ಮಳೆ ಚೆನ್ನಾಗಿ ಬಾರದಿರುವುದರಿಂದ ಇನ್ನೂ ಹಲವು ರೈತರು ಬೆಳೆ ನಾಟಿಗೆ ಮುಂದಾಗಿಲ್ಲ. ರೈತರು ಸಸಿ ಮಡಿಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಭೂಮಿ ಹದ ಮಾಡಲು ತೇವಾಂಶ ಇಲ್ಲ. ಮಳೆ ಕೊರತೆಯಿಂದ ಶ್ರಮ ಪ್ರಧಾನ ರಾಗಿ ಭತ್ತ ಮತ್ತಿತರ ಕಾಳು ಬಿತ್ತನೆಗೆ ಇನ್ನೂ ವಿಳಂಬ ಮಾಡುತ್ತಿದ್ದಾರೆ. ‘ಕೆಲವೆಡೆ ಬೆಳೆ ಸಂರಕ್ಷಿಸಿಕೊಳ್ಳುವ ಸವಾಲು ಎದುರಾಗಿದೆ. ಮಳೆ ಕಾಣದಾಗಿದೆ. ಹಾಗಾಗಿ ತರಾತುರಿಯಲ್ಲಿ ಅವಧಿ ಮೀರಿದ ಸಸಿಗಳ ನಾಟಿಗೆ ಕೃಷಿಕರು ಮುಂದಾಗಿದ್ದಾರೆ. ಡ್ರಂ ಸೀಡರ್ ಮತ್ತು ಎರಚು ಬಿತ್ತನೆ ಮಾಡಿ ವೆಚ್ಚ ತಗ್ಗಿಸುವತ್ತಲೂ ಅನ್ನದಾತರು ದೃಷ್ಟಿ ನೆಟ್ಟಿದ್ದಾರೆ’ ಎಂದು ಅಗರ ರೈತ ಕುಮಾರ್ ಮಾಹಿತಿ ನೀಡಿದರು.