ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಉದ್ದೇಶಕ್ಕೆ ಪ್ರತ್ಯೇಕ ಬ್ಯಾಂಕ್ ಖಾತೆ: ಗೀತಾ

Published 18 ಫೆಬ್ರುವರಿ 2024, 5:43 IST
Last Updated 18 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ಚಾಮರಾಜನಗರ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಖರ್ಚನ್ನು ನಿರ್ವಹಿಸಲು ಬ್ಯಾಂಕ್‍ಗಳಲ್ಲಿ ಪ್ರತ್ಯೇಕ ಉಳಿತಾಯ ಖಾತೆಯನ್ನು ತೆರೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಗೀತಾ ಹುಡೇದ ಶುಕ್ರವಾರ ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ‘ಅಭ್ಯರ್ಥಿಗಳು ಪ್ರಚಾರದ ವೇಳೆ ಅಧಿಕ ಹಣ ಖರ್ಚು ಮಾಡುತ್ತಿರುವುದರಿಂದ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಸಮಾನ ಅವಕಾಶಗಳು ದೊರೆಯದೆ ಅಸಮತೋಲನವುಂಟಾಗುತ್ತಿದೆ. ಪ್ರತಿಯೊಬ್ಬ ಅಭ್ಯರ್ಥಿ ಚುನಾವಣೆಗೆ ವ್ಯಯಿಸುವ ದೈನಂದಿನ ಖರ್ಚು-ವೆಚ್ಚದ ನಿಖರ ಲೆಕ್ಕ ದೊರೆಯಲು ಹಾಗೂ ಚುನಾವಣೆಯ ಪಾವಿತ್ರ್ಯ ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು ಎಂದು ಸೂಚನೆ ನೀಡಿದೆ. ಇದರಿಂದ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಲು ಅನುಕೂಲವಾಗಲಿದೆ. ಸಂವಿಧಾನದ 324ನೇ ವಿಧಿಯಲ್ಲಿ ಈ ಬಗ್ಗೆ ನಿರ್ದೇಶನವಿದೆ’ ಎಂದರು.

‘ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ದಿನಕ್ಕೆ ಮುಂಚಿತವಾಗಿ ಖಾತೆ ತೆರೆಯಬೇಕು. ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲಿಖಿತವಾಗಿ ನೀಡಬೇಕು. ಅಭ್ಯರ್ಥಿಯು ಬ್ಯಾಂಕ್ ಖಾತೆಯನ್ನು ತೆರೆಯದಿದ್ದಲ್ಲಿ ಅಥವಾ ಖಾತೆಯ ಮಾಹಿತಿಯನ್ನು ನೀಡದಿದ್ದಲ್ಲಿ ಚುನಾವಣಾಧಿಕಾರಿಗಳಿಂದ ಅಂತಹ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವಂತೆ ನಿರ್ದೇಶನ ನೀಡಲಾಗುವುದು’ ಎಂದರು.

‘ಅಭ್ಯರ್ಥಿಯು ಬ್ಯಾಂಕ್ ಖಾತೆಯನ್ನು ತನ್ನ ಹೆಸರಿನಲ್ಲಿ ಅಥವಾ ತಮ್ಮ ಚುನಾವಣಾ ಏಜೆಂಟ್ ಜೊತೆ ಜಂಟಿ ಖಾತೆಯನ್ನು ತೆರೆಯಬಹುದು. ರಾಜ್ಯದಲ್ಲಿ ಎಲ್ಲಿಯಾದರೂ ತೆರೆಯಬಹುದು. ಖಾತೆಯನ್ನು ಸಹಕಾರಿ ಬ್ಯಾಂಕ್‍ಗಳು, ಅಂಚೆ ಕಚೇರಿಗಳು ಸೇರಿದಂತೆ ಯಾವುದೇ ಬ್ಯಾಂಕ್‍ಗಳಲ್ಲಿ ತೆರೆಯಬಹುದು’ ಎಂದು ತಿಳಿಸಿದರು.

‘ಚುನಾವಣೆಯ ಎಲ್ಲ ವೆಚ್ಚಗಳನ್ನು ಈ ಖಾತೆಯಿಂದಲೇ ನಿರ್ವಹಿಸಬೇಕು. ಅಭ್ಯರ್ಥಿಯು ಚುನಾವಣೆಗೆ ವ್ಯಯಿಸುವ, ಸ್ವೀಕರಿಸುವ ಎಲ್ಲ ಹಣವನ್ನು ಈ ಖಾತೆಗೆ ಜಮಾ ಮಾಡಬೇಕು. ಈ ವಂತಿಗೆಯು ಅಭ್ಯರ್ಥಿಯ ಸ್ವಂತ ಹಣವೂ ಸೇರಿದಂತೆ ಉಳಿದ ಎಲ್ಲ ಮೂಲಗಳಿಂದಲೂ ಬರುವ ಮೊತ್ತವಾಗಿರುತ್ತದೆ. ಬ್ಯಾಂಕ್ ಖಾತೆಯ ಸ್ವಯಂ ದೃಢೀಕೃತ ಪ್ರತಿಯನ್ನು ಅಭ್ಯರ್ಥಿಯು ಚುನಾವಣೆಗೆ ತಗುಲಿದ ವೆಚ್ಚದ ವಿವರಗಳ ಪಟ್ಟಿಯೊಂದಿಗೆ ಚುನಾವಣಾ ಫಲಿತಾಂಶ ಘೋಷಣೆಯಾದ ದಿನದಿಂದ 30 ದಿನದೊಳಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು’ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ ಅಭ್ಯರ್ಥಿ, ಅಭ್ಯರ್ಥಿಯ ಚುನಾವಣಾ ಏಜೆಂಟ್ ಅಥವಾ ಅವರ ಅನುಯಾಯಿಗಳು ₹50 ಸಾವಿರಕ್ಕಿಂತ ಹೆಚ್ಚಿನ ನಗದನ್ನು ಒಯ್ಯುವಂತಿಲ್ಲ’ ಎಂದರು.

ಪಕ್ಷಗಳ ಪ್ರತಿನಿಧಿಗಳಾದ ಎ.ಎಚ್.ನಸ್ರುಲ್ಲಾ ಖಾನ್, ಎಸ್.ಬಾಲಸುಬ್ರಮಣ್ಯಂ, ನಾಗಯ್ಯ, ಎಸ್. ಮಹೇಶ್‍ಗೌಡ, ಚುನಾವಣಾ ಶಿರಸ್ತೇದಾರ್ ಬಸವರಾಜು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಲೆಕ್ಕಾಧೀಕ್ಷಕರಾದ ಪ್ರವೀಣ್ ಪಟೇಲ್, ಜಿಲ್ಲಾ ಪಂಚಾಯಿತಿ ಲೆಕ್ಕಾಧೀಕ್ಷಕರಾದ ಸುರೇಶ್‍ಕುಮಾರ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT