ್ತೆ ಕಾರ್ಯನಿರ್ವಹಿಸಲಿದೆ. ಪರೀಕ್ಷಾ ಕಾರ್ಯದಲ್ಲಿ ಕಾಲೇಜಿನ ಸಿಬ್ಬಂದಿಗೆ ಮೈಸೂರಿನ ಪ್ರಯೋಗಾಲಯದ ಸಿಬ್ಬಂದಿಯೂ ನೆರವಾಗಲಿದ್ದಾರೆ.

‘ಗುರುವಾರದಿಂದ ಪ್ರಯೋಗಾಲಯದಲ್ಲಿ ಮತ್ತೆ ಪರೀಕ್ಷೆ ಆರಂಭವಾಗಲಿದೆ. ಬುಧವಾರ ಸಂಗ್ರಹಿಸಿದ ಎಲ್ಲ ಗಂಟಲ ದ್ರವದ ಮಾದರಿಗಳನ್ನು ನಮ್ಮ ಪ್ರಯೋಗಾಲಯಕ್ಕೇ ಕಳುಹಿಸಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT