ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿವಿಪಿ ಹೋರಾಟದಿಂದ ದೇಶದಲ್ಲಿ ಪರ್ಯಾಯ ವ್ಯವಸ್ಥೆ–ಅಶ್ವತ್ಥ ನಾರಾಯಣ

ಎಬಿವಿಪಿಯ 41ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ, ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಬಣ್ಣನೆ
Last Updated 15 ಫೆಬ್ರುವರಿ 2022, 16:56 IST
ಅಕ್ಷರ ಗಾತ್ರ

ಚಾಮರಾಜನಗರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸತತ ಹೋರಾಟದಿಂದಾಗಿ ಜೆಪಿ ಚಳುವಳಿ ಮೂಲಕ ದೇಶದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪುಗೊಂಡಿತು ಎಂದು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಂಗಳವಾರ ಅಭಿಪ್ರಾಯ ಪಟ್ಟರು.

ನಗರದ ನಂದಿ ಭವನದಲ್ಲಿ ಎಬಿವಿಪಿಯ 41ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ’ಈ ದೇಶಕ್ಕೆ ಎಬಿವಿಪಿ ಒಂದು ಶಕ್ತಿ. ಯುವಜನರಲ್ಲಿ ದೇಶಭಕ್ತಿ, ಶಿಸ್ತು, ಸೇವಾ ಮನೋಭಾವ, ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಇದರಲ್ಲಿ ತೊಡಗಿಸಿಕೊಂಡಲು ಎಲ್ಲ ಕಡೆಗಳಲ್ಲೂ ಇದ್ದಾರೆ‘ ಎಂದರು.

ಸಂಘಟನೆಯು ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದೆ. ತುರ್ತು ಪ‍ರಿಸ್ಥಿತಿ ಸಂದರ್ಭದಲ್ಲಿ ಎಬಿವಿಪಿಯ ಕಾರ್ಯಕರ್ತರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೈಲಿಗೆ ಹೋಗಿದ್ದರು. ಈ ದೇಶದಲ್ಲಿ ಪರ್ಯಾಯ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯವಿದೆಯೇ ಎಂಬ ಸಂಶಯ ಇತ್ತು. ಜೆಪಿ ಚಳವಳಿಯು ಹೊಸ ವ್ಯವಸ್ಥೆಗೆ ಕಾರಣವಾಯಿತು. ಎಬಿವಿಪಿ ಇದಕ್ಕಾಗಿ ಸತತ ಹೋರಾಟ ಮಾಡಿತ್ತು‘ ಎಂದರು.

ಭ್ರಷ್ಟಾಚಾರ ವಿರುದ್ಧ ಹೋರಾಡಿ: ಭ್ರಷ್ಟಾಚಾರ ನಮ್ಮ ದೇಶದ ಬಹುದೊಡ್ಡ ಪಿಡುಗು. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣವಾಗಬೇಕು. ಆದರೆ, ಭ್ರಷ್ಟಾಚಾರ ಸಂಸ್ಕೃತಿ ಜಾರಿಯಲ್ಲಿದೆಯೇನೋ ಎಂಬಷ್ಟರ ಮಟ್ಟಿಗೆ ಭ್ರಷ್ಟಾಚಾರ ಇದೆ. ಭ್ರಷ್ಟಾಚಾರ ತೊಡೆದು ಹಾಕುವುದಕ್ಕಾಗಿ ಪ್ರಧಾನಿ ಮೋದಿ ಅವರು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಪ್ರತಿಯೊಂದು ಸೇವೆಯನ್ನೂ ಬೆರಳ ತುದಿಯಲ್ಲಿ ಸಿಗುವಂತೆ ಮಾಡಿದ್ದಾರೆ. ಹಾಗಿದ್ದರೂ ಈ ಸಮಸ್ಯೆ ಪೂರ್ಣವಾಗಿ ಹೋಗಿಲ್ಲ. ಇದರ ವಿರುದ್ಧ ಬಹಳ ಬದ್ಧತೆಯಿಂದ ಹೋರಾಟ ಮಾಡಬೇಕಿದೆ. ಈ ಪ್ರಯತ್ನ ನಿಮ್ಮ ಹೋರಾಟ ಇರಲಿ‘ ಎಂದು ಕರೆ ನೀಡಿದರು.

ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ’ಶಿಕ್ಷಣ ಮತ್ತು ಸ್ಪರ್ಧೆ ಈಗ ದೇಶ, ರಾಜ್ಯ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಜಾಗತಿಕವಾಗಿ ವಿಸ್ತರಿಸಿದೆ. ಯಾವುದೇ ರಾಷ್ಟ್ರದಲ್ಲಿ ಗುಣಮಟ್ಟ ಕಡಿಮೆಯಾಗಬಾರದು. ಮಾರುಕಟ್ಟೆಗೆ ಈಗ ಎಲ್ಲಿಗೂ ಸೀಮಿತವಾಗಿಲ್ಲ. ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಬೇಕು‘ ಎಂದರು.

ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಡಾ.ಛಗನ್‌ ಬಾಯ್‌ ಪಟೇಲ್‌ ಅವರು ಮಾತನಾಡಿ, ’ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಧ್ವಜ, ಒಂದು ಸಂವಿಧಾನ ಜಾರಿಗೆ ಎಬಿವಿಪಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿತ್ತು. ಈಗಿನ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸಿದೆ‘ ಎಂದರು.

ಜಾಗತಿಕವಾಗಿ ಯೋಚಿಸಿ: ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿಜ್ಞಾನಿ ಡಾ.ಎಸ್‌.ಅಯ್ಯಪ್ಪನ್‌ ಅವರು ಮಾತನಾಡಿ, ’ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯಲ್ಲಿ ವಿಫುಲ ಅವಕಾಶಗಳಿವೆ. ಯುವಜನರಿಗೆ ಶಿಕ್ಷಣ ಕಲಿಯಲು ಸುವರ್ಣಾವಕಾಶ ವಿದೆ. ಆಧುನಿಕ ಕಾಲದಲ್ಲಿ ನಾವು ಆವಿಷ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು‘ ಎಂದು ಹೇಳಿದರು.

’ಇವತ್ತು ನಾವು ಎದುರಿಸುತ್ತಿರುವ ಸಮಸ್ಯೆಗಳು ಸ್ಥಳೀಯವಾಗಿಲ್ಲ. ಜಾಗತಿಕವಾಗಿರುವಂತಹದ್ದು. ಪರಿಸರ ಮಾಲಿನ, ಅಪೌಷ್ಟಿಕತೆ, ಹಸಿವು ಜಾಗತಿಕ ಸಮಸ್ಯೆಗಳು. ಹಾಗಾಗಿ ನಾವು ಜಾಗತಿಕವಾಗಿ ಯೋಚಿಸಬೇಕು. ಸ್ಥಳೀಯವಾಗಿ ಕ್ರಮ ಕೈಗೊಳ್ಳಬೇಕು‘ ಎಂದರು.

’ಮಿದುಳು, ಹೃದಯ ಹಾಗೂ ಕೈಗಳು ಒಟ್ಟು ಸೇರಿದರೆ ನಾವು ಯಾವುದೇ ವಿಷಯದಲ್ಲಿ ಯಶಸ್ವಿಯಾಗುತ್ತೇವೆ. ಕಲಿಕೆ ಗಳಿಕೆ ಹಾಗೂ ಉಳಿಕೆಯ ಬಗ್ಗೆ ನಾವು ಯೋಚಿಸಬೇಕು‘ ಎಂದು ಡಾ.ಎಸ್‌.ಅಯ್ಯಪ್ಪನ್‌ ಅವರು ಹೇಳಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಅವರು ಮಾತನಾಡಿದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರತೀಕ ಮಾಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೈಸೂರಿನ ಪ್ರಲಕ್ಷ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕ ನಿರ್ದೇಶಕ ಡಾ.ಮೋಹನ್‌, ಎಬಿವಿಪಿ ರಾಜ್ಯ ಅಧ್ಯಕ್ಷ ಡಾ.ವೀರೇಶ ಬಾಳಿಕಾಯಿ, ಸಮ್ಮೇಳನಾಧ್ಯಕ್ಷೆ ಭಾಗ್ಯಶ್ರೀ ಇದ್ದರು.

’ಧರ್ಮ ಉಳಿಸೋಣ, ಪರಿಸರ ರಕ್ಷಿಸೋಣ‘

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಮಾತನಾಡಿ, ’ನಮ್ಮ ಧರ್ಮವನ್ನು ಉಳಿಸಿ ಬೆಳೆಸಲು ಒಗ್ಗಟ್ಟಾಗಿರಬೇಕು. ದೇಶದಲ್ಲಿ ಆಡಳಿತ ನಡೆಸಿದ ಬ್ರಿಟಿಷರು ಕಡಿಮೆ ಸಂಖ್ಯೆಯಲ್ಲಿದ್ದರು. ನಾವು ಅಷ್ಟೊಂದು ಸಂಖ್ಯೆಯಲ್ಲಿದ್ದರೂ ಅವರು ಆಡಳಿತ ನಡೆಸಿದ್ದಾರೆ. ಕಾರಣ ಒಗ್ಗಟ್ಟಿನ ಕೊರತೆ. ಐದು ಬೆರಳುಗಳು ಒಟ್ಟಾದರೆ ಮುಷ್ಟಿಯಾಗುವುದು. ಅದೇ ರೀತಿ ನಾವು ಧರ್ಮವನ್ನು ರಕ್ಷಿಸಲು ಒಗ್ಗಟ್ಟಾಗಿರಬೇಕು. ನಮ್ಮ ತಾತ (ಜಯ ಚಾಮರಾಕೇಂದ್ರ ಒಡೆಯರ್‌) ಅವರು ಮದ್ರಾಸ್‌ ಗವರ್ನರ್‌ ಆಗಿದ್ದಾಗ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಧರ್ಮವನ್ನು ರಕ್ಷಿಸಬೇಕು. ಎಲ್ಲ ಸಮಸ್ಯೆಗಳ ಪರಿಹಾರ ಹಾಗೂ ಉತ್ತರ ಧರ್ಮದಲ್ಲಿದೆ ಎಂದು ಹೇಳಿದ್ದರು. ಯಾರು ಏನೇ ಹೇಳಲಿ ಅರಮನೆ ಹಿಂದಿನಿಂದಲೂ ಧರ್ಮ ರಕ್ಷಣೆಗಾಗಿ ನಿಂತಿದೆ. ಈಗಲೂ ನಿಲ್ಲುತ್ತದೆ. ಎಲ್ಲರೂ ಒಟ್ಟಾಗಿ ಪರಂಪರೆ ರಕ್ಷಣೆಗೆ ಕೈಜೋಡಿಸೋಣ‘ ಎಂದರು.

’ಇದರ ಜೊತೆಗೆ ಪರಿಸರ ಹಾಗೂ ವನ್ಯಜೀವಿ ಸಂರಕ್ಷಿಸುವ ಅಗತ್ಯವಿದೆ. ಅರಣ್ಯದಿಂದಲೇ ಕೂಡಿರುವ ಚಾಮರಾಜನಗರದಲ್ಲಿ ಇದರ ಅಗತ್ಯ ಹೆಚ್ಚಿದೆ. ಈಗ ಎಲ್ಲಿ ಹೋದರೂ ಪ್ಲಾಸ್ಟಿಕ್‌ ತ್ಯಾಜ್ಯವೇ ಕಾಣಸಿಗುತ್ತದೆ.ಇದನ್ನು ತಡೆಯಬೇಕಾದರೆ ನಮ್ಮ ಹಿಂದಿನವರು ಸಾಮಾನುಗಳನ್ನು ತರಲು ಅಂಗಡಿಗಳಿಗೆ ಹೋದಾಗ ಚೀಲ ಕೊಂಡೊಯ್ಯುತ್ತಿದ್ದರು. ಅದನ್ನು ಮತ್ತೊಮ್ಮೆ ಅನುಸರಿಸಬೇಕಿದೆ. ಆಗ ಪ್ಲಾಸ್ಟಿಕ್ ಹಾವಳಿ ನಿಯಂತ್ರಿಸಬಹುದು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT