ಭಾನುವಾರ, ಮಾರ್ಚ್ 7, 2021
30 °C

ಹನೂರು: ತಮಿಳು, ಕನ್ನಡ ಶಾಲೆ ಮುಚ್ಚಲು ಹುನ್ನಾರ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹನೂರು ತಾಲ್ಲೂಕಿನ ಒಡ್ಡರದೊಡ್ಡಿ ಗ್ರಾಮದಲ್ಲಿರುವ ಸೇಂಟ್‌ ಮೆರೀಸ್ ತಮಿಳು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೇಂಟ್‌ ಚಾರ್ಲ್ಸ್‌ ಗ್ರಾಮಾಂತರ ಪ್ರೌಢಶಾಲೆಗಳನ್ನು (ಕನ್ನಡ ಮಾಧ್ಯಮ) ಮುಚ್ಚಲು, ಅವುಗಳ ಆಡಳಿತ ಮಂಡಳಿ ಹುನ್ನಾರ ನಡೆಸುತ್ತಿದೆ ಎಂದು ಕರ್ನಾಟಕ ತಮಿಳುಶಾಲೆ ಮತ್ತು ಮಹಾ ವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ ಎ.ಧನಂಜಯನ್‌ ಅವರು ಮಂಗಳವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಸೇಂಟ್ ಮೆರೀಸ್ ತಮಿಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ಮತ್ತು ಸೇಂಟ್‌ ಚಾರ್ಲ್ಸ್‌ ಗ್ರಾಮಾಂತರ ಪ್ರೌಢಶಾಲೆಯಲ್ಲಿ 8ನೇ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳದೆ, ಒತ್ತಾಯದಿಂದ ವರ್ಗಾವಣೆ ಪತ್ರ ನೀಡಲಾಗುತ್ತಿದೆ. ಮಕ್ಕಳ ಪ್ರವೇಶಕ್ಕೆ ಅನುಮತಿ ನೀಡಲೇ ಬೇಕು ಎಂದು ಪೋಷಕರು ಒತ್ತಾಯಿಸಿದಾಗ ಆಡಳಿತ ಮಂಡಳಿಯವರು ಶಾಲಾ ಶುಲ್ಕವನ್ನು ಏಕಾಏಕಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ’ ಎಂದು ಅವರು ದೂರಿದರು.

‘ಒಡ್ಡರದೊಡ್ಡಿಯಲ್ಲಿರುವ ತಮಿಳು ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರದ ಅನುದಾನ ಇದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಖಾಸಗಿ ಶಾಲೆಗಳು. ಮೈಸೂರು ದಿ ಡೈಯೋಸಿಸನ್ ಎಜುಕೇಶನ್ ಸೊಸೈಟಿಯು 25 ವರ್ಷಗಳಿಂದ ಈ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದೆ. ಮಾರ್ಟಳ್ಳಿಯಲ್ಲಿರುವ ಅವರ ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಮಕ್ಕಳು ಹೋಗುವಂತೆ ಮಾಡಲು ಇಲ್ಲಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಮುಚ್ಚಲು ಅದು ಹುನ್ನಾರ ನಡೆಸಿದೆ’ ಎಂದು ಅವರು ಆರೋಪಿಸಿದರು.

‘ಶಾಲೆಯಲ್ಲಿ 6ನೇ ತರಗತಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಹಿಂದೆ ₹3,000 ಶುಲ್ಕ ನಿಗದಿ ಮಾಡಲಾಗಿತ್ತು. ಈಗ ಈ ಶುಲ್ಕವನ್ನು ₹9,027ಕ್ಕೆ ಹೆಚ್ಚಿಸಲಾಗಿದೆ. ಪ್ರೌಢಶಾಲೆಯಲ್ಲಿ 8ನೇ ತರಗತಿಗೆ ಸೇರಲು ಬರುವ ವಿದ್ಯಾರ್ಥಿಗಳಿಂದ ಈ ಹಿಂದೆ ₹6,000 ಶುಲ್ಕ ಪಡೆಯಲಾಗುತ್ತಿತ್ತು. ಈಗ ₹44,250ಕ್ಕೆ ಹೆಚ್ಚಿಸಲಾಗಿದೆ. ಬಡವರೇ ವಾಸಿಸುವ ಆ ಪ್ರದೇಶದಲ್ಲಿ ಇಷ್ಟು ಶುಲ್ಕ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಶಾಲೆಗಳು ಮುಚ್ಚಿದರೆ ಅಲ್ಲಿನ ಮಕ್ಕಳು ಮಾರ್ಟಳ್ಳಿವರೆಗೆ ಬರಬೇಕು. ಐದಾರು ಕಿ.ಮೀ ದೂರ ಇದೆ. ಸರಿಯಾದ ವಾಹನ ಸೌಲಭ್ಯವೂ ಇಲ್ಲ. ಪೋಷಕರಿಗೆ ಹೊರೆಯಾಗಲಿದೆ. ಆದ್ದರಿಂದ ಎರಡೂ ಶಾಲೆಗಳಲ್ಲಿ ಈ ವರ್ಷವೂ ಮಕ್ಕಳಿಗೆ ಪ್ರವೇಶ ಕಲ್ಪಿಸಬೇಕು. ಇಲ್ಲದಿದ್ದರೆ ಸರ್ಕಾರವೇ ಒಡ್ಡರದೊಡ್ಡಿಯಲ್ಲಿ ಶಾಲೆ ಆರಂಭಿಸಬೇಕು’ ಎಂದು ಧನಂಜಯನ್‌ ಒತ್ತಾಯಿಸಿದರು.

‘ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ನ್ಯಾಯಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ’ ಎಂದು ಹೇಳಿದರು.

ಮಾರ್ಟಳ್ಳಿಯ ಕರ್ನಾಟಕ ತಮಿಳರ್‌ ಕಳಂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅರ್ಪುದರಾಜ್, ಮುಖಂಡ ದೇವಸಗಾಯಂ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪೌಲ್ ರಾಜ್, ಒಡ್ಡರದೊಡ್ಡಿಯ ಪೌಲ್ ರಾಜ್ ‌ಇದ್ದರು.

ಕಾವೇರಿಯಿಂದ ನೀರು ಪೂರೈಸಲು ಆಗ್ರಹ 

ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ತಮಿಳರ ಕಳಂನ ಪ್ರಧಾನ ಕಾರ್ಯದರ್ಶಿ ಅರ್ಪುದರಾಜ್‌ ಅವರು, ‘ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಕಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಪ್ರತಿಭಟನೆ ನಡೆಸಿ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಟ್ರ್ಯಾಕ್ಟರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ನಮಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು’ ಎಂದರು. 

‘ಮಾರ್ಟಳ್ಳಿಯಿಂದ 15 ಕಿ.ಮೀ ದೂರದಲ್ಲಿ ಕಾವೇರಿ ನದಿ ಇದೆ. ದಂಟಳ್ಳಿ ಮಾರ್ಗವಾಗಿ ಮಾರ್ಟಳ್ಳಿ ಕಡೆಗೆ ಚಂಗಡಿಹಳ್ಳ ಹಾದು ಬರುತ್ತಿದೆ. ಕಾವೇರಿ ನೀರನ್ನು ಈ ಹಳ್ಳಕ್ಕೆ ಸಂಪರ್ಕ ಕಲ್ಪಿಸುವುದರಿಂದ ಸುಲಭವಾಗಿ ನೀರು ಪೂರೈಸಬಹುದಾಗಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ, ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಿದ್ದೇವೆ. ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು