ಗುಂಡ್ಲುಪೇಟೆ: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದರಿಂದ ತಾಲ್ಲೂಕಿನ ಗಡಿಭಾಗ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಪಶು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ತೀವ್ರಗೊಳಿಸಿದ್ದಾರೆ. ಕೇರಳದಿಂದ ಬರುವ ವಾಹನಗಳಿಗೆ ಸ್ಯಾನಿಟೈಸ್ ಮಾಡಿ ತಪಾಸಣೆ ಮಾಡಲಾಗುತ್ತಿದೆ.
ಈ ಕುರಿತು ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಮಾತನಾಡಿ, ಕೇರಳದ ಎರಡು ಜಿಲ್ಲೆಯಲ್ಲಿ ಹಂದಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಂದಿಗಳನ್ನು ಸಾಯಿಸಲು ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಜೊತೆಗೆ ಸಾಗಣೆಯನ್ನು ಕಟ್ಟುನಿಟ್ಟಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಕರ್ನಾಟಕದ ಗಡಿಯಲ್ಲಿಯೂ ಕೂಡ ತಪಾಸಣೆ ಬಿಗಿಗೊಳಿಸಿ, ಕೇರಳದಿಂದ ರಾಜ್ಯ ಪ್ರವೇಶಿಸುವ ಲಾರಿ, ಟೆಂಪೊ, ಗೂಡ್ಸ್ ವಾಹನ ಸೇರಿದಂತೆ ಇನ್ನಿತರ ಹಲವು ವಾಹನಗಳನ್ನು ತಪಾಸಣೆ ನಡೆಸಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಯಾವೊಂದು ಪ್ರಕರಣವೂ ಕೂಡ ಪತ್ತೆಯಾಗಿಲ್ಲ. ಜ್ವರ ಹರಡದಂತೆ ತಡೆಗಟ್ಟಲು ಚೆಕ್ ಪೋಸ್ಟ್ ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಪಶು ಪಾಲನಾ ಇಲಾಖೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿಡಿ ಭೇಟಿ: ರಾಜ್ಯ ಗಡಿ ಮೂಲೆ ಹೊಳೆ ಚೆಕ್‌ಪೋಸ್ಟ್‌ಗೆ ಪಶು ಪಾಲನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಹನುಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯಕ್ಕೆ ಹಂದಿಜ್ವರ ಕಾಲಿಡದಂತೆ ಚೆಕ್‌ಪೋಸ್ಟ್ ಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು. ಪಶುಪಾಲನಾ ಇಲಾಖೆ ಸಿಬ್ಬಂದಿ ಕೃಷ್ಣರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.